ಶ್ರೀಶೈಲ ಮಲ್ಲಯ್ಯನ ಭಕ್ತಾದಿಗಳಿಗೆ ಸ್ವಾಮೀಜಿ, ಅಧಿಕಾರಿಗಳ ಸಲಹೆ, ಸೂಚನೆ

ವಿಜಯಪುರ, ಮಾ 22- ಭಕ್ತಾದಿಗಳಿಗೆ ಕಳೆದ ವರ್ಷ ಕೊರೊನಾ ಹಿನ್ನೆಲೆಯಲ್ಲಿ ನಿಷೇಧಿಸಲಾಗಿದ್ದ ಆಂಧ್ರ ಪ್ರದೇಶದ ಶ್ರೀಶೈಲದ ಮಲ್ಲಯ್ಯನ ಜಾತ್ರೆಗೆ ಈ ಬಾರಿ ಅವಕಾಶ ಕಲ್ಪಿಸಲಾಗಿದ್ದು, ಹಲವಾರು ಕಟ್ಟಳೆಗಳನ್ನು ವಿಧಿಸಲಾಗಿದೆ.

ಈ ಬಾರಿ ನಡೆಯಲಿರುವ ಜಾತ್ರೆ ಮತ್ತು ಪಾಲಿಸಬೇಕಾದ ನಿಯಮಗಳ ಕುರಿತು ಶ್ರೀಶೈಲ ಜಗದ್ಗುರುಗಳು ಬಸವನಾಡು ವಿಜಯಪುರದಲ್ಲಿ ಸಭೆ ನಡೆಸಿದ್ದಾರೆ. ಆಂಧ್ರ ಪ್ರದೇಶದ ವಿಶೇಷ ಡೆಪ್ಯೂಟಿ ಕಲೆಕ್ಟರ್ ಕೂಡ ಪಾಲ್ಗೋಂಡಿದ್ದ ಈ ಸಭೆಯಲ್ಲಿ ವಿಜಯಪುರ ನಗರದ ನಾನಾ ಸಂಘಟನೆಗಳು ಮತ್ತು ಶ್ರೀಶೈಲಕ್ಕೆ ಪಾದಯಾತ್ರೆ ನಡೆಸುವ ನಾನಾ ಸಂಘಟನೆಗಳ ಮಖಂಡರೂ ಪಾಲ್ಗೋಂಡಿದ್ದರು.

ಈ ಸಭೆಯಲ್ಲಿ ಮಾತನಾಡಿದ ಆಂಧ್ರ ಪ್ರದೇಶದ ವಿಶೇಷ ಡೆಪ್ಯೂಟಿ ಕಲೆಕ್ಯರ್ ಮತ್ತು ಕಾರ್ಯ ನಿರ್ವಹಣಾಧಿಕಾರಿ ಕೆ. ಎಸ್. ರಾಮರಾವ, ಕೊರೋನಾ ಹಿನ್ನೆಲೆಯಲ್ಲಿ ಶ್ರೀಶೈಲ ದೇವಸ್ಥಾನದ ದರ್ಶನ ಪಡೆಯಲು ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ “ನೋ ಮಾಸ್ಕ ನೋ ಎಂಟ್ರಿ” ನಿಯಮ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದ್ದು, ಭಕ್ತಾದಿಗಳು, ಪಾದಯಾತ್ರಾರ್ಥಿಗಳು ತಪ್ಪದೇ ಮಾಸ್ಕ್ ಧರಿಸಿಕೊಂಡು ದರ್ಶನ ಪಡೆಯುವಂತೆ ಆಂಧ್ರಪ್ರದೇಶ ಸರ್ಕಾರದ ವಿಶೇಷ ಡೆಪ್ಯೂಟಿ ಕಲೆಕ್ಟರ್ ಹಾಗೂ ಕಾರ್ಯನಿರ್ವಹಣಾಧಿಕಾರಿಗಳಾದ ಕೆ.ಎಸ್. ರಾಮಾರಾವ ಅವರು ತಿಳಿಸಿದ್ದಾರೆ.

ನಗರದ ಎ.ಪಿ.ಎಮ್.ಸಿ ಕಲ್ಯಾಣ ಮಂಟಪದಲ್ಲಿ ಇಂದು ಪಾದಯಾತ್ರಾರ್ಥಿಗಳು ಮತ್ತು ಸಾರ್ವಜನಿಕ ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಸಮನ್ವಯ ಸಭೆ ನಡೆಸಿದ ಅವರು ಕಳೆದ ವರ್ಷ ಆಂಧ್ರಪ್ರದೇಶದ ಶ್ರೀಶೈಲ ದೇವಸ್ಥಾನದಲ್ಲಿ ಯುಗಾದಿ ಪ್ರಯುಕ್ತ ನಡೆಯುವ ಜಾತ್ರೆಯನ್ನು ಕೊರೋನಾ ಹಿನ್ನೆಲೆಯಲ್ಲಿ ನಿಬರ್ಂಧಿಸಲಾಗಿತ್ತು. ದೇಶಾದ್ಯಂತ ಪಾದಯಾತ್ರೆ ಮುಖಾಂತರ ಮಲ್ಲಿಕಾರ್ಜುನ ಸ್ವಾಮಿ ದರ್ಶನಕ್ಕೆ ಬಂದಿದ್ದ ಭಕ್ತರು ಸಂಕಷ್ಟ ಎದುರಿಸುವಂತಾಗಿತ್ತು. ಈ ಬಾರಿ ದರ್ಶನ ಪಡೆಯಲು ಯಾವುದೇ ನಿರ್ಬಂಧ ಇಲ್ಲದಿದ್ದರೂ ಕೂಡ ಕೇಂದ್ರ ಸರ್ಕಾರದ ಕೊರೋನಾ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ ಎಂದು ಹೇಳಿದರು.

ಮುನ್ನೆಚ್ಚರಿಕೆಯಾಗಿ ವಿಜಯಪುರ ಜಿಲ್ಲೆಯಿಂದ ಶ್ರೀಶೈಲಕ್ಕೆ ಹೋಗುವ ಪಾದಯಾತ್ರಾರ್ಥಿಗಳು ಮತ್ತು ಭಕ್ತರು ತಪ್ಪದೇ ಕೋವಿಡ್-19 ನೆಗೆಟಿವ್ ಪ್ರಮಾಣ ಪತ್ರ, ಕೋವಿಡ್-19 ಲಸಿಕಾ ಪ್ರಮಾಣ ಪತ್ರ (45 ವರ್ಷದಿಂದ 60 ವರ್ಷದವರು) ತಪ್ಪದೇ ತಮ್ಮೊಂದಿಗೆ ಇಟ್ಟುಕೊಂಡಿರಬೇಕು. 60 ವರ್ಷ ಪೂರ್ಣಗೊಳಿಸಿದ ಹಿರಿಯರು, ಮಹಿಳೆಯರು ಹಾಗೂ ಮಕ್ಕಳು ಶ್ರೀಶೈಲ ಯಾತ್ರೆಯಿಂದ ದೂರ ಉಳಿಯುವುದು ಸೂಕ್ತ ಎಂದಿರುವ ಅವರು ಶ್ರೀಶೈಲಕ್ಕೆ ಭೇಟಿ ನೀಡಿ ದೇವಸ್ಥಾನದ ದರ್ಶನ ಪಡೆದ ತಕ್ಷಣ ಮರಳಿ ತಮ್ಮ ಊರುಗಳಿಗೆ ತೆರಳುವಂತೆ ಅವರು ಮನವಿ ಮಾಡಿದರು.

ಯಾತ್ರಾರ್ಥಿಗಳು ಸೈನಿಟೈಸರ್ ಬಳಸುವ ಮುಖಾಂತರ, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಪಾದಯಾತ್ರೆಯ ಸಾಗುವ ಮಾರ್ಗ ಮಧ್ಯೆ ಭಕ್ತರಿಗೆ ಅನ್ನದಾಸೋಹ ವ್ಯವಸ್ಥೆ, ವೈದ್ಯಕೀಯ ವ್ಯವಸ್ಥೆ, ಭಕ್ತಿ ಸೇವೆಸಲ್ಲಿಸಲು ಯಾವುದೇ ರೀತಿಯ ಅಡ್ಡಿ ಆತಂಕಗಳಿಲ್ಲದಿದ್ದರೂ ಕೂಡ ಕೋವಿಡ್ ನಿಯಮಗಳನ್ನು ಭಕ್ತರು ತಪ್ಪದೇ ಪಾಲಿಸುವಂತೆ ಅವರು ಮನವಿ ಮಾಡಿದ್ದಾರೆ.

  ಸಭೆಯಲ್ಲಿ ಆಶೀರ್ವಚನ ನೀಡಿದ ಶ್ರೀ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಶ್ರೀಶೈಲಪೀಠದ ಪೀಠಾಧ್ಯಕ್ಷರು ಅವರು ಪ್ರತಿ ವರ್ಷದಂತೆ ಶಿವರಾತ್ರಿಯಂದು ನಡೆಯುವ ಎಲ್ಲ ಧಾರ್ಮಿಕ ಕಾರ್ಯಗಳು ಯಾವುದೇ ತೊಂದರೆ ಇಲ್ಲದೆ ನಡೆಯುತ್ತವೆ ಶ್ರೀಶೈಲ ಮಲ್ಲಿಕಾರ್ಜುನ ಜಾತ್ರೆ ನಿಮಿತ್ತ ಯಾವುದೇ ಅಡೆತಡೆಗಳಿಲ್ಲದೆ ಸುಗಮವಾಗಿ ನಡೆಯಲಿದೆ. ಕೊರೋನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ದೇವರ ದರ್ಶನ ಪಡೆಯಬೇಕು. ಯಾವುದೇ ರೀತಿಯ ಅಪಪ್ರಚಾರದ ಬಗ್ಗೆ ಕಿವಿಗೊಡದಂತೆ ತಿಳಿಸಿದ ಅವರು ಸುರಕ್ಷಿತ, ಗೌರವ ನಡೆ ಮೂಲಕ ದೇವರ ದರ್ಶನ ಪಡೆಯಬೇಕು. ನಿಗದಿತ ಕೋವಿಡ್-19 ತಪಾಸಣೆಗೆ ಸಂಬಂಧಪಟ್ಟ ಎಲ್ಲ ಪ್ರಮಾಣ ಪತ್ರಗಳನ್ನು ತಗೆದುಕೊಂಡು ಹೋಗಬೇಕು. ಭಕ್ತಿಭಾವದಿಂದ ಅವಶ್ಯಕ ಮುನ್ನೆಚ್ಚರಿಕೆಗಳೊಂದಿಗೆ ಈ ಯಾತ್ರೆ ಯಶಸ್ವಿಯಾಗಿ ಪೂರ್ಣಗೊಳಿಸುವಂತೆ ಮನವಿ ಮಾಡಿದರು.

     ಈ ವರ್ಷವೂ ರೂಪಾಂತರ ಕರೋನಾ ಭಯದಲ್ಲಿಯೂ ಶ್ರೀಶೈಲ ಜಾತ್ರೆ ನಡೆಯಲಿದ್ದು, ಸೂಕ್ತ ಮುನ್ನೆಚ್ಚರಿಕೆಯೊಂದಿಗೆ ಪಾದಯಾತ್ರೆ ಮುಖಾಂತರ ದರ್ಶನಕ್ಕೆ ಹೋಗಬಹುದು. ರಾಜ್ಯದ ಅನೇಕ ಜಿಲ್ಲೆಗಳಿಂದ ಸೇರಿದಂತೆ ಲಕ್ಷಾಂತರ ಭಕ್ತರ ಪಾದಯಾತ್ರೆ ಮಾಡುತ್ತಾರೆ. ಸುಮಾರು 20 ದಿನಗಳ ವರೆಗೆ ಪಾದಯಾತ್ರೆ ಮಾಡಿ ಶ್ರೀಶೈಲ ತಲುಪಿ ಯುಗಾದಿ ಪುಣ್ಯದಿನದಂದು ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ದರ್ಶನ ಪಡೆಯಲಿದ್ದು, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು.

 ಯುಗಾದಿ ದಿನದಂದು ನಡೆಯುವ ಶ್ರೀಶೈಲ ಜಾತ್ರಾಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಸುಗಮವಾಗಿ ನಡೆಸಲು ದೇವಸ್ಥಾನ ಆಡಳಿತ ಮಂಡಳಿ ಸಿದ್ಧತೆ ಮಾಡಿಕೊಂಡಿದೆ. ಕರೋನಾ ಸಂದರ್ಭದಲ್ಲಿ ನಿರ್ಬಂಧಿಸಲಾದ ಸ್ಪರ್ಶ ದರ್ಶನವನ್ನು  ಈ ವರ್ಷವೂ ಕೂಡ ದೇವಸ್ಥಾನದ ಸ್ಪರ್ಶ ದರ್ಶನವು ಮಾಡಲಿಕ್ಕೆ ಅವಕಾಶ ಇಲ್ಲ. ಹಾಗೂ ಪಾತಾಳ ಗಂಗೆಯಲ್ಲಿ ಸ್ನಾನ  ಮಾಡಲು ಕೂಡ ಅವಕಾಶವಿಲ್ಲ  ಎಂದು ಅವರು ತಿಳಿಸಿದರು .

ಈ ಸಂದರ್ಭದಲ್ಲಿ ರೇಣುಕಾಚಾರ್ಯ ಜೈನಾಪೂರ, ಕರಬಂಟನಾಳದ ಶಿವಕುಮಾರ ಮಹಾಸ್ವಾಮಿಗಳು, ರವೀಂದ್ರ ಬಿಜ್ಜರಗಿ ಉಪಸ್ಥಿತರಿದ್ದರು. ಶ್ರೀ ನೀಲಕಂಠೇಶ್ವರ ಪಾದಯಾತ್ರಾ ಸಮಿತಿ ಮತ್ತು ಸಿದ್ಧರಾಮೇಶ್ವರ ಪಾದಯಾತ್ರಾ ಕಮೀಟಿ ಹಾಗೂ ಮರ್ಚಂಟ್ಸ್ ಅಸೋಶಿಯೇಶನ್ ಅವರ ನೆರವಿನೊಂದಿಗೆ ಈ ಸಭೆ ಆಯೋಜಿಸಲಾಗಿತ್ತು.

Leave a Reply

ಹೊಸ ಪೋಸ್ಟ್‌