ಭೂಮಿಯ ಸುತ್ತಲೂ ಭೂಮಿಯ 3 ಪಟ್ಟು ನೀರಿದೆ. ಮನುಷ್ಯನ ಶರೀರದಲ್ಲಿಯೂ 1/3 ನೀರು ಸೇರಿದೆ.
ಪಂಚ ಮಹಾಭೂತಗಳಲ್ಲಿ ನೀರು ಕೂಡ ಇದೆ.
ಶತಶತಮಾನಗಳಿಂದ ದಣಿದು ಬಂದವರಿಗೆ ದಾಹ ತಣಿಸಲು ನೀರನ್ನು ಕೊಡುವುದು ಶ್ರೇಷ್ಠ ಎಂದು ಭಾವಿಸಿದ್ದರು.
ಸಾಮ್ರಾಟ್ ಅಶೋಕನ ಕಾಲದಲ್ಲಿ ಎಲ್ಲ ಮಾರ್ಗಗಳಲ್ಲಿಯೂ ಅರವಟ್ಟಿಗೆಗಳನ್ನು ಸ್ಥಾಪಿಸಿದ್ದರು. ಇತ್ತೀಚಿನವರೆಗೂ ನಮ್ಮ ಹಿರಿಯರು ಮಾರ್ಗಮಧ್ಯೆ ಗಳಲ್ಲಿ ಬೇಸಿಗೆಯಲ್ಲಿ ಅಲ್ಲಲ್ಲಿ ನೀರಿನ ವ್ಯವಸ್ಥೆ ಮಾಡಿ ದಾರಿಹೋಕರಿಗೆ ಅನುಕೂಲ ಕಲ್ಪಿಸಿದ್ದರು.
ಬಸ್ ನಿಲ್ದಾಣ ರೈಲ್ವೆ ಸ್ಟೇಷನ್ ಸೇರಿದಂತೆ ಗಲ್ಲಿ- ಗಲ್ಲಿಗಳಲ್ಲಿಯೂ ವಿವಿಧ ಸಂಘ ಸಂಸ್ಥೆಯವರು, ದಾನಿಗಳು ಅರವಟ್ಟಿಗೆಗಳನ್ನು ಆರಂಭಿಸಿದ್ದರು.
ಅಂದು ಎಂದು ನೀರು ಮಾರಾಟದ ವಸ್ತುವಾಗಿರಲಿಲ್ಲ, ನೀರನ್ನು ಮಾರುವದು ಪಾಪಕರ.ಬಾಯಾರಿದವನಿಗೆ ನೀರು ಕುಡಿಸುವುದು ನಮ್ಮ ಧರ್ಮ ಎಂದು ಶತಶತಮಾನಗಳಿಂದ ನಾವು ಆಚರಿಸಿಕೊಂಡು ಬಂದ ಕಾಲದಲ್ಲಿ… ರಿವರ್ಸ್ಒಸ್ಮೋಸಿಸ್ ಎಂಬ ತಂತ್ರಜ್ಞಾನವನ್ನು ನಾವು ತಂದಿದ್ದೇವೆ ನಿಮ್ಮ ಮನೆಗಳಲ್ಲಿ ಈ ಆರ್. ಓ ಮಸೀನಗಳನ್ನು ಕೂಡಿಸುತ್ತೇವೆ. ಶುದ್ಧ ನೀರನ್ನು ಕೊಡುತ್ತೇವೆ ಎಂದು ಕಂಪನಿಗಳು ತಮ್ಮ ಲಾಭಕ್ಕಾಗಿ ಇಲ್ಲದ ತಂತ್ರಜ್ಞಾನದ ಹೆಸರಿನಲ್ಲಿ ಪ್ರಚಾರ ಆರಂಭಿಸಿದವು.
ಆವಾಗ ನೀರು ಮಾರಾಟದ ವಸ್ತುವಾಯಿತು. ಅರವಟ್ಟಿಗೆಗಳು ನಿಂತುಹೋದವು…
ನೀರನ್ನು ಮಾರುವದು ಪಾಪವಾಗದೇ.. ಅದು ಗಳಿಕೆ ವಸ್ತುವಾಯಿತು.
ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಾಟಲಿಗಳು ಕಾಲಿಟ್ಟವು.. ಮದುವೆ ಮುಂಜುವೆ ನಾಮಕರಣ ಅಂತ್ಯಸಂಸ್ಕಾರ ಎಲ್ಲೆಲ್ಲೂ ಪ್ಲಾಸ್ಟಿಕ್ ಬಾಟಲ್ ಗಳಲ್ಲಿರುವ (ವಿಷಯುಕ್ತ) ಶುದ್ಧಹೆಸರಿನಬ್ರಾಂಡ್ ನೀರು ವಿಜೃಂಭಿಸತೊಡಗಿತು.
ಯಾವುದೇ ವಸ್ತು ಮಾರಾಟವಾಗಬೇಕಾದರೆ ಮಾರುಕಟ್ಟೆಯಲ್ಲಿ ಆ ವಸ್ತುವಿಗೆ ಬೇಡಿಕೆ ಬೇಕು.
ಹೊಸ ವ್ಯಾಪಾರಿ ನಿಯಮದ ಪ್ರಕಾರ “ಮಾರುಕಟ್ಟೆ ಇಲ್ಲದೆಯೂ.. ಬೇಡಿಕೆ ಇಲ್ಲದೆಯೂ.. ಜನರಲ್ಲಿ ಭಯವನ್ನು ಸೃಷ್ಟಿಸಿ ಇದನ್ನು ಅನಿವಾರ್ಯವೆಂಬಂತೆ ಬಿಂಬಿಸಿದಾಗ ನಾವು ನಮ್ಮ ಎಲ್ಲಾ ವಸ್ತುಗಳನ್ನು ಮಾರಬಹುದು” ಎಂಬ ಹೊಸ ಕಲ್ಪನೆಯನ್ನು ಹುಟ್ಟುಹಾಕಿದರು.
ಇವತ್ತು ಅಂತಹ ಕಂಪನಿಗಳ ಆವಿಷ್ಕಾರಗಳೇ ನಮ್ಮನ್ನು ಆಳತೊಡಗಿವೆ.ಇದರಲ್ಲಿ ರಿವರ್ಸ್ ಆಸ್ಮೋಸಿಸ್ ಅಥವಾ ಆರ್. ಓ ತಂತ್ರಜ್ಞಾನವು ಕೂಡ.
ಇಂದು ವಿಶ್ವಜಲದಿನ
ಪ್ರಕೃತಿಯಲ್ಲಿ ಹೇರಳವಾಗಿ ಲಭ್ಯವಾಗುವ ನೀರನ್ನು ನಾವು ನಮ್ಮ ಸ್ವಾರ್ಥದಿಂದ ಕಲುಷಿತ ಗೊಳಿಸಿ ಶುದ್ಧ ನೀರಿಗಾಗಿ ಪ್ಲಾಸ್ಟಿಕ್ ಬಾಟಲಿ ಹಿಡಿಯುತ್ತಿದ್ದೇವೆ.
ಧಾರವಾಡದ ವಾಲ್ಮಿ (ನೆಲ ಮತ್ತು ಜಲ ಸಂಸ್ಥೆ) ನಿರ್ದೇಶಕ ಹಿರಿಯ ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ.ರಾಜೇಂದ್ರಪೊದ್ದಾರ ಜೊತೆ ನಾನು ಈ ಹಿಂದೆ ವಿಶ್ವ ಜಲ ಸಮ್ಮೇಳನದಲ್ಲಿ ಭಾಗವಹಿಸಲು ಸ್ವೀಡನ್ ಸೇರಿದಂತೆ 3-4 ದೇಶದ ಸುತ್ತಾಡಿದ್ದೆ. ಅವರಂತೂ ಪ್ಲಾಸ್ಟಿಕ್ ಬಾಟಲಿಯ ನೀರನ್ನು ಮುಟ್ಟಲಿಲ್ಲ.ತಮ್ಮಲ್ಲಿರುವ ಥರ್ಮಾಸ ಬಾಟಲಿಯಲ್ಲಿ ಅಲ್ಲಲ್ಲಿ ನೀರು ತುಂಬಿಸಿಕೊಳ್ಳುತ್ತಿದ್ದರು.
ಇವರೇ ನಮಗೆ ಮಾದರಿ ಅಲ್ಲವೇ?