ಕೊರೊನಾ 2ನೇ ಅಲೆ ಆತಂಕ- ಜಿಲ್ಲಾಧಿಕಾರಿಯಿಂದ ಮುನ್ನೆಚ್ಚರಿಕೆಗೆ ಸೂಚನೆ

ವಿಜಯಪುರ, ಮಾ. 23- ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕೊರೊನಾ 2ನೇ ಅಲೆ ಕಂಡು ಬರುತ್ತಿದ್ದು, 2ನೇ ಅಲೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಸೂಚನೆ ನೀಡಿದ್ದಾರೆ.

ಮಾ. 15 ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ವಿಡಿಯೋ ಸಂವಾದ ಸಭೆಯಲ್ಲಿ ಕೋವಿಡ್ ನಿಯಂತ್ರಣ ಕುರಿತು
ಅಗತ್ಯ ಮುಂಜಾಗ್ರತಾ ಕ್ರಮಗಳಾದ ಫೇಸ್ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ನಿರ್ದೇಶಿಸಿದ್ದು, ಈ ಹಿನ್ನೆಲೆಯಲ್ಲಿ
ಮತ್ತೊಮ್ಮೆ ಸಾರ್ವಜನಿಕರು ಈ ಸೂಚನೆಗಳನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಅವರು ತಿಳಿಸಿದ್ದಾರೆ.
ಮುಖದ ಹೊದಿಕೆ (ಮಾಸ್ಕ) : ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಕೆಲಸದ ಸ್ಥಳಗಳಲ್ಲಿ ಮತ್ತು ಪ್ರಯಾಣದ ಸಮಯದಲ್ಲಿ ಮುಖದ ಹೊದಿಕೆಯನ್ನು ಧರಿಸುವುದು ಕಡ್ಡಾಯವಾಗಿದೆ. ಅಗತ್ಯಾನುಸಾರ ಸರಿಯಾಗಿ ಮುಖದ ಹೊದಿಕೆಯನ್ನು ಧರಿಸದಿದ್ದಲ್ಲಿ ಮಹಾನಗರ ಪಾಲಿಕೆ ಪ್ರದೇಶಗಳಲ್ಲಿ ರೂ. 250 ಮತ್ತು ಇನ್ನುಳಿದ ಪ್ರದೇಶಗಳಲ್ಲಿ ರೂ. 100 ದಂಡ ವಿಧಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಪ್ರತಿಯೊಬ್ಬರೂ ಸಾರ್ವಜನಿಕ ಸ್ಥಳಗಳಲ್ಲಿ ಕನಿಷ್ಠ ಆರು ಅಡಿ ಅಂತರವನ್ನು ಎರಡು ಗಜಗಳ ಅಂತರವನ್ನು ಕಾಪಾಡಿಕೊಳ್ಳಬೇಕು. ಗ್ರಾಹಕರಲ್ಲಿ ದೈಹಿಕ ಅಂತರ ಇರುವುದನ್ನು ಅಂಗಡಿಗಳ ಮಾಲೀಕರು ಖಚಿತಪಡಿಸಿಕೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಉಗಿಯುವುದು ಅಪರಾಧವಾಗಿದ್ದು, ಇದಕ್ಕೆ ದಂಡ ವಿಧಿಸಲಾಗುತ್ತದೆ. ಸ್ಥಳೀಯ ಪ್ರಾಧಿಕಾರಗಳು ಕಾನೂನು, ನಿಯಮ ಮತ್ತು ನಿಬಂಧನೆಗಳಿಗೆ ಅನುಸಾರವಾಗಿ ದಂಡ ನಿಗದಿ ಪಡಿಸಬಹುದಾಗಿದೆ. ದಂಡ ವಿಧಿಸಲು ಮಹಾನಗರ ಪಾಲಿಕೆ, ನಗರ ಮತ್ತು ಸ್ಥಳೀಯ ಸಂಸ್ಥೆಗಳು, ಪೊಲೀಸ್ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಇಲಾಖೆ ಇವರನ್ನು ಸಕ್ಷಮ ಪ್ರಾಧಿಕಾರಗಳನ್ನಾಗಿ ಅಧಿಕೃತಗೊಳಿಸಲಾಗಿದೆ.
ಕಾರಣ ಸಾರ್ವಜನಿಕರು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಲು ಆ ಮೂಲಕ ಕೋವಿಡ್-19 ಹರಡುವುದನ್ನು ತಡೆಗಟ್ಟಲು
ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಮನವಿ ಮಾಡಿದ್ದಾರೆ.

Leave a Reply

ಹೊಸ ಪೋಸ್ಟ್‌