ವಿಜಯಪುರ, ಮಾ 23 : ವಿಶ್ವ ಕ್ಷಯ ರೋಗ ದಿನದ ಅಂಗವಾಗಿ ಮಾ. 24 ರಂದು ಬುಧವಾರ ಜಿಲ್ಲಾಡಳಿತ ಹಾಗೂ ಜಿಲ್ಲಾ ಕ್ಷಯ ರೋಗ ನಿರ್ಮೂಲನಾ ಅಧಿಕಾರಿಗಳ ಕಾರ್ಯಾಲಯದಿಂದ ದೇಶ ಗೆಲ್ಲಿಸಿ, ಟಿಬಿ ಸೋಲಿಸಿ ಜನಜಾಗೃತಿ ಅಭಿಯಾನ ನಡೆಯಲಿದೆ. ಅಲ್ಲದೇ, ಜಿಲ್ಲೆಯಲ್ಲಿರುವ ಆಲಮಟ್ಟಿ ಜಲಾಷಯ, ಗೋಲಗುಂಬಜ್, ಜಿಲ್ಲಾಧಿಕಾರಿಗಳ ಕಾರ್ಯಾಲಯ, ಜಿಲ್ಲಾಸ್ಪತ್ರೆ ಮತ್ತು ಎಲ್ಲ ತಾಲೂಕಾಸ್ಪತ್ರೆಗಳ ಮೇಲೆ ಒಂದು ದಿನ ಕೆಂಪು ದೀಪದ ಬೆಳಕು ಚೆಲ್ಲುವ ಮೂಲಕ ಜನರನ್ನು ಆಕರ್ಷಿಸಿ ವಿಶೇಷವಾಗಿ ಆಚರಿಸಲಾಗುವುದು ಎಂದು ವಿಜಯಪುರ ಜಿಲ್ಲಾ ಕ್ಷಯ ವೇದಿಕೆ ಅಧ್ಯಕ್ಷ ಮತ್ತು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ತಿಳಿಸಿದ್ದಾರೆ.
ಅದೇ ರೀತಿ, ಆಡಿಯೋ ವಿಡಿಯೋ, ಜಿಂಗಲ್ಸ್ಗಳನ್ನು ಆಲಮಟ್ಟಿ ಡ್ಯಾಮ್ಸೈಟ್ನಲ್ಲಿ ಜಿಲ್ಲೆಯ ವಿವಿಧ ಬಸ್ ನಿಲ್ದಾಣಗಳಲ್ಲಿ ಹಾಗೂ ಇತರೆ ಜನನಿಬಿಡ ಪ್ರದೇಶಗಳಲ್ಲಿ ಪ್ರಸಾರ ಮಾಡಲು ಕ್ರಮಕೈಗೊಳ್ಳಲಾಗಿದೆ. ಅಲ್ಲದೇ, ಅಚೋ ಮತ್ತು ಟಾಂಗಾ ಜಾಥಾಗಳನ್ನು ಏರ್ಪಡಿಸಲಾಗಿದೆ. “ದೇಶ ಗೆಲ್ಲಿಸಿ ಟಿಬಿ ಸೋಲಿಸಿ” ಜನಜಾಗೃತಿ ಅಭಿಯಾನದ ಅಂಗವಾಗಿ ಕಾರ್ಮಿಕ ಇಲಾಖೆ ಹಾಗೂ ಕೈಗಾರಿಕಾ ಇಲಾಖೆಗಳ ಸಹಯೋಗದೊಂದಿಗೆ ಎಲ್ಲಾ ಕಾರ್ಮಿಕರಿಗೆ ಕ್ಷಯ ರೋಗದ ಬಗ್ಗೆ ತಿಳುವಳಿಕೆ ಹಾಗೂ ತಪಾಸಣೆ ಮಾಡಲಾಗಿದೆ. ವಿಜಯಪುರ ನಗರದ ಪೌರ ಕಾರ್ಮಿಕರಿಗೆ ತಿಳುವಳಿಕೆ ಹಾಗೂ ತಪಾಸಣೆ ಮಾಡುವುದು, ಜನಸಂದಣಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿ ಹಾಗೂ ಇತರೆ ಇಲಾಖೆಗಳಿಗೆ ಎಲ್ಲಾ ಸಿಬ್ಬಂದಿಗಳಿಗೆ ಹಂತ ಹಂತವಾಗಿ ತಪಾಸಣೆ ಹಾಗೂ ತಿಳುವಳಿಕೆ ಕಾರ್ಯಕ್ರಮ ಮಾಡಲಾಗುವುದು ಎಂದು ಅವರು ತಿಳಿಸಿದರು.
ಕ್ಷಯರೋಗದಿಂದ ಆರೋಗ್ಯ, ಸಾಮಾಜಿಕ ಮತ್ತು ಆರ್ಥಿಕ ವಿನಾಶಕಾರಿ ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ಜಾಗೃತಿಕ ಟಿಬಿ ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸುವ ಪ್ರಯತ್ನಗಳನ್ನು ಹೆಚ್ಚಿಸಲು ಪ್ರತಿ ವರ್ಷ ಮಾ. 24ರಂದು ವಿಶ್ವ ಕ್ಷಯ (ಟಿಬಿ) ದಿನವೆಂದು ಸ್ಮರಿಸುತ್ತೇವೆ. ಜರ್ಮನ್ ದೇಶದ ವಿಜ್ಞಾನಿ ಹಾಗೂ ವೈದ್ಯಕೀಯ ಸಂಶೋಧಕರಾದ ಡಾ. ರಾಬರ್ಟ್ ಕಾಕ್ ಅವರು 24, ಮಾರ್ಚ್ 1882 ರಲ್ಲಿ ಟಿಬಿಗೆ ಕಾರಣವಾಗುವ ಬ್ಯಾಕ್ಟೀರಿಯಂ ಕಂಡುಹಿಡಿದಿದ್ದಾರೆ ಈ ರೋಗವನ್ನು ಪತ್ತೆ ಹಚ್ಚಿ ಮತ್ತು ಗುಣಪಡಿಸಲು ದಾರಿ ತೆರೆಯಿತು. ಕ್ಷಯವು ವಿಶ್ವದ ಮಾರಕ ಸಾಂಕ್ರಾಮಿಕ ರೋಗವಾಗಿದ್ದು ಜಾಗತಿಕವಾಗಿ ಪ್ರತಿ ಮೂರು ನಿಮಿಷಕ್ಕೆ ಒಂದು ಮರಣವಾಗುತ್ತಿದ್ದು, ಸುಮಾರು 60 ಸಾವಿರಕ್ಕೂ ಹೆಚ್ಚು ಜನರು ಸೋಂಕಿಗೆ ಜಾಗತಿಕವಾಗಿ ತುತ್ತಾಗುತ್ತಿದ್ದಾರೆ. ಬಡತನ, ಅಪೌಷ್ಟಿಕತೆ, ಅಜ್ಞಾನ, ಪರಿಸರ ಮಾಲಿನ್ಯ, ಎಲ್ಲೆಂದರಲ್ಲಿ ಉಗುಳುವ,ಸೀನುವ, ಕೆಮ್ಮುವ ಅಭ್ಯಾಸ ಹೊಂದಿದವರು, ಕೈಗಾರಿಕೀಕರಣ, ಬಿಡಿ, ಸಿಗರೇಟ್, ತಂಬಾಕು ಸೇವನೆ,ಮದ್ಯಪಾನ, ದುರ್ವೇಸನಿಗಳು ಪ್ರದೇಶದ ಜನರು ಈ ರೋಗದ ಪ್ರಮುಖ ಕಾರಣಗಳಾಗಿವೆ. ಉಗುರು ಕೂದಲುಗಳನ್ನು ಹೊರತುಪಡಿಸಿ ಶರೀರದ ಎಲ್ಲಾ ಭಾಗಕ್ಕೂ ಈ ಕಾಯಿಲೆ ತಗಲುತ್ತದೆ ಎಂದು ಅವರು ತಿಳಿಸಿದರು.
ಕ್ಷಯರೋಗ ತಡೆಗಟ್ಟಬಹುದಾದ ಮತ್ತು ಗುಣಪಡಿಸಬಹುದಾದ ಕಾಯಿಲೆಗೆ ಸರಕಾರವು ವಿಶೇಷ ಆಸಕ್ತಿ ಹೊಂದಿ ‘ಕ್ಷಯಮುಕ್ತ ಭಾರತ 2025’ಎಂಬ ಘೋಷಣೆಯೊಂದಿಗೆ ಹಲವಾರು ಸುಧಾರಣೆಗಳನ್ನು ಹಾಗೂ ಯೋಜನೆಗಳನ್ನು ಈ ಕಾರ್ಯಕ್ರಮದಲ್ಲಿ ಅಳವಡಿಸಿದೆ.
ಜಿಲ್ಲೆಯಲ್ಲಿ ಸಂಭವನೀಯ ಪ್ರಕರಣಗಳನ್ನು ಶೀಘ್ರ ಪತ್ತೆ ಹಚ್ಚಲು ಪ್ರತಿ 2 ಲಕ್ಷ ಜನಸಂಖ್ಯೆಗೆ ಒಂದು ಕ್ಷಯ ಘಟಕ, ನಮ್ಮ ಜಿಲ್ಲೆಯಲ್ಲಿ ಒಟ್ಟು 12 ಕ್ಷಯ ಘಟಕಗಳು ಕಾರ್ಯನಿರ್ವಹಿಸುತ್ತವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಕ್ಷಯರೋಗ ನಿರ್ಮೂಲನೆಗೆ ‘ಕಾಲ ಘಟಿಸುತ್ತಿದೆ ‘ ಎಂಬ ಘೋಷ ವಾಕ್ಯದೊಂದಿಗೆ ವಿಶ್ವ ಕ್ಷಯರೋಗ ದಿನವೆಂದು ಸ್ಮರಿಸುತ್ತಾ ನಾವೆಲ್ಲರೂ ‘ಕ್ಷಯರೋಗ ಮುಕ್ತ ವಿಜಯಪುರಕ್ಕಾಗಿ ಶ್ರಮಿಸೋಣ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ತಿಳಿಸಿದರು.