ದೌರ್ಜನ್ಯಕ್ಕೊಳಗಾದ ಪರಿಶಿಷ್ಟರಿಗೆ ರೂ. 75.36 ಲಕ್ಷ ಪರಿಹಾರ ಧನ ವಿತರಣೆ- ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ

ವಿಜಯಪುರ, ಮಾ. 24– ದೌರ್ಜನ್ಯ ಪ್ರಕರಣಗಳಲ್ಲಿ ನೊಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಂತ್ರಸ್ತರಿಗೆ ಜಿಲ್ಲಾಡಳಿತದಿಂದ ಒಟ್ಟು ರೂ. 75.36 ಲಕ್ಷ ಪರಿಹಾರ ಧನ ವಿತರಿಸಲಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೌರ್ಜನ್ಯ ಪ್ರಕರಣಗಳಲ್ಲಿ ನೊಂದ ಒಟ್ಟು 59 ಪ್ರಕರಣಗಳ ಪೈಕಿ 48 ಪ್ರಕರಣಗಳಲ್ಲಿ ಜಿಲ್ಲೆಯಲ್ಲಿ 2020 ರ ಏ. 1 ರಿಂದ 2021ರ ಫೆ. 28ರ ವರೆಗೆ ಒಟ್ಟು ರೂ. 75.36 ಲಕ್ಷ ಪರಿಹಾರ ಧನ ವಿತರಿಸಲಾಗಿದೆ. ಇನ್ನುಳಿದ 10 ಪ್ರಕರಣಗಳ ಸಂತ್ರಸ್ತರಿಗೆ ಪರಿಹಾರ ಧನ ವಿತರಣೆಗೆ ಕ್ರಮಕೈಗೊಳ್ಳಲಾಗುತ್ತದೆ ಎಂದು ಸಭೆಯಲ್ಲಿ ಅಧಿಕಾರಿಗಳು ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ಸಾಲ ಸೌಲಭ್ಯ ಕೋರಿ ನಾನಾ ಬ್ಯಾಂಕ್‌ಗಳಿಗೆ ಹೋದ ಸಂದರ್ಭದಲ್ಲಿ ಸಕಾಲಕ್ಕೆ ಈ ಸೌಲಭ್ಯ ಕಲ್ಪಿಸಿ ಅರ್ಹ ಫಲಾನುಭವಿಗಳಿಗೆ ನೆರವಾಗುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ನಾನಾ ಬ್ಯಾಂಕುಗಳಿಗೆ ಸಾಲ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳ ಬಗ್ಗೆ ಪರಿಶೀಲಿಸಿ ಸಕಾಲಕ್ಕೆ ಅವರಿಗೆ ಸ್ಪಂದಿಸುವಂತಾಗಬೇಕು. ನಾನಾ ಬ್ಯಾಂಕುಗಳ ಮೂಲಕ ಸಕಾರಾತ್ಮಕ ಸ್ಪಂದನೆಯಾಗುವಂತೆ ನೋಡಿಕೊಳ್ಳಬೇಕು. ಇದರಲ್ಲಿ ಯಾವುದೇ ರೀತಿಯ ಲೋಪವನ್ನು ಸಹಿಸಲಾಗುವುದಿಲ್ಲ ಮತ್ತು ತಪ್ಪಿತಸ್ಥರ ವಿರುದ್ಧ ಕಾನೂನಿನ ರೀತ್ಯ ಕ್ರಮಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಡಾ. ಬಿ.ಯ ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ವ್ಯಾಪ್ತಿಯಲ್ಲಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳು ಪಾರದರ್ಶಕ ರೀತಿಯಲ್ಲಿ ದೊರೆಯುವಂತೆ ನೋಡಿಕೊಳ್ಳಬೇಕು. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಈಗಾಗಲೇ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮರಾ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗಿದೆ. ಭೂ ಒಡೆತನ ಯೋಜನೆ ಸೇರಿದಂತೆ ವೈಯಕ್ತಿಕ ಸೌಲಭ್ಯಗಳ ಬಗ್ಗೆ ಕಾನೂನಿನ ರೀತ್ಯ ಸೌಲಭ್ಯ ಕಲ್ಪಿಸಲು ಕ್ರಮಕೈಗೊಳ್ಳಬೇಕು. ಮಧ್ಯವರ್ತಿಗಳ ಹಾವಳಿ ಸೇರಿದಂತೆ ಸಾಕ್ಷಾಧಾರ ಆಧಾರಿತ ದೂರು ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದರು.

ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಸಭೆ.


11 ಕೆವಿ ಅತಾಲಟ್ಟಿ ಐಪಿ ಫೀಡರ್‌ನ ಭಾಗಶಃ ಭಾರವನ್ನು 11 ಕೆವಿ ಮಹಾಲ್ ಬಾಗಾಯತ್ ಐಪಿ ಫೀಡರ್ ಮೇಲೆ ವರ್ಗಾಯಿಸುವ ಮೂಲಕ ಯಾವುದೇ ಅಡಚಣೆ ಉಂಟಾಗದಂತೆ ಸಮಸ್ಯೆಗೆ ಪರಿಹಾರ ಒದಗಿಸಲಾಗಿದೆ ಎಂದು ತಿಕೋಟಾ ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಕುರಿತು ಪರಿಶೀಲನೆ ನಡೆಸುವಂತೆ ಹಾಗೂ ನಾಗೂರ ಗ್ರಾಮದಲ್ಲಿ ಕಾಲುವೆಯಿಂದ ಅನಧೀಕೃತವಾಗಿ ಮೋಟಾರ್ ಅಳವಡಿಸಿ ನೀರು ಎತ್ತುತ್ತಿರುವ ಸ್ಥಳ ಪರಿಶೀಲನೆ ಮಾಡಿ ಹೆಚ್ಚುವರಿ ಟಿಸಿ ಕೊಡುವ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಪಿ. ಸುನೀಲ ಕುಮಾರ ಸೂಚನೆ ನೀಡಿದರು.

ನ್ಯಾಯಾಲಯಗಳಿಗೆ ಸಾಕ್ಷಿ ನುಡಿಯಲು ಹಾಜರಾಗುವ ಸಂತ್ರಸ್ತರು ಮತ್ತು ಸಾಕ್ಷಿದಾರರಿಗೆ ಸೂಕ್ತ ಮಾಹಿತಿಯನ್ನು ಮತ್ತು ನಿಯಮಾನುಸಾರ ಪ್ರಯಾಣ ಭತ್ಯೆ ಮಂಜೂರಾತಿ ಬಗ್ಗೆ ಕ್ರಮಕೈಗೊಳ್ಳಬೇಕು. ನಗರದ ಡಾ. ಬಿ. ಆರ್ಯ ಅಂಬೇಡ್ಕರ್ ವೃತ್ತದ ನವೀಕರಣ ಕಾಮಗಾರಿ ಈಗಾಗಲೇ ಆರಂಭಗೊಂಡಿದ್ದು, ಜಿಲ್ಲಾ ಕ್ರೀಡಾಂಗಣದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಮೂರ್ತಿ ಸ್ಥಳದ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ನೀರು ನಿಲ್ಲದಂತೆ, ಸರಾಗವಾಗಿ ನೀರು ಹರಿದು ಹೋಗಲು ಕ್ರಮಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ ಅರಿಸಿದ್ಧಿ, ಉಪವಿಭಾಗಾಧಿಕಾರಿಗಳಾದ ರಾಹುಲ್ ಸಿಂಧೆ, ಬಲರಾಮ ಲಮಾಣಿ, ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಡಿವೈಎಸ್ಪಿ ಟಿ.ಎಸ್ ಸುಲ್ಪಿ, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ಅಡಿವೆಪ್ಪ ಸಾಲಗಲ್, ಅರವಿಂದ ಸಾಲವಾಡಗಿ, ಸುರೇಶ ಮಣೂರ, ಮುತ್ತಣ್ಣ ಸಾಸನೂರ, ಬಸವರಾಜ ಪೂಜಾರಿ, ವಿನಾಯಕ ಗುಣಸಾಗರ, ಗಣಪತಿ ಬಾಣಿಕೋಲ, ರಾಜಶೇಖರ ಕೂಚಬಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಉಪನಿರ್ದೇಶಕ ರಾಮನಗೌಡ ಕನ್ನೊಳ್ಳಿ ಸ್ವಾಗತಿಸಿ, ವಂದಿಸಿದರು.

Leave a Reply

ಹೊಸ ಪೋಸ್ಟ್‌