ಬಬಲೇಶ್ವರ ಗ್ರಾ. ಪಂ. ಈಗ ಪ.ಪಂ. ಆಗಿ ಮೇಲ್ದರ್ಜೆಗೆ- ಶಾಸಕ ಎಂ. ಬಿ. ಪಾಟೀಲ

ವಿಜಯಪುರ, ಮಾ. 25- ವಿಜಯಪುರ ಜಿಲ್ಲೆಯ ಬಬಲೇಶ್ವರ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೇಗೇರಿಸಿ ಸರಕಾರ ಅಂತಿಮ ಅಧಿಸೂಚನೆ ಹೊರಡಿಸಿದೆ ಎಂದು ಸ್ಥಳೀಯ ಕಾಂಗ್ರೆಸ್ ಶಾಸಕ ಮತ್ತು ಮಾಜಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.
ಈ ಕುರಿತು ರಾಜ್ಯ ಸರಕಾರ ಕರ್ನಾಟಕ ರಾಜ್ಯ ವಿಶೇಷ ರಾಜ್ಯ ಪತ್ರಿಕೆಯಲ್ಲಿ ಅಂತಿಮ ಅಧಿಸೂಚನೆಯನ್ನು ಪ್ರಕಟಿಸಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ವಿಜಯಪುರ ತಾಲೂಕಿನ ಬಬಲೇಶ್ವರ ಗ್ರಾಮ ಪಂಚಾಯತಿಯೊಂದಿಗೆ ಮಜರೆ ಗ್ರಾಮ, ಅಡವಿ ಸಂಗಾಪುರ ಗ್ರಾಮಗಳನ್ನು ಒಳಗೊಂಡು ಬಬಲೇಶ್ವರ ಪಟ್ಟಣ ಪಂಚಾಯಿತಿ ಎಂದು ಸುತ್ತಲಿನ ಎಂಟು ಚದರ ಕಿ.ಮೀ ಪ್ರದೇಶವನ್ನು ಘೋಷಣೆ ಮಾಡಿ ಅಧಿಸೂಚನೆಯನ್ು ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಹೊರಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ತಾವು ಪ್ರತಿನಿಧಿಸುವ ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಕೇಂದ್ರಸ್ಥಾನ ಬಬಲೇಶ್ವರಕ್ಕೆ ಈಗಾಗಲೇ ಪೂರ್ಣ ಪ್ರಮಾಣದ ತಾಲೂಕು ಕೇಂದ್ರವಾಗಿ ಕಾರ್ಯಾರಂಭ ಮಾಡಿದೆ. ಆದರೆ, ಸ್ಥಳೀಯ ಸಂಸ್ಥೆ ಮೇಲ್ದರ್ಜೆಗೇರಲು ಅವಶ್ಯಕವಿರುವ ಜನಸಂಖ್ಯೆ ಕಾರಣದಿಂದಾಗಿ ಇದುವರೆಗೆ ಬಬಲೇಶ್ವರ ಪಟ್ಟಣ ಪಂಚಾಯಿತಿಯಾಗಿ ಕಾರ್ಯಾರಂಭ ಮಾಡಿರಲಿಲ್ಲ. ಇದೀಗ ಅಗತ್ಯ ಜನಸಂಖ್ಯೆ ಮತ್ತು ಮಾನದಂಡಗಳು ಲಭ್ಯವಿರುವ ಕಾರಣ ಬಬಲೇಶ್ವರ ಗ್ರಾಮ ಪಂಚಾಯಿತಿ ಇನ್ನು ಮುಂದೆ ಪಟ್ಟಣ ಪಂಚಾಯಿತಿಯಾಗಿ ಕಾರ್ಯ ನಿರ್ವಹಿಸುವುದು ತಮಗೆ ಅತೀವ ಸಂತಸ ತಂದಿದೆ ಎಂದು ಎಂ. ಬಿ. ಪಾಟೀಲ ಪ್ರಕಟಣೆಯಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.

Leave a Reply

ಹೊಸ ಪೋಸ್ಟ್‌