ತೈಲ ಬೆಲೆ ಕಡಿಮೆ ಮಾಡಲ್ಲ- ಎಂ ಎಲ್‌ ಸಿ ಸುನೀಲಗೌಡ ಪಾಟೀಲ ಅವರ ಪ್ರಶ್ನೆಗೆ ಸಿಎಂ ಉತ್ತರ

ವಿಜಯಪುರ, ಮಾ. 25- ದಿನೇ ದಿನೇ ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸಲ್ ಬೆಲೆಯನ್ನು ಕಡಿಮೆ ಮಾಡುವ ಪ್ರಸ್ತಾಪ ರಾಜ್ಯ ಸರಕಾರದ ಮುಂದಿಲ್ಲ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ತೈಲ ಬೆಲೆ ಹೆಚ್ಚಳದಿಂದ ಸಾರ್ವಜನಿಕರಿಗೆ ತೀವ್ರವಾಗಿ ತೊಂದರೆಯಾಗುತ್ತಿದೆ. ಇದನ್ನು ತಪ್ಪಿಸಲು ರಾಜ್ಯ ಸರಕಾರ ತನ್ನ ಪಾಲಿನ ತೆರಿಗೆಯನ್ನು ಕಡಿಮೆ ಮಾಡುವ ಪ್ರಸ್ತಾವನೆ ಹೊಂದಿದೆಯೇ ಎಂದು ವಿಧಾನ ಪರಿಷತ ಕಾಂಗ್ರೆಸ್ ಸದಸ್ಯ ಸುನಿಲಗೌಡ ಬಿ. ಪಾಟೀಲ ಪ್ರಶ್ನೆ ಕೇಳಿದ್ದರು.
ಹಣಕಾಸು ಸಚಿವರೂ ಆಗಿರುವ ಸಿಎಂ ಬಿ. ಎಸ್. ಯಡಿಯೂರಪ್ಪ ಈ ಪ್ರಸ್ತಾವನೆ ಸರಕಾರದ ಮುಂದಿಲ್ಲ ಎಂದು ಸ್ಷ್ಟಪಡಿಸಿದ್ದಾರೆ. ಪಶ್ಚಿಮ ಬಂಗಾಳ, ಆಸ್ಸಾಂ, ರಾಜಸ್ಥಾನ, ಮತ್ತು ಮೇಘಾಲಯಗಳಲ್ಲಿ ಸ್ಥಳೀಯ ರಾಜ್ಯ ಸರಕಾರಗಳು ತಮ್ಮ ಪಾಲಿನ ಸುಂಕವನ್ನು ಕಡಿಮೆ ಮಾಡಿದ್ದು ಇದರಿಂದ ಪೆಟ್ರೋಲ್ ಹಾಗೂ ಡೀಸಲ್ ಬೆಲೆ ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆಯಿದೆ. ಇದರಿಂದ ಅಲ್ಲಿನ ಜನಸಾಮಾನ್ಯರಿಗೆ ಅನಕೂಲವಾಗಿದೆ. ಕರ್ನಾಟಕದಲ್ಲಿಯೂ ಇದೇ ಮಾದರಿಯಲ್ಲಿ ರಾಜ್ಯ ಸರಕಾರ ಕೂಡ ತನ್ನ ಪಾಲಿನ ತೆರಿಗೆ ಕಡಿಮೆ ಮಾಡಿದರೆ ಪೆಟ್ರೋಲ್, ಡೀಸೆಲ್ ಬೆಲೆ ತಗ್ಗುತ್ತದೆ ಎಂದು ಸುನಿಲಗೌಡ ಬಿ. ಪಾಟೀಲ ಹೇಳಿದ್ದರು.
ಆದರೆ, ಸುನೀಲಗೌಡ ಬಿ. ಪಾಟೀಲ ಅವರ ಪ್ರಶ್ನೆಗೆ ಅಂತಹ ಯಾವುದೇ ಪ್ರಸ್ತಾವನೆ ಸರಕಾರದ ಮುಂದೆ ಇರುವುದಿಲ್ಲ ಎಂದು ಉತ್ತರಿಸುವ ಮೂಲಕ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪೆಟ್ರೋಲ್ ಮತ್ತು ಡೀಸಲ್ ಮೇಲಿನ ರಾಜ್ಯದ ಸುಂಕವನ್ನು ಇಳಿಸಲು ನಿರಾಕರಿಸಿದ್ದಾರೆ.
ಪ್ರಸ್ತುತ ಪೆಟ್ರೋಲ್ ಮೇಲೆ ಪ್ರತಿ.ಲೀಟರ್‍ಗೆ ರಾಜ್ಯ ಸರಕಾರ ಶೇ35. ಅಂದರೆ ರೂ.23.54 ಪೈಸೆ ಮತ್ತು ಡೀಸೆಲ್ ಮೇಲೆ ಶೇ.24. ಅಂದರೆ ರೂ.16.28 ಪೈಸೆ ತೆರಿಗೆಯ ಸರಕಾರ ವಿಧಿಸುತ್ತಿದೆ ಎಂದು ರಾಜ್ಯ ಸರಕಾರದ ಪರವಾಗಿ ಮುಖ್ಯಮಂತ್ರಿಗಳು ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ. ಇದರಲ್ಲಿ ಅರ್ಧದಷ್ಟು ಕಡಿಮೆ ಮಾಡಿದರೂ ಜನಸಾಮಾನ್ಯರಿಗೆ ಆಗುತ್ತಿರುವ ಹೆಚ್ಚಿನ ಹೊರೆಯನ್ನು ತಪ್ಪಿಸಿದಂತಾಗುತ್ತಿತ್ತು. ಆದರೆ ರಾಜ್ಯ ಸರಕಾರ ಈ ದಿಸೆಯಲ್ಲಿ ತಾವು ಉಳಿದ ರಾಜ್ಯಗಳ ವಿವರಗಳ ಸಮೇತ ಗಮನ ಸೆಳೆದರೂ ಸ್ಪಂದಿಸದಿರುವುದು ನೋವಿನ ಸಂಗತಿ ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌