ಮನಸ್ಸು ಗೋಳಗುಮ್ಮಟದಂತೆ ಗಟ್ಟಿಯಾಗಿರಲಿ

ಡಾ. ಶೌಕತಲಿ ಎನ್. ಅತ್ತಾರ, ಮನಃಶಾಸ್ತ್ರ್ತಜ್ಣರು
(attar.psychologist@gmail.com)

ವಿಜಯಪುರ, ಮಾ. 25- ಎನ್ನ ಮನವೆಂಬ ಮಕುಟನು
ತನುವಿಕಾರವೆಂಬ ಅಲ್ಪಸುಖದಾಸೆ ಮಾಡಿ
ವೃಥಾ ಭ್ರಮಣಗೊಂಡು, ನಾನಾ ದೆಸೆಗೆ ಲಂಘಿಸಿ
ಅಳಲಿಸಿ ಬಳಲಿಸುತ್ತಿದೆ ನೋಡಾ!
ಕೂಡಲ ಸಂಗಮದೇವರೆಂಬ ವೃಕ್ಷಕ್ಕೆ ಲಂಘಿಸಿ
ಅಪರಿಮಿತ ಸುಖವನೆಯ್ದುದು ನೋಡಾ!

ವಿಜಯಪುರದ ಗೋಳಗುಮ್ಮಟ ಜಗತ್ತಿನ ಎರಡನೇ ಅತೀ ದೊಡ್ಡ ಗುಮ್ಮಟವಾಗಿದೆ. ಪ್ರತಿನಿತ್ಯ ಸಾವಿರಾರು ಜನ ಈ ಅದ್ಭುತ ಮತ್ತು ವಿಸ್ಮಯ ಗುಮ್ಮಟ ನೋಡಲು ಬರುತ್ತಾರೆ. ಗುಮ್ಮಟವನ್ನು ಆಶ್ಚರ್ಯದಿಂದ ನೋಡುತ್ತ, ಪಿಸುಮಾತಿನ ಗ್ಯಾಲರಿಯಲ್ಲಿ ವಿಹರಿಸುತ್ತ ಜನರು ವಿಸ್ಮಯತೆಯಿಂದ ಆನಂದ ಸಾಗರದಲ್ಲಿ ತೇಲಾಡುತ್ತಾರೆ.
ಸುಮಾರು 375 ವರ್ಷಗಳಿಂದ ಗಾಳಿ, ಬೆಳಕು, ಮಳೆ, ಬಿಸಿಲು, ಹವಾಮಾನ ವೈಪರಿತ್ಯಗಳಿಗೆ ಬಾಗದೇ, ಅದನ್ನು ಸಮರ್ಥವಾಗಿ ಎದುರಿಸುತ್ತ ನಿಂತಿರುವ ಐತಿಹಾಸಿಕ ಗೋಳಗುಮ್ಮಟ ನಮ್ಮ ಜೀವನದ ವ್ಯಕ್ತಿತ್ವಕ್ಕೆ ಮಾದರಿಯಾಗಿ ನಿಲ್ಲುತ್ತದೆ.
ವ್ಯಕ್ತಿಯಲ್ಲಿಯೂ ಒಂದು ಗುಮ್ಮಟವಿದೆ. ಅದು ಶಕ್ತಿಶಾಲಿ ಜೊತೆಯಲ್ಲಿ ಪುಕ್ಕಲುತನವಿದೆ. ಅದಕ್ಕೆ ಮನಸ್ಸು ಹೇಳುತ್ತವೆ. ಆ ಮನಸ್ಸಿನಲ್ಲಿ ವಿಚಾರಗಳು, ಯೋಚನೆಗಳು ಬರುತ್ತಿರುತ್ತವೆ. ಅವುಗಳು ನಮ್ಮ ವರ್ತನೆಯ ಪ್ರಭಾವ ಬೀರುತ್ತವೆ. ಅದಕ್ಕೆ ಒಂದು ನಿಯಂತ್ರಣವಿರಬೇಕು. ಈ ನಿಯಂತ್ರಣವನ್ನು ಮನಸ್ಸಿನಲ್ಲಿರುವ ಪಿಸು ಮಾತಿನ ಗ್ಯಾಲಿರಿಯಂತೆ ಅರ್ಥವಿಲ್ಲದ ಅನವಶ್ಯಕ ವಿಚಾರ, ಯೋಚನೆಗಳು ನಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರದಂತೆ, ಪಿಸು ಮಾತಿನ ಮೂಲಕ ನಿರ್ದೇಶನ ನೀಡುತ್ತದೆ. ಸಹನೆ, ತಾಳ್ಮೆಯಿಂದ ಮನಸ್ಸನ್ನು ಆಲಿಸಿದರೆ, ಯಾವುದೇ ತರಹದ ದ್ವಂದ್ವಕ್ಕೆ ಒಳಗಾಗದೇ ಜೀವನವು ಸರಾಗವಾಗಿ ಮುಂದೆ ಸಾಗುತ್ತದೆ.
ಜೀವನದಲ್ಲಿ ಸಂತೋಷ ಇರಳಿ ಅಥವಾ ದುಃಖ ಬರಲಿ, ಹಿಗ್ಗದೆ ಹಾಗೂ ಕುಗ್ಗದೆ ಸಮತೋಲನದಿಂದ ಜೀವನ ನಡೆಸುವ ಪರಿಪಾಠ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಪ್ರತಿಯೊಂದು ಸಮಸ್ಯೆ, ತೊಂದರೆ, ದುಃಖ, ಕಷ್ಟ ಇನ್ನಿತರ ಸಮಸ್ಯೆಗಳಿಗೆ ಮನೋದೃಢತೆಯಿಂದ ಎದುರಿಸಲು ಸಾಧ್ಯವಾಗುತ್ತದೆ.
ಐತಿಹಾಸಿಕ ಗೋಳಗುಮ್ಮಟ ಯುಗಾಂತರಗಳಿಂದ ಹವಾಮಾನದ ಪರಿಸ್ಥಿತಿಗೆ ಅನುಗುಣವಾಗಿ ತದೇಕಚಿತ್ತದಿಂದ ನಿಂತಿದೆ. ಅದೇ ರೀತಿ ನಾವೂ ಕೂಡ ಮನೋಧ್ಯರ್ಯದಿಂದ ಜೀವನ ಸಾಗಿಸಬೇಕು. ಯಾವುದೇ ರೀತಿಯ ಪರಿಸ್ಥಿತಿ ಬಂದರೂ ಕೂಡ ಮನಸ್ಸು ಚಂಚಲವಾಗದೆ ಮೋನಲ್ಲಾಸದಿಂದ ಎದುರಿಸಬೇಕು. ಆಗ ಮಾತ್ರ ನೆಮ್ಮದಿಯ ಜೀವನ ನಮ್ಮದಾಗುತ್ತದೆ.

Leave a Reply

ಹೊಸ ಪೋಸ್ಟ್‌