ಆಹಾರ ವಸ್ತುಗಳ ಪೂರೈಕೆಯಲ್ಲಿ ಗ್ರಾಹಕರಿಗೆ ಮೋಸವಾಗಬಾರದು- ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ

ವಿಜಯಪುರ, ಮಾ. 25- ಆಹಾರ ವಸ್ತುಗಳು ಗ್ರಾಹಕರ ಆರೋಗ್ಯಕ್ಕೆ ಮಾರಕವಾಗಬಾರದು. ಗ್ರಾಹಕರಿಗೆ ಮೋಸವಾಗದಂತೆ ಆಹಾರ ವಸ್ತುಗಳನ್ನು ಪೂರೈಸಬೇಕು ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಕರೆ ನೀಡಿದ್ದಾರೆ.
ವಿಜಯಪುರದಲ್ಲಿ ಜಿ. ಪಂ. ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಆಹಾರ ಸುರಕ್ಷತಾ ಇಲಾಖೆ, ಕೆ.ಎಫ್.ಸಿ.ಎಸ್.ಸಿ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ನ್ಯೂ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ವರ್ಷದಂತೆ ಈ ವರ್ಷವೂ ಒಂದು ಘೋಷವಾಕ್ಯದೊಂದಿಗೆ ಈ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ. ಈ ವರ್ಷವೂ “ಪ್ಲಾಸ್ಟಿಕ್ ಮಾಲಿನ್ಯವನ್ನು ನಿಭಾಯಿಸುವುದು” ಎಂಬ ಘೋಷವಾಕ್ಯದಡಿ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ಲಾಸ್ಟಿಕ್ ಬಳಕೆಯನ್ನು ಸಾದ್ಯವಾದಷ್ಟು ಕಡಿಮೆ ಮಾಡಬೇಕು ಎಂದು ಅವರು ಹೇಳಿದರು.
ವ್ಯಾಪಾರಿ ಸಂಸ್ಥೆಗಳು ಗ್ರಾಹಕರನ್ನು ನಿರಂತರವಾಗಿ ಅನುಚಿತ ವ್ಯಾಪಾರಿ ಪದ್ಧತಿಗಳಿಂದ ಶೋಷಿಸುತ್ತಿವೆ. ಗ್ರಾಹಕರಲ್ಲಿ ಜಾಗೃತಿಯನ್ನು ಮೂಡಿಸಲು ಪ್ರತಿ ವರ್ಷ ಗ್ರಾಹಕರ ಹಕ್ಕುಗಳ ದಿನವೆಂದು ವಿಶ್ವಾದ್ಯಂತ ಆಚರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ವೆಂಕಣ್ಣ ಹೊಸಮನಿ ಮಾತನಾಡಿ, ಪಡಿತರ ಚೀಟಿ ಬಡವರಿಗೆ ಬಂದಂಥ ದವಸ- ಧಾನ್ಯವನ್ನು ಬಡವರಿಗೆ ನೀಡಬೇಕು. ಬಡವರಿಗಾಗಿ ನೀಡಲಾಗುವ ಧಾನ್ಯವನ್ನು ಅಕ್ರಮವಾಗಿ ಮಾರಾಟ ಮಾಡಿದರೆ ಮತ್ತು ಸರಕಾರ ನಿಗದಿ ಪಡಿಸಿರುವ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ಅಂಥವರ ವಿರುದ್ಧ ಕ್ರಮ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕಾನೂನಿನಲ್ಲಿ ಅವಕಾಶ ಇದೆ ಎಂದು ತಿಳಿಸಿದರು.
ಅನುರಾಧಾ ಟಂಕಸಾಲಿ ಮಾತನಾಡಿ. ಪ್ಲಾಸ್ಟಿಕ್ ಪರಿಸರಕ್ಕೆ ಅಪಾಯಕಾರಿಯಾಗಿದ್ದು, ಸಾರ್ವಜನಿಕರು ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಎಂ. ಜಿ. ಮಠಪತಿ ಮಾತನಾಡಿದರು. ವಿಜಯಪುರ ಜಿಲ್ಲಾ ಗ್ರಾಹಕರ ದೂರು ಪರಿಹಾರ ಆಯೋಗದ ಅಧ್ಯಕ್ಷ ಆಂಬಾದಾಸ ಕುಲಕರ್ಣಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಗೀತಾಂಜಲಿ ಕಲ್ಯಾಣಿ, ವಿದ್ಯಾ ಗಲಗಲಿ, ಎ.ಎಸ್.ಪಾಣಿಶೆಟ್ಟರ್, ಶಿದ್ರಾಮ ಮಾರಿಹಾಳ, ಡಿ. ಆರ್. ನಾಯ್ಕೋಡಿ ಮುಂತಾದವರು ಉಪಸ್ಥಿತರಿದ್ದರು. ಕೃತಿಕಾ ಜಂಗಿನಮಠ ಪ್ರಾರ್ಥನೆ ಗೀತೆ ಹಾಡಿದರು. ಡಾ. ಎಸ್. ಎಂ. ಕರೆಕಲ್ ವಂದಿಸಿದರು.

Leave a Reply

ಹೊಸ ಪೋಸ್ಟ್‌