ವಿಜಯಪುರ, ಮಾ. 27- ರಾಜ್ಯದಲ್ಲಿ ಬೇಡಿಕೆಗಿಂತ ಹೆಚ್ಚು ವಿದ್ಯುತ್ ಲಭ್ಯವಿದ್ದರೂ ಕೂಡ ಅದು ರೈತರಿಗೆ ಸರಿಯಾಗಿ ಸಿಗುತ್ತಿಲ್ಲ ಎಂದು ವಿಜಯಪುರ ಬಿಜೆಪಿ ಹಿರಿಯ ಸಂಸದ ರಮೇಶ ಜಿಗಜಿಣಗಿ ತಿಳಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಇಂಧನ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ಆದೇಶ ನೀಡಬೇಕು ಎಂದು ಆಗ್ರಹಿಸಿದರು.
ಈ ಕುರಿತು ಅಂಕಿ ಅಂಶ ಸಹಿತ ಮಾಹಿತಿ ನೀಡಿದ ರಮೇಶ ಜಿಗಜಿಣಗಿ, ರಾಜ್ಯಕ್ಕೆ 30 ಸಾವಿರ ಮೆ. ವ್ಯಾ. ವಿದ್ಯುತ್ ಸಿಗುತ್ತಿದೆ. ರಾಜ್ಯದಲ್ಲಿ 14500 ಮೆ. ವ್ಯಾ. ಮಾತ್ರ ವಿದ್ಯುತ್ ಬೇಡಿಕೆ ಇದೆ. ಹೆಚ್ಚಿಗೆ ವಿದ್ಯುತ್ ಲಭ್ಯವಿದ್ದರೂ ಕೂಡ ಶೇ. 50 ರಷ್ಟು ವಿದ್ಯುತ್ ಪೂರೈಕೆಯಾಗುತ್ತಿಲ್ಲ. ರಾಜ್ಯದ ಪಾಲಿನ ವಿದ್ಯುತ್ ಎಲ್ಲಿಗೆ ಮಾರಾಟವಾಗುತ್ತಿದೆ ಗೊತ್ತಿಲ್ಲ ಎಂದು ತಿಳಿಸಿದರು.
ರಾಯಚೂರು ಉಷ್ಣ ವಿದ್ಯುತ್ ಸ್ಥಾವರದಿಂದ 1700 ಮೆ. ವ್ಯಾ, ಆಂಧ್ರ ಪ್ರದೇಶದ ಯರಮಾರ ಉಷ್ಣ ವಿದ್ಯುತ್ ಸ್ಥಾವರದಿಂದ 1600 ಮೆ. ವ್ಯಾ., ಬಳ್ಳಾರಿ ಘಟಕದಿಂದ 1700 ಮೇ. ವ್ಯಾ. ಕೂಡಗಿ ಎನ್ ಟಿ ಪಿ ಸಿ ಯಿಂದ 2400 ಮೆ. ವ್ಯಾ., ನಾನಾ ಜಲವಿದ್ಯುತ್ ಯೋಜನೆಗಳಿಂದ 3500 ಮೆ. ವ್ಯಾ., ನಾನ ಸೋಲಾರ್ ಯೋಜನೆಗಳಿಂದ 6500 ಮೆ. ವ್ಯಾ., ನಾನಾ ಪವನ ವಿದ್ಯುತ್ ಯೋಜನೆಗಳಿಂದ 4500 ಮೆ. ವ್ಯಾ., ಅಣುಶಕ್ತಿ ಯೋಜನೆಯಿಂದ 2000 ಮೆ. ವ್ಯಾ., ನಾನಾ ಸಕ್ಕರೆ ಕಾರ್ಖಾನೆಗಳಿಂದ 750 ಮೆ. ವ್ಯಾ., ಹೀಗೆ ಒಟ್ಟು 30 ಸಾವಿರ ಮೆ. ವ್ಯಾ ವಿದ್ಯುತ್ ಲಭ್ಯವಾಗುತ್ತಿದೆ. ಆದರೆ, ರಾಜ್ಯದ ಒಟ್ಟು ಬೇಡಿಕೆ 14500 ಮೆ. ವ್ಯಾ. ಮಾತ್ರ ಇದೆ. ವಿಷಯ ಹೀಗಿದ್ದರೂ ಕೂಡ ರೈತರು ಶೇ. 50 ರಷ್ಟು ವಿದ್ಯುತ್ ಬಳಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಸಿಎಂ ಅಧೀನದಲ್ಲಿ ಇಂಧನ ಇಲಾಖೆ ಇದೆ. ಅಧಿಕಾರಿಗಳಿಗೆ ಸಿಎಂ ಎಚ್ಚರಿಕೆ ನೀಡಬೇಕು. ಯಾಕೆ ರೈತರಿಗೆ ಮತ್ತು ಜನರಿಗೆ ವಿದ್ಯುತ್ ತೊಂದರೆಯಾಗುತ್ತಿದೆ? ಎಂಬುದನ್ನು ಬಿಜೆಪಿ ಸಂಸದನಾಗಿ ಕೇಳಲು ಬಯಸುತ್ತೇನೆ ಎಂದು ತಿಳಿಸಿದ ಅವರು, ಸಿಎಂ ಅಧಿಕಾರಿಗಳ ಮೇಲೆ ನಿಗಾ ಇಡಬೇಕು. ರಾಜ್ಯ ಮಟ್ಟದ ಸಭೆ ಕರೆದು ರೈತರಿಗೆ ತೊಂದರೆಯಾಗದ ರೀತಿಯಲ್ಲಿ ನಿರ್ವಹಣೆಗೆ ಸೂಚಿಸಬೇಕು. ಉತ್ತರ ಕರ್ನಾಟಕದಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯುತ್ ಪಂಪ್ ಸೆಟ್ ಗಳಿವೆ. ಈ ರೈತರು ವಿದ್ಯುತ್ ಕಡಿತದಿಂದ ತೊಂದರೆಗೀಡಾಗುತ್ತಿದ್ದಾರೆ. ಸಿಎಂ ಈ ಸಮಸ್ಯೆಯನ್ನು ಬಗೆ ಹರಿಸಬೇಕು ಎಂದು ರಮೇಶ ಜಿಗಜಿಣಗಿ ಆಗ್ರಹಿಸಿದರು.
ದಲಿತ ಸಿಎಂ ವಿಚಾರ
ದಲಿತ ಸಿಎಂ ವಿಚಾರ ಕುರಿತು ಪ್ರತಿಕ್ರಿಯೆ ರಮೇಶ ಜಿಗಜಿಣಗಿ, ಶೇ.2 ರಿಂದ ಶೇ. 3 ರಷ್ಟು ಜನಸಂಖ್ಯೆ ಇರುವ ಜನರು ರಾಜ್ಯದಲ್ಲಿ ಸಿಎಂ ಆಗಿದ್ದಾರೆ. ಆದರೆ, ಶೇ. 23 ರಷ್ಟಿರುವ ಇರುವ ದಲಿತರು ಯಾಕೆ ಸಿಎಂ ಆಗಬಾರದು? ನಾನೇ ದಲಿತ ಸಿಎಂ ಆಗಬೇಕೆಂದು ಆಸೆಯಿಲ್ಲ. ಯಾರಾದರೊಬ್ಬರು ದಲಿತ ಸಿಎಂ ಆದರೆ ಸಾಕು ಎಂಬ ಭಾವನೆ ನನಗಿದೆ. ದೇವರು ದಲಿತರನ್ನು ಸಿಎಂ ಆಗಿ ಮಾಡಿ ಕೂಡಿಸುತ್ತಾನೆ. ನಾನು ಈಗ ರಾಷ್ಟ್ರ ರಾಜಕಾರಣದಲ್ಲಿ ಆರಾಮಾಗಿದ್ದೇನೆ. ಒಂದು ವೇಳೆ ಬಿಜೆಪಿ ಹೈಕಮಾಂಡ ಬಯಸಿದರೆ ರಾಜ್ಯ ಮತ್ತು ವಿಜಯಪುರ ರಾಜಕಾರಣಕ್ಕೆ ಮರಳುವೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಚರ್ಚೆಗೆ ಕಾರಣವಾಗಿರುವ ಸಿಡಿ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ ಬಿಜೆಪಿ ಹಿರಿಯ ಸಂಸದ ರಮೇಶ ಜಿಗಜಿಣಗಿ, ಸಿಡಿ ಬಗ್ಗೆ ನನಗೆ ಗೊತ್ತಿಲ್ಲ. ಪೇಪರ್ ನಲ್ಲಿ ಬಂದಿದ್ದನ್ನು ನೋಡಿದ್ದೇನೆ. ನಾನೇನು ಬೆಂಗಳೂರಿಗೆ ಹೋಗಿಲ್ಲ. ಹೀಗಾಗಿ ಹೆಚ್ಚಿನ ಮಾಹಿತಿ ಇಲ್ಲ. ದೆಹಲಿ ಮತ್ತು ವಿಜಯಪುರಕ್ಕೆ ಮಾತ್ರ ಹೋಗುವುದು ಬರುವುದು ಮಾಡುತ್ತೇನೆ. ಆದರೆ, ಸರಕಾರಿ ಕೆಲಸಗಳಿದ್ದಾಗ ಮಾತ್ರ ಬೆಂಗಳೂರಿನ ನಾನಾ ಇಲಾಖೆಗಳ ಅಧಿಕಾರಿಗಳಿಗೆ ಫೋನ್ ಮಾಡಿ ಮಾತನಾಡಿ ಮಾತನಾಡುತ್ತೇನೆ. ಎಲ್ಲ ಅಧಿಕಾರಿಗಳೂ ನನ್ನ ಮಾತಿಗೆ ಸ್ಪಂದಿಸುತ್ತಾರೆ. ಸಿಡಿ ವಿಚಾರ ಕುರಿತು ಯಾರೊಂದಿಗೂ ತಾವು ಮಾತನಾಡಿಲ್ಲ. ಆ ಸಿಡಿಯನ್ನೂ ನೋಡಿಲ್ಲ. ಆ ಥರಾ ವಿಡಿಯೋ ವೈರಲ್ ಮಾಡಿದ್ದು ತಪ್ಪು. ತಪ್ಪು ತಪ್ಪೇ ಎಂದು ರಮೇಶ ಜಿಗಜಿಣಗಿ ಹೇಳಿದರು.
ಈ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಕೂಚಬಾಳ, ಜಿಲ್ಲಾ ಮಾಧ್ಯಮ ಪ್ರಮುಖ ವಿಜಯ ಜೋಶಿ ಉಪಸ್ಥಿತರಿದ್ದರು.