ವಿಜಯಪುರ- ಬಬಲೇಶ್ವರ ವಿಧಾನಸಭೆ ಕ್ಷೇತ್ರದ ಹೆಸ್ಕಾಂ ಬಬಲೇಶ್ವರ ಉಪವಿಭಾಗ ವ್ಯಾಪ್ತಿಯಲ್ಲಿ, ಸಮರ್ಪಕ ವಿದ್ಯುತ್ ಪೂರೈಕೆ ನಿಟ್ಟಿನಲ್ಲಿ ರೂ. 7.33 ಕೋ. ವೆಚ್ಚದಲ್ಲಿ 174.34 ಕಿ.ಮೀ ಹೊಸ 11 ಕೆ. ವಿ. ಲೈನ್ ನಿರ್ಮಿಸುವ 28 ಕಾಮಗಾರಿಗಳನ್ನು ಆರಂಭಿಸಲಾಗಿದೆ ಎಂದು ಮಾಜಿ ಸಚಿವ, ಬಬಲೇಶ್ವರ ಶಾಸಕ ಎಂ. ಬಿ. ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬಬಲೇಶ್ವರ ವಿಧಾನಸಭೆ ಕ್ಷೇತ್ರವು ಸಂಪೂರ್ಣ ನೀರಾವರಿಗೆ ಒಳಪಟ್ಟಿದೆ. ನೀರಿನ ಬಳಕೆಗಾಗಿ ರೈತರಿಗೆ ವಿದ್ಯುತ್ ಅವಲಂಬನೆ ಅನಿವಾರ್ಯವಾಗಿದೆ. ಕೇಲವು ಫೀಡರಗಳು ಓವರ್ ಲೋಡ್ ಕಾರಣದಿಂದಾಗಿ ಮತ್ತು ವಿದ್ಯುತ್ ಉತ್ಪಾದನೆ ಕೊರತೆಯ ಪರಿಣಾಮ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಲ್ಲಿ ತೊಂದರೆ ಉಂಟಾಗುತ್ತಿದೆ. ಇದರಿಂದ ಮೇಲಿಂದ ಪದೇ ಪದೇ ಲೈನ್ ಟ್ರಿಪ್ ಆಗುವುದು, ಲೋ ಓಲ್ಟೆಜ್‍ನಿಂದ ಪಂಪ್ ಸೆಟ್‍ಗಳಿಗೆ ತೊಂದರೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಓವರ್ ಲೋಡ್ ಫೀಡರ್ ಗಳ ಮೇಲಿನ ಭಾರ ಕಡಿಮೆ ಮಾಡುವ ಉದ್ದೇಶದಿಂದ ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಬಬಲೇಶ್ವರ ಮತಕ್ಷೇತ್ರ ವ್ಯಾಪ್ತಿಯ ಬಬಲೇಶ್ವರ ಪಟ್ಟಣ, ಮಮದಾಪುರ, ದೇವರ ಗೆಣ್ಣೂರ, ಶಿರಬೂರ, ತೊರವಿ, ತೊದಲಬಾಗಿ, ಬಿದರಿ, ರೋಣಿಹಾಳ ವಿದ್ಯುತ್ ವಿತರಣಾ ಕೇಂದ್ರಗಳ ವ್ಯಾಪ್ತಿಯಲ್ಲಿ ಐಪಿ ಫೀಡರ್‍ಗಳ ವ್ಯವಸ್ಥೆ ಸುಧಾರಣೆಗೆ ಹೊಸದಾಗಿ ಫೀಡರಗಳು ಮತ್ತು ಲಿಂಕ್ ಲೈನ್‍ಗಳನ್ನು ನಿರ್ಮಿಸುವುದು ಸೇರಿದಂತೆ 28 ಹೊಸ ಕಾಮಗಾರಿಗಳನ್ನು ಆರಂಭಿಸಲಾಗಿದೆ. ಮುಂದಿನ ಒಂದು ವರ್ಷದಲ್ಲಿ ಈ ಕಾಮಗಾರಿಗಳು ಪೂರ್ಣಗೊಳ್ಳಲಿವೆ. ಇದರಿಂದ ಈ ಎಲ್ಲ ಫೀಡರಗಳ ವ್ಯಾಪ್ತಿಯಲ್ಲಿ ರೈತರಿಗೆ ಯಾವುದೇ ಅಡಚಣೆಗಳಿಲ್ಲದೆ ಗುಣಮಟ್ಟದ ವಿದ್ಯುತ್ ಪೂರೈಕೆ ಒದಗಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಎಂ. ಬಿ. ಪಾಟೀಲ್ ತಿಳಿಸಿದ್ದಾರೆ.
ಬಬಲೇಶ್ವರ ವಿತರಣಾ ಕೇಂದ್ರ ವ್ಯಾಪ್ತಿಯಲ್ಲಿ ಓವರಲೋಡ್ ಫೀಡರ್ ಸುಧಾರಣೆಗಾಗಿ ಬಬಲೇಶ್ವರ-ಕಾಖಂಡಕಿ 12 ಕಿ. ಮೀ ಲಿಂಕ್‍ಲೈನ್ ನಿರ್ಮಿಸಲು ರೂ.48.20 ಲಕ್ಷ, ಬಬಲೇಶ್ವರ-ನಿಡೋಣಿ 8.5 ಕಿ. ಮೀ ಲೈನ್ ನಿರ್ಮಿಸಲು ರೂ.36.01 ಲಕ್ಷ, ಬಬಲೇಶ್ವರ-ತಿಗಣಿ ಬಿದರಿ ಐಪಿ ಫೀಡರ್ 9 ಕಿ.ಮೀ ಲೈನ್ ನಿರ್ಮಿಸಲು ರೂ.36.50 ಲಕ್ಷ, ಬಬಲೇಶ್ವರ-ಹೊಕ್ಕುಂಡಿ 12 ಕಿ. ಮೀ. ಐಪಿ ಫೀಡರ್ ಲೈನ್ ರೂ.41.58 ಲಕ್ಷ, ಬಬಲೇಶ್ವರ-ಅರ್ಜುಣಗಿ 8 ಕಿ. ಮೀ ಹೊಸ ಲೈನ್ ನಿರ್ಮಿಸಲು ರೂ. 33.10 ಲಕ್ಷ, ಬಬಲೇಶ್ವರ-ಸಂಗಾಪುರ ಎಸ್. ಎಚ್. ಫೀಡರ್ ಒತ್ತಡ ಕಡಿಮೆ ಮಾಡಲು ಹೊಸ ಕಂಬಾಗಿ ವಿದ್ಯುತ್ ಕೇಂದ್ರದಿಂದ ರೂ. 24.53 ವೆಚ್ಚದಲ್ಲಿ 6 ಕಿ. ಮೀ. ಲೈನ್ ನಿರ್ಮಿಸುವುದು. ಅದೇ ರೀತಿ ಕಂಬಾಗಿ-ಶೇಗುಣಶಿ 7 ಕಿ. ಮೀ ಲೈನ್ ನಿರ್ಮಿಸಲು ರೂ. 28. 72 ಲಕ್ಷ ಮತ್ತು ಇದೇ ಮಾರ್ಗದಲ್ಲಿ 8.50 ಕಿ. ಮೀ. ಹೊಸಲೈನ್ ನಿರ್ಮಿಸಲು ರೂ. 36.70 ಲಕ್ಷ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಮಮದಾಪುರ ವಿತರಣಾ ಕೇಂದ್ರ ವ್ಯಾಪ್ತಿಯಲ್ಲಿ, ಮಮದಾಪುರ-ಹೊಸಹಂಗರಗಿ 9 ಕಿ. ಮೀ. ಲಿಂಕ್ ಲೈನ್ ನಿರ್ಮಿಸಲು ರೂ.36ಲಕ್ಷ, ಮಮದಾಪುರ-ಕಾರಜೋಳ 5ಕಿ.ಮೀ ಲಿಂಕ್‍ಲೈನ್ ನಿರ್ಮಿಸಲು ರೂ.17.77ಲಕ್ಷ, ಕಾರಜೋಳ ಐಪಿ ಫೀಡರ್ ಒತ್ತಡ ಕಡಿಮೆ ಮಾಡಲು ರೋಣಿಹಾಳದಿಂದ ರೂ. 44.54 ಲಕ್ಷ ವೆಚ್ಚದಲ್ಲಿ 8ಕಿ.ಮೀ ಹೊಸ ಲೈನ್ ನಿರ್ಮಿಸಲಾಗುವುದು. ಮಮದಾಪುರ-ಬೆಳ್ಳುಬ್ಬಿ ಫೀಡರ್ ಒತ್ತಡ ಕಡಿಮೆ ಮಾಡಲು ಶಿರಬೂರದಿಂದ 5ಕಿ.ಮೀ ರೂ. 18.77 ಲಕ್ಷ, ಶಿರಬೂರ-ಜೈನಾಪುರ 4.5ಕಿ.ಮೀ ಲೈನ್ ನಿರ್ಮಿಸಲು ರೂ.18ಲಕ್ಷ, ಮಮದಾಪುರ-ಕಂಬಾಗಿ ಫೀಡರ್ ಭಾರ ಕಡಿಮೆ ಮಾಡಲು 0.1 ಕಿ.ಮೀ 1ಲಕ್ಷ, ಕಂಬಾಗಿ ಎನ್.ಜೆ.ವಾಯ್ ಫೀಡರ್ ಪ್ರತ್ಯೇಕ ಗೊಳೀಸಲು 0.15 ಕಿ. ಮೀ. ಲೈನ್ ಅಳವಡೀಸಲು 1.16ಲಕ್ಷ, ಗುಣದಾಳ ಐಪಿ ಫೀಡರ್ ಭಾರ ಕಡಿಮೆ ಮಾಡಲು ಕಂಬಾಗಿಯಿಂದ 3.45 ಕಿ. ಮೀ. ಹೊಸಲೈನ್ ಅಳವಡಿಸಲು 14.83ಲಕ್ಷ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಶಿರಬೂರ ವಿತರಣಾ ಕೇಂದ್ರ ವ್ಯಾಪ್ತಿಯಲ್ಲಿ, ಶಿರಬೂರ-ಜಂಬಗಿ ಫೀಡರ್ ಒತ್ತಡ ಕಡಿಮೆ ಮಾಡಲು ಶಿರಬೂರನಿಂದ 7ಕಿ.ಮೀ ಡಬಲ್ ಸರ್ಕ್ಯೂಟ್ ಲೈನ್ ನಿರ್ಮಿಸಲು ರೂ.46ಲಕ್ಷ, ಶಿರಬೂರ-ಚಿಕ್ಕಗಲಗಲಿ ಡಬಲ್ ಸರ್ಕ್ಯೂಟ್ 6.9ಕಿ.ಮೀ ಲೈನ್ ನಿರ್ಮಿಸಲು ರೂ.46ಲಕ್ಷ, ಶಿರಬೂರ-ಸುತಗುಂಡಿ 3ಕಿ.ಮೀ ಲೈನ್ ನಿರ್ಮಿಸಲು ರೂ.12ಲಕ್ಷ, ಶಿರಬೂರ-ಹೊಸೂರ 4ಕಿ.ಮೀ ಲೈನ್ ನಿರ್ಮಿಸಲು ಲೈನ್ ರೂ. 16.37 ಲಕ್ಷ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು. ದೇವರ ಗೆಣ್ಣೂರ ವಿತರಣಾ ಕೇಂದ್ರ ವ್ಯಾಪ್ತಿಯಲ್ಲಿ, ಕಂಬಾಗಿ-ಹಣಮಸಾಗರ 3.54 ಕಿ.ಮೀ ಲೈನ್ ನಿರ್ಮಿಸಲು 14.ಲಕ್ಷ, ತೊರವಿ-ಅತಾಲಟ್ಟಿ 8.5 ಕಿ. ಮೀ. ಲೈನ್ ನಿರ್ಮಿಸಲು ರೂ.34.50 ಲಕ್ಷ, ಕಂಬಾಗಿಯಿಂದ ಬೋಳ ಚಿಕ್ಕಲಕಿ ಮತ್ತು ನಂದ್ಯಾಳ ವರೆಗೆ 11 ಕಿ. ಮೀ. ಡಬಲ್ ಸರ್ಕ್ಯೂಟ್ ಲೈನ್ ನಿರ್ಮಿಸಲು ರೂ. 38.76 ಲಕ್ಷ ಮತ್ತು ತೊದಲಬಾಗಿ ಕಾತ್ರಾಳ ಫೀಡರ್ ಒತ್ತಡ ಕಡಿಮೆ ಮಾಡಲು ಹೊಸ ಕಂಬಾಗಿ ಹೊಸ ವಿದ್ಯುತ್ ಕೇಂದ್ರದಿಂದ ಪಟೇಲ್ ವಸ್ತಿ, ವಾಣಿ ವಸ್ತಿ ವರೆಗೆÉ 20ಕಿ.ಮೀ ಲೈನ್ ನಿರ್ಮಿಸಲು ರೂ.70.56ಲಕ್ಷ ರೂ.ವೆಚ್ಚದ ಒಟ್ಟು 28 ನೂತನ ಕಾಮಗಾರಿಗಳಿಗೆ ಹೆಸ್ಕಾಂ ತಾಂತ್ರಿಕ ಅನುಮೋದನೆ ಪಡೆಯಲಾಗಿದೆ ಎಂದು ಮಾಜಿ ಸಚಿವರು ತಿಳಿಸಿದ್ದಾರೆ..
ಈಗಾಗಲೇ ಮೇಲಿನ ಈ ಕಾಮಗಾರಿಗಳಲ್ಲಿ ಕೆಲವು ಮುಕ್ತಾಯ ಹಂತದಲ್ಲಿದ್ದು, ಉಳಿದ ಕಾಮಗಾರಿಗಳು ಆರಂಭದ ಹಂತದಲ್ಲಿವೆ. ಈ ಎಲ್ಲ ಕಾಮಗಾರಿಗಳು ಒಂದು ವರ್ಷದಲ್ಲಿ ಪೂರ್ಣಗೊಳ್ಳುವುದರಿಂದ ಬಬಲೇಶ್ವರ ಹಾಗೂ ಮಮದಾಪುರ ಹೋಬಳಿಗಳ ರೈತರಿಗೆ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಲು ಅನುಕೂಲವಾಗುತ್ತದೆ ಎಂದು ಎಂ. ಬಿ. ಪಾಟೀಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.