ಹೈನುಗಾರಿಕೆ, ಹಾಲು ಉತ್ಪಾದನೆ ಬಗ್ಗೆ ಜನಜಾಗೃತಿಗೆ ವಿಜಯಪುರ ಉಪವಿಬಾಗಾಧಿಕಾರಿ ಬಲರಾಮ ಲಮಾಣಿ ಸೂಚನೆ

ಬಸವ ನಾಡು

ವಿಜಯಪುರ- ವಿಜಯಪುರ ಜಿಲ್ಲೆಯಲ್ಲಿ ನೀರಾವರಿ ಸೌಲಭ್ಯ ಉತ್ತಮವಾಗಿದ್ದು, ಬೇಸಿಗೆಯಲ್ಲಿಯೂ ಜಾನುವಾರುಗಳಿಗೆ ಮೇವು ಮತ್ತು ನೀರಿನ ಆಗುವುದಿಲ್ಲ. ಇದರ ಸದುಪಯೋಗ ಪಡೆದು ಪಶುಗಳ ಪಾಲನೆ, ಪೋಷಣೆ ಮಾಡಿ ಹೈನುಗಾರಿಕೆ ಮತ್ತು ಹಾಲು ಉತ್ಪಾದನೆಯ ಬಗ್ಗೆ ಜನರಿಗೆ ಮನವರಿಕೆ ಮಾಡಿ ಕೊಡಬೇಕು ಎಂದು ವಿಜಯಪುರ ಉಪವಿಭಾಗಾಧಿಕಾರಿ ಬಲರಾಮ ಲಮಾಣಿ ಪಶುಸಂಗೋಪನೆ ಮತ್ತು ಇತರ ಸಂಬಂಧಿತ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿಜಯಪುರ ನಗರದ ರುಡ್ಸೆಟ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ, ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಪ್ರಧಾನ ಮಂತ್ರಿಗಳ ಆತ್ಮ ನಿರ್ಭರ ಭಾರತ ಕಾರ್ಯಕ್ರಮ ಹಾಗೂ ಪಶುಪಾಲನೆ ಮೂಲಭೂತ ಸೌಕರ್ಯ ಅಭಿವೃದ್ಧಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಪಶುಪಾಲನೆಯಿಂದ ಆಗುವ ಆರ್ಥಿಕ ಲಾಭದ ಬಗ್ಗೆ ಇರುವ ಹಲವಾರು ಯೋಜನೆಗಳ ಬಗ್ಗೆ ರೈತರಿಗೆ ತಿಳಿಹೇಳಬೇಕು. ಅಲ್ಲದೇ, ಈ ಯೋಜನೆಗಳನ್ನು ಸದುಪಯೋಗವನ್ನು ಪಡೆದುಕೊಳ್ಳಲು ಮನವರಿಕೆ ಮಾಡಬೇಕು ಎಂದು ಅವರು ಸಲಹೆ ನೀಡಿದರು.
ವಿಜಯಪುರ ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರತಿಭಾ ಪಾಟೀಲ ಮಾತನಾಡಿ, ಪ್ರಧಾನ ಮಂತ್ರಿ ಆತ್ಮ ನಿರ್ಭರ ಭಾರತದಲ್ಲಿ ಬರುವ ಪ್ರತಿಯೊಂದು ಯೋಜನೆಯ ಬಗ್ಗೆ ಅರಿವು ಮೂಡಿಸಲಾಗುವುದು. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕೆನರಾ ಬ್ಯಾಂಕಿನ ಪ್ರಾದೇಶಿಕ ಅಧಿಕಾರಿ ಸೋಮನಗೌಡ ಐನಾಪುರ ಮಾತನಾಡಿ, ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಹೆಚ್ಚಾಗಿರುವುದರಿಂದ ಇನ್ನಷ್ಟು ಉತ್ತೇಜಿಸಲು ಸರಕಾರದಿಂದ ಬರುವ ಯೋಜನೆಗಳಡಿ ಬ್ಯಾಂಕುಗಳ ಮೂಲಕ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಪ್ರಾಣೇಶ ಜಹಾಗೀರದಾರ, ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕಿ ಭಾರತಿ ಬಿದರಿಮಠ, ಅಧಿಕಾರಿಗಳಾದ ರಾಜೇಂದ್ರ ಜೈನಾಪುರ, ಮಲ್ಲಿಕಾರ್ಜುನ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌