ಬಸವ ನಾಡು
ವಿಜಯಪುರ- ವಿಜಯಪುರ ನಗರಕ್ಕೆ ನಿರಂತರ ನೀರು ಪೂರೈಸುವ 24×7 ಕುಡಿಯುವ ನೀರಿನ ಯೋಜನೆಯನ್ನು ಈ ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೂಚನೆ ನೀಡಿದ್ದಾರೆ.
ವಿಜಯಪುರ ನಗರದಲ್ಲಿರುವ ತಮ್ಮ ಸಾರ್ವಜನಿಕ ಸಂಪರ್ಕ ಕಾರ್ಯಾಲಯದಲ್ಲಿ ಬೇಸಿಗೆ ಹಿನ್ನೆಲೆಯಲ್ಲಿ ನಗರ ನೀರು ಸರಬರಾಜು ಮಂಡಳಿ ಅಧಿಕಾರಿಗಳು ಮತ್ತು ಮಹಾನಗರ ಪಾಲಿಕೆ ಮಾಜಿ ಸದಸ್ಯರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ಈಗ ವಿಜಯಪುರ ನಗರದಲ್ಲಿ 10 ರಿಂದ 12 ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳಿದ್ದರೆ ಶೀಘ್ರವಾಗಿ ಬಗೆಹರಿಸಿ ಸಾರ್ವಜನಿಕರಿಗೆ ನೀರಿನ ಸಮಸ್ಯೆಯಾಗದಂತೆ ನಾಲ್ಕೈದು ದಿನಗಳಿಗೊಮ್ಮೆ ಸರಿಯಾಗಿ ನೀರು ಪೂರೈಸಬೇಕು. ತೊರವಿ ಎಲ್. ಟಿ. ನಂ 2 ರಲ್ಲಿ ನಿರ್ಮಾಣ ಮಾಡಿದ ಓವರ್ ಹೆಡ್ ಟ್ಯಾಂಕ್ ಗೆ ಶೀಘ್ರವಾಗಿ ನೀರಿನ ಸಂಪರ್ಕ ಕಲ್ಪಿಸಬೇಕು ಎಂದು ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಾರ್ವಜನಿಕರಿಗೆ ಅನುಕೂಲವಾಗುವಂತೆ ನೀರು ಬಿಡುವ ಸಮಯ ನಿಗದಿ ಮಾಡಬೇಕು. ಬೆಳಿಗ್ಗೆ ನೀರು ಬಿಟ್ಟರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಅದರ ಬದಲು ರಾತ್ರಿ ವೇಳೆ ನೀರು ಬಿಡಬಾರದು. ಪೈಪಲೈನ್ ಕಾಮಗಾರಿಗಾಗಿ ಅಗೆಯಲಾಗಿರುವ ಸ್ಥಳವನ್ನು ರಿ- ಕಾರ್ಪೆಟ್ ಮಾಡಿಲ್ಲ. ಅವೆಲ್ಲ ರೀ-ಕಾರ್ಪೆಟ್ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಅವರು ತಿಳಿಸಿದರು.
ಜಲಮಂಡಳಿಯಿಂದ ಅಧಿಕೃತ ಕರ ವಸೂಲಿಗಾರರ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿ, ಸಾರ್ವಜನಿಕರಿಗೆ ಈ ಬಗ್ಗೆ ಮಾಹಿತಿ ನೀಡಬೇಕು. ಬೇರೆ ವ್ಯಕ್ತಿಗಳಿಗೆ ಸಾರ್ವಜನಿಕರು ಕರ ಪಾವತಿಸಿ ಮೋಸ ಹೋಗುವುದನ್ನು ತಪ್ಪಿಸಿ. ಕರ ವಸೂಲಿ ಅಭಿಯಾನ ಪ್ರಾರಂಭಿಸಬೇಕು. ಸಾರ್ವಜನಿಕರು ಸಹ ನೀರನ್ನು ಮಿತವಾಗಿ ಬಳಸುವಂತೆ ಜಾಗೃತಿ ಮೂಡಿಸಬೇಕು ಎಂದು ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿಜಯಪುರ ನಗರದಲ್ಲಿ ಅನೇಕ ಕಡೆ ಕೊಳವೆ ಭಾವಿಗಳನ್ನು ಕೊರೆಸಲಾಗಿದೆ. ಆದರೆ, ಮೋಟರ್ ಅಳವಡಿಸಿಲ್ಲ. ಶೀಘ್ರದಲ್ಲಿ ಈಗಿರುವ ಮತ್ತು ಹೊಸದಾಗಿ ಕೊರೆಸಲಾದ ಕೊ ಳವೆ ಭಾವಿಗಳಿಗೆ ಮೋಟರ್ ಅಳವಡಿಸಬೇಕು. ಅಲ್ಲಲ್ಲಿ ಜಲ ಮಂಡಳಿಯಿಂದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಕೂಡಿಸಬೇಕು. ಆಯಾ ಕಾಲನಿಯ ಜನರಿಗೆ ನೀರಿನ ಸೌಲಭ್ಯ ಒದಗಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಈ ಸಭೆಯಲ್ಲಿ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಸದಸ್ಯ ವಿಕ್ರಮ ಗಾಯಕವಾಡ, ಜಲಮಂಡಳಿ ಎಕ್ಸಿಕ್ಯೂಟಿವ್ ಎಂಜಿನಿಯರ್ ಪಟ್ಟಣಶೆಟ್ಟಿ, ಎಇಇ ಪಿ. ಪಿ. ಚೆನ್ನಸ್ವಾಮಿ, ಬಿ. ವೈ. ನದಾಫ್, ಜೈನ್ ಇರಿಗೇಶನ್ ಗುತ್ತಿಗೆದಾರರಾದ ದೀಪಕ್ ಪಾಟೀಲ, ವಿಜಯಪುರ ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಂ. ಎಸ್. ಕರಡಿ, ಅಶೋಕ್ ಬೆಲ್ಲದ, ರಾಜೇಶ್ ದೇವಗಿರಿ, ರಾಹುಲ್ ಜಾದವ, ಪರಶುರಾಮ ರಜಪೂತ ಮುಂತಾದವರು ಉಪಸ್ಥಿತರಿದ್ದರು.