ಕೊರೊನಾ ಲಸಿಕೆಗಾಗಿ ಜನರನ್ನು ಕರೆತರಲು ತಮ್ಮ ಸಂಸ್ಥೆಯಿಂದ 10 ವಾಹನ ನೀಡಲು ಶಾಸಕ ಯತ್ನಾಳ ನಿರ್ಧಾರ

ಬಸವ ನಾಡು

ವಿಜಯಪುರ- ಕೊರೊನಾ ಲಸಿಕೆ ಪಡೆಯುವುದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮ ಆಗುವುದಿಲ್ಲ. ಆದ್ದರಿಂದ 45 ವರ್ಷ ಮೇಲ್ಪಟ್ಟವರು ಮತ್ತು 60 ವರ್ಷದೊಳಗಿನವರು ತಪ್ಪದೇ ಕೊರೊನಾ ಲಸಿಕೆ ಪಡೆಯಬೇಕು ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.


ವಿಜಯಪುರ ನಗರದ ವಜ್ರಹನುಮಾನ ದೇವಸ್ಥಾನದ ಆವರಣದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕನಸಾದ ಮನೆ-ಮನೆಗೆ ಕೋವಿಡ್ ವ್ಯಾಕ್ಸಿನ್ ಲಸಿಕೆ ಹಂಚಿಕೆ ಅಭಿಯಾನದ ಅಂಗವಾಗಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಕೊರೊನಾ ಲಸಿಕೆ ಅಭಿಯಾನಕ್ಕೆ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ವಿಶ್ವ ಹಾಗೂ ದೇಶಾದ್ಯಂತ ಕೊರೊನಾ ಎರಡನೇ ಅಲೆ ಆರಂಭವಾಗಿದೆ. ಆದ್ದರಿಂದ ಎಲ್ಲರೂ ಜಾಗೃತರಾಗಿರುವುದರ ಜೊತೆಗೆ ಸರಕಾರದ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು. ಯಾವುದೇ ರೀತಿಯ ನಿರ್ಲಕ್ಷವೂ ಸಮಸ್ಯೆ ಉಲ್ಬಣಕ್ಕೆ ಕಾರಣವಾಗಲಿದೆ. ಎಲ್ಲರೂ ಜಾಗೃತರಾಗಿ ತಕ್ಷಣ ಕೊರೊನಾ ಲಸಿಕೆ ಪಡೆಯಬೇಕು ಎಂದು ಸಲಹೆ ನೀಡಿದರು.


ವಿಜಯಪುರ ಜಿಲ್ಲಾಸ್ಪತ್ರೆ ರಾಜ್ಯದಲ್ಲಿಯೇ ಅತ್ಯುತ್ತಮ ಸೌಲಭ್ಯಗಳುಳ್ಳ ಆಸ್ಪತ್ರೆಯಾಗಿದ್ದು, ಇಲ್ಲಿನ ವೈದ್ಯಾಧಿಕಾರಿ ಮತ್ತು ಸಿಬ್ಬಂದಿಗಳ ಪ್ರಾಮಾಣಿಕ ಪ್ರಯತ್ನ ಮತ್ತು ಕೊರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿರುವುದಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಕೊರೊನಾ 2ನೇ ಅಲೆಯ ಹಿನ್ನೆಲೆಯಲ್ಲಿ ಪ್ರತಿ ಮನೆಮನೆಗೆ ತೆರಳಿ ಪಲ್ಸ್ ಪೋಲೀಯೋ ಮಾದರಿಯಲ್ಲಿ ಲಸಿಕೆ ನೀಡುವಂಥ ವಿನೂತನ ಅಭಿಯಾನವನ್ನು ಇಲ್ಲಿ ಆರಂಭಿಸಲಾಗಿದೆ. ವಿಜಯಪುರ ನಗರ ಪ್ರದೇಶದಲ್ಲಿ ಈ ಲಸಿಕೆಯಲ್ಲಿ ಸೂಕ್ತ ಪ್ರಗತಿ ಸಾಧಿಸಲು ಜಿಲ್ಲಾಡಳಿತಕ್ಕೆ ಸಹಕಾರದ ಅಂಗವಾಗಿ ಸಂಗನ ಬಸವ ಶಿಕ್ಷಣ ಸಂಸ್ಥೆಯ 10 ಶಾಲಾ ವಾಹನಗಳ ಮೂಲಕ ಸಾರ್ವಜನಿಕರನ್ನು ಲಸಿಕಾ ಕೇಂದ್ರಗಳಿಗೆ ಕರೆದೊಯ್ಯಲು ನೆರವು ಒದಗಿಸಲಾಗಿದೆ. ಸಾರ್ವಜನಿಕರು ಕೂಡ ಇದಕ್ಕೆ ಸೂಕ್ತ ಸಹಕಾರ ನೀಡಬೇಕು ಎಂದು ಯತ್ನಾಳ ಮನವಿ ಮಾಡಿದರು.


ಕೊರೊನಾ ಲಸಿಕಾ ಕಾರ್ಯಕ್ರಮದ ಅಂಗವಾಗಿ ಮುಂದಿನ ಒಂದು ವಾರದಲ್ಲಿ ಶೇ. 100 ರಷ್ಟು ಪ್ರಗತಿ ಸಾಧಿಸಲು ಪ್ರಯತ್ನಿಸುವಂತೆ ಆರೋಗ್ಯ ಅಧಿಕಾರಿ, ಸಿಬ್ಬಂದಿಗಳಿಗೆ ಸಲಹೆ ನೀಡಿದ ಅವರು, ಸಾರ್ವಜನಿಕರು ಕೂಡ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಪೊಲೀಸ್ ಇಲಾಖೆಗೆ ಸಹಕರಿಸಬೇಕು, ಮಾರ್ಗಸೂಚಿಗಳನ್ನು ಪಾಲಿಸಬೇಕು. ಸ್ವಯಂ ರಕ್ಷಣೆಗಾಗಿ 45 ವರ್ಷ ಮೇಲ್ಪಟ್ಟವರು ಕೊರೊನಾ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಯತ್ನಾಳ ಸಲಹೆ ನೀಡಿದರು.
ಈ ಲಸಿಕೆಯ ಬಗ್ಗೆ ಯಾವುದೇ ರೀತಿಯ ಅಪಪ್ರಚಾರ ಸರಿಯಲ್ಲ. ಪ್ರಧಾನ ಮಂತ್ರಿಗಳ ಮುತುವರ್ಜಿಯಿಂದ ವಿಶ್ವದಲ್ಲಿಯೇ ಮೊದಲ ಬಾರಿಗೆ ಈ ಲಸಿಕೆ ಸಂಶೋಧಿಸುವ ಜೊತೆಗೆ ದೇಶ-ವಿದೇಶಗಳಿಗೆ ರಫ್ತನ್ನು ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ವಿಶ್ವಾದ್ಯಂತ ಕೊರೊನಾ 2ನೇ ಅಲೆ ಆರಂಭವಾಗಿದ್ದು, ಇದರ ನಿಯಂತ್ರಣಕ್ಕೆ ಲಸಿಕೆ ಅಭಿಯಾನ ಹೆಚ್ಚು ಸಹಕಾರಿಯಾಗಲಿದೆ. ಮುಂದುವರೆದ ರಾಷ್ಟ್ರಗಳಾದ ಅಮೆರಿಕ, ಇಂಗ್ಲೆಂಡ್, ಸ್ಪೇನ್, ಜರ್ಮನಿ ಮತ್ತು ಇಟಲಿ ದೇಶಗಳು ಆರೋಗ್ಯ ವ್ಯವಸ್ಥೆಯಲ್ಲಿ ಉನ್ನತ ಸ್ಥಾನದಲ್ಲಿದ್ದರೂ ಕೂಡ ಇಂಥ ಲಸಿಕೆ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಭಾರತ ಇತರೆ ರಾಷ್ಟ್ರಗಳಿಗಿಂತಲೂ ಮುಂಚಿತವಾಗಿ ಇಂಥ ಲಸಿಕೆಯನ್ನು ಸಂಶೋಧಿಸುವ ಜೊತೆಗೆ ರಾಷ್ಟ್ರದ ಜನತೆಗೆ ಉಚಿತವಾಗಿ ಪೂರೈಸಲು ಕ್ರಮ ಕೈಗೊಂಡಿರುವುದು ಶ್ಲಾಘನೀಯವಾಗಿದೆ. ಇದಕ್ಕೆ ಕಾರಣರಾದ ಪ್ರಧಾನಿ ನರೇಂದ್ರ ಮೋದಿ, ಲಸಿಕೆ ಸಂಶೋಧಿಸಿದ ವಿಜ್ಞಾನಿಗಳು ಮತ್ತು ವೈದ್ಯರಿಗೆ ಅಭಿನಂದನೆ ಸಲ್ಲಿಸುವುದಾಗಿ ಅವರು ತಿಳಿಸಿದರು.
ತಾವು ಕೂಡ ಕೊರೊನಾ ಲಸಿಕೆ ಪಡೆದಿದ್ದು ಯಾವುದೇ ಅಡ್ಡ ಪರಿಣಾಮವಾಗಿಲ್ಲ. ಅಗ್ಗದ ದರದಲ್ಲಿ ಈ ಲಸಿಕೆ ಲಭ್ಯವಾಗಿರುವುದರಿಂದ ಮತ್ತು ಕೊರೋನಾದಿಂದ ದೂರ ಉಳಿಯಲು ಸಹಕಾರಿಯಾಗುವುದರಿಂದ ಮನೆ ಮನೆಗೆ ಕೊರೊನಾ ಲಸಿಕೆ ನೀಡಲು ವೈದ್ಯರು ಬಂದ ಸಂದರ್ಭದಲ್ಲಿ ತಪ್ಪದೆ ಲಸಿಕೆ ಹಾಕಿಸಿಕೊಳ್ಳುವಂತೆ ಸಾರ್ವಜನಿಕರಿಗೆ ಯತ್ನಾಳ ಸಲಹೆ ನೀಡಿದರು.


ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿ 12 ಸಾವಿರ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು. ಆದರೆ, ಗುರಿ ಮೀರಿ 14 ಸಾವಿರ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಕಲಾಗಿದೆ. ಅದೇ ರೀತಿ 8 ಸಾವಿರ ಫ್ರಂಟ್ ಲೈನ್ ವರ್ಕರ್ ಗಳಿಗೆ ಲಸಿಕೆ ಹಾಕುವ ಗುರಿ ಇಟ್ಟುಕೊಳ್ಳಲಾಗಿತ್ತು. ಇಲ್ಲಿಯೂ ಕೂಡ ಗುರಿ ಮೀರಿ 9 ಸಾವಿರ ಜನರಿಗೆ ಲಸಿಕೆ ಹಾಕಲಾಗಿದೆ ಎಂದು ತಿಳಿಸಿದರು.
ವಿಜಯಪುರ ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟ 3.40 ಲಕ್ಷ ಜನರಿದ್ದು, 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ ಸಂಖ್ಯೆ 2.40 ಲಕ್ಷ ಇದೆ. ಹೀಗೆ ಒಟ್ಟು 5.80 ಲಕ್ಷ ಜನರ ಪೈಕಿ ಈವರೆಗೆ 1.40 ಲಕ್ಷ ಜನರು ಲಸಿಕೆ ಪಡೆದಿದ್ದಾರೆ. ನಗರ ಪ್ರದೇಶದಲ್ಲಿ ಶೇ. 100ರಷ್ಟು ಲಸಿಕೆಯಲ್ಲಿ ಪ್ರಗತಿ ಸಾಧಿಸಲು ಜಿಲ್ಲಾಡಳಿತಕ್ಕೆ ಶಾಸಕ ಯತ್ನಾಳ ತಮ್ಮ ಸಂಸ್ಥೆಯ 10 ವಾಹನಗಳನ್ನು ಒದಗಿಸುತ್ತಿರುವುದಕ್ಕೆ ಜಿಲ್ಲಾಧಿಕಾರಿಗಳು ಅಭಿನಂದನೆ ಸಲ್ಲಿಸಿದರು. ಗ್ರಾಮಾಂತರ ಪ್ರದೇಶಗಳಿಗೂ ಈ ಲಸಿಕಾ ಕಾರ್ಯಕ್ರಮ ಪರಿಣಾಮಕಾರಿಯಾಗಿ ಆಯೋಜಿಸಲು ಅವಶ್ಯಕ ಸಹಕಾರ ಕೋರಿದ ಅವರು, ಸಂಬಂಧಪಟ್ಟ 45 ವಯೋಮಾನ ಮೇಲ್ಪಟ್ಟ ಜನರು ಕೊರೊನಾ ಲಸಿಕೆಯನ್ನು ತಪ್ಪದೇ ಪಡೆಯಲು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಶರಣಪ್ಪ ಕಟ್ಟಿ, ಡಾ. ಎಸ್. ಎಲ್. ಲಕ್ಕಣ್ಣವರ್, ಜಿಲ್ಲಾ ಆರ್. ಸಿ. ಎಚ್. ಅಧಿಕಾರಿ ಮಹೇಶ ನಾಗರಬೆಟ್ಟ, ತಾಲೂಕು ವೈದ್ಯಾಧಿಕಾರಿ ಡಾ. ಕವಿತಾ ದೊಡ್ಡಮನಿ, ಡಬ್ಲ್ಯೂ. ಎಚ್. ಓ. ಪ್ರತಿನಿಧಿ ಮುಕುಂದ ಗಲಗಲಿ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಪ್ರೇಮಾನಂದ ಬಿರಾದಾರ, ಮುಖಂಡರಾದ ಪಾಂಡು ಸಾಹುಕಾರ ದೊಡಮನಿ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಜಕುಮಾರ ಎರಗಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಮ ಜಯಂತಿ ಅಂಗವಾಗಿ ಡಾ. ಬಾಬು ಜಗಜೀವನರಾಮ ಅವರ ಭಾವಚಿತ್ರಕ್ಕೆ ಶಾಸಕರು ಮತ್ತು ಗಣ್ಯರು ಗೌರವ ಸಲ್ಲಿಸಿದರು.

Leave a Reply

ಹೊಸ ಪೋಸ್ಟ್‌