ವಿಜಯಪುರ- ವಿಜಯಪುರ ನಗರದ ಇಬ್ರಾಹಿಂಪೂರ ಬಳಿ ನಡೆಯುತ್ತಿರುವ ರೇಲ್ವೆ ಮೇಲ್ಸೇತುವೆ(RoB) ಕಾಮಗಾರಿ ಸ್ಥಳಕ್ಕೆ ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದೇ ವರ್ಷ ಮಾರ್ಚ್ ವೇಳೆಗೆ ಈ ಕಾಮಗಾರಿ ಪೂರ್ಣವಾಗಿ ಸಂಚಾರಕ್ಕೆ ಮುಕ್ತವಾಗಬೇಕಿತ್ತು. ಆದರೆ, ಗುತ್ತಿಗೆದಾರ ಮತ್ತು ರೇಲ್ವೆ ಇಲಾಖೆಗಳ ನಡುವಿನ ಮುಸುಕಿನ ಗುದ್ದಾಟದ ಹಿನ್ನೆಲೆಯಲ್ಲಿ ಈ ಕಾಮಗಾರಿ ಕಳೆದ ಸುಮಾರು ನಾಲ್ಕು ತಿಂಗಳಿಂದ ಬಹುತೇಕ ಸ್ಥಗಿತಗೊಂಡಿದೆ. ಪರಿಣಾಮ ಇಬ್ರಾಹಿಂಪೂರ ಸೇರಿದಂತೆ ರೇಲ್ವೆ ಹಳಿ ಆಚೆಗೆ ಇರುವ ನಾನಾ ಬಡಾವಣೆಗಳ ಜನರು ಸುತ್ತುವರೆದು ಸಂಚಾರ ಮಾಡಬೇಕಾಗಿದೆ. ಇದಿರಂದ ಬೇಸತ್ತಿರುವ ಸಾರ್ವಜನಿಕರು ಸಂಸದರಿಗೆ ಈ ಕುರಿತು ಆಗಾಗ ದೂರು ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ರೇಲ್ವೆ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೇಂದ್ರ ಮಾಜಿ ಸಚಿವರೂ ಆಗಿರುವ ರಮೇಶ ಜಿಗಜಿಣಗಿ, ಆದಷ್ಟು ಬೇಗ ಈ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರಿಗೆ ರಸ್ತೆ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಈ ಕಾಮಗಾರಿಯನ್ನು ಗುತ್ತಿಗೆ ಪಡೆದಿರುವ ಗುತ್ತಿಗೆದಾರ ಮತ್ತು ರೇಲ್ವೆ ಇಲಾಖೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ನಗರಸಭೆ ಮಾಜಿ ಸದಸ್ಯ ರವಿಕಾಂತ ಬಗಲಿ, ಬಿಜೆಪಿ ಮುಖಂಡರಾದ ಸಂಪತ ಕೊವಳ್ಳಿ, ನಾಗರಾಜ ಗುಂದಗಿ, ಅಶೊಕ ಬಾಗೇವಾಡಿ, ವಿಠ್ಠಲ ಬಂಡಿ, ಮಡಿವಾಳಪ್ಪ ಕೋಳೂರಗಿ, ಹೊನ್ನುಟಗಿ ಸ್ವಾಮಿ, ಸುನೀಲಗೌಡ ಬಿರಾದಾರ ಮತ್ತು ಈ ಭಾಗದ ನಾನಾ ಬಡಾವಣೆಗಳ ನಾಗರಿಕರು ಉಪಸ್ಥಿತರಿದ್ದರು.