ಅಕ್ಕಮಹಾದೇವಿ ಮಹಿಳಾ ವಿವಿ ಹಿರಿಯ ಪ್ರಾಧ್ಯಾಪಕ ಪ್ರೊ. ಎಸ್. ಎ. ಖಾಜಿ ಸೇವಾ ನಿವೃತ್ತಿ- ವಿಶಿಷ್ಠ ಸನ್ಮಾನ

ಬಸವ ನಾಡು

ವಿಜಯಪುರ- ವಿಜಯಪುರ ಜಿಲ್ಲೆಯ ತೊರವಿಯಲ್ಲಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಪ್ರೊ. ಎಸ್. ಎ. ಖಾಜಿ ಸೇವಾ ನಿವೃತ್ತಿಯಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಸಮಾಜ ಕಾರ್ಯ ವಿಭಾಗದ ಹಳೆಯ ವಿದ್ಯಾರ್ಥಿನಿಯರ ಸಂಘದ ವತಿಯಿಂದ ಅವರನ್ನು ವಿಶಿಷ್ಟ ರೀತಿಯಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಹಲವಾರು ಸಂಘ ಸಂಸ್ಥೆಗಳಿಂದಲೂ ಸನ್ಮಾನಿಸಿ ಗೌರವಿಸಲಾಯಿತು.
ವಿದ್ಯಾರ್ಥಿನಿಯರ ಸಂಘದ ಪರವಾಗಿ ಮಹಿಳಾ ವಿವಿ ಕುಲಪತಿ ಪ್ರೊ. ಬಿ. ಕೆ. ತುಳಸಿಮಾಲ, ವಿಶ್ರಾಂತ ಕುಲಪತಿ ಡಾ. ಮೀನಾ ಆರ್. ಚಂದಾವರಕರ, ತುಮಕೂರು ವಿವಿ ಕುಲಪತಿ ಪ್ರೊ. ವೈ. ಎಸ್. ಸಿದ್ದೇಗೌಡ ಮತ್ತಿತರರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಪ್ರೊ. ಎಸ್. ಎ. ಖಾಜಿ ಅವರ ಗೌರವಾರ್ಥ ಹೊರ ತಂದಿರುವ “ಹೆಲ್ತ್ ಅಂಡ್ ಮೆಂಟಲ್ ಹೆಲ್ತ್ ಇನ್ ಇಂಡಿಯಾ” ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಪುಸ್ತಕದ ಕುರಿತು ಕಲಬುರಗಿ ಕೇಂದ್ರಿಯ ವಿಶ್ವವಿದ್ಯಾನಿಲಯದ ಪ್ರೊ. ಚನ್ನವೀರ ಆರ್. ಎಂ. ಅವರು ಮಾತನಾಡಿದರು.
ಕಾರ್ಯಕ್ರಮದ ಅಂಗವಾಗಿ ಪ್ರೊ. ಎಸ್. ಎ. ಖಾಜಿ ಅವರ ಜೀವನ ಸಾಧನೆ ಕುರಿತ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು. ಪ್ರೊ. ಎಸ್. ಎ. ಖಾಜಿ ಅವರ ಹೆಸರಿನಲ್ಲಿ ಚಿನ್ನದ ಪದಕ ಸ್ಥಾಪನೆಗಾಗಿ ಮಹಿಳಾ ವಿವಿಯ ಸಹಾಯಕ ಪ್ರಾಧ್ಯಾಪಕಿ ಡಾ. ಕಲಾವತಿ ಕಾಂಬಳೆ ಅವರು ರೂ. 50 ಸಾವಿರ ಚೆಕ್‍ನ್ನು ಕುಲಪತಿ ಪ್ರೊ. ಬಿ. ಕೆ. ತುಳಸಿಮಾಲ ಅವರಿಗೆ ಹಸ್ತಾಂತರಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಬಿ. ಕೆ. ತುಳಸಿಮಾಲ ಅವರು, ಪ್ರೊ. ಎಸ್. ಎ. ಖಾಜಿ ಅವರು ಪ್ರಾಧ್ಯಾಪಕರಾಗಿ, ಸಂಶೋಧಕರಾಗಿ ಮತ್ತು ದಕ್ಷ ಆಡಳಿತಗಾರರಾಗಿ ಮಹಿಳಾ ವಿವಿಯ ಶ್ರೇಯೋಭಿವೃದ್ಧಿಗೆ ಅವಿರತವಾಗಿ ದುಡಿದಿದ್ದಾರೆ. ಅವರ ಸೇವೆ ವಿವಿಗೆ ಮುಂದಿನ ದಿನಗಳಲ್ಲಿಯೂ ದೊರೆಯುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಪ್ರೊ. ಎಸ್. ಎ. ಖಾಜಿ ಅವರು ಮೌಲ್ಯಾಧಾರಿತ ಬದುಕಿನ ಜೊತೆಗೆ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿ ಸಂತೃಪ್ತಿಯಿಂದ ನಿವೃತ್ತರಾಗುತ್ತಿರುವುದು ಅತ್ಯಂತ ಸಂತಸದ ಸಂಗತಿ ಎಂದು ಅವರು ಹೇಳಿದರು.
ಮಹಿಳಾ ವಿವಿಯ ವಿಶ್ರಾಂತ ಕುಲಪತಿ ಪ್ರೊ. ಮೀನಾ ಆರ್. ಚಂದಾವರಕರ ಮಾತನಾಡಿ, ಪ್ರೊ. ಎಸ್. ಎ. ಖಾಜಿ ಅವರು ಸದಾ ಹಸನ್ಮುಖಿಯಾಗಿರುತ್ತಿದ್ದರು. ಆಡಳಿತದ ಕಠಿಣ ಸಂದರ್ಭಗಳಲ್ಲಿಯೂ ಅತ್ಯಂತ ತಾಳ್ಮೆ, ಸಹನೆ ಮತ್ತು ವಿವೇಕದಿಂದ ವರ್ತಿಸುವ ಮೂಲಕ ತಾವೊಬ್ಬ ದಕ್ಷ ಆಡಳಿತಗಾರ ಎಂಬುದನ್ನು ಸಾಬೀತು ಮಾಡಿದ್ದರು ಎಂದು ಪ್ರಶಂಸಿಸಿದರು.

Leave a Reply

ಹೊಸ ಪೋಸ್ಟ್‌