ಬಸವ ನಾಡಿನಲ್ಲಿ ಜಿಲ್ಲಾಡಳಿತದಿಂದ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ ಜಯಂತಿ ಆಚರಣೆ

ಬಸವ ನಾಡು

ವಿಜಯಪುರ- ಸಂವಿಧಾನ ಶಿಲ್ಪಿ, ಭಾರತ ರತ್ನ, ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಮನುಕುಲಕ್ಕೆ ಮತ್ತು ಶೋಷಿತ ವರ್ಗಗಳಿಗೆ ನ್ಯಾಯ ಒದಗಿಸಿದ್ದಾರೆ. ಅವರ ವಿಚಾರ ಧಾರೆಗಳನ್ನು ಸಮಾಜಕ್ಕೆ ತಿಳಿಹೇಳುವ ಕೆಲಸವಾಗಬೇಕಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಹೇಳಿದ್ದಾರೆ.
ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ವಿಜಯಪುರ ನಗರದ ಜಿಲ್ಲಾ ಕ್ರೀಡಾಂಗಣ ವ್ಯಾಪ್ತಿಯಲ್ಲಿ ಸ್ಥಾಪಿಸಲಾದ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಡಾ. ಬಿ.ಆರ್. ಅಂಬೇಡ್ಕರ್ ಅವರ 130 ನೇ ಜನ್ಮ ದಿನಾಚರಣೆಯ ಅಂಗವಾಗಿ ಗೌರವ ಸಲ್ಲಿಸಿ ಅವರು ಮಾತನಾಡಿದರು.
ಸಂವಿಧಾನ ಹಾಗೂ ಸಂವಿಧಾನದ ಪೀಠಿಕೆ ಅನ್ವಯ ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ. ಮಾನವ ಕುಲಕ್ಕೆ, ಮಹಿಳಾ ಸಮಾನತೆಗೆ ಹಾಗೂ ಶೋಷಿತ ವರ್ಗಗಳಿಗೆ ಅಂಬೇಡ್ಕರ್ ಅವರು ನ್ಯಾಯ ಒದಗಿಸುವ ಮಹತ್ವಾಕಾಂಕ್ಷೆಯಿಂದ ಸಂವಿಧಾನದ ಮೂಲಕ ನ್ಯಾಯ ಒದಗಿಸಿದ್ದಾರೆ. ಡಾ. ಅಂಬೇಡ್ಕರ್ ಅವರ ತತ್ವ ಮತ್ತು ಸಿದ್ಧಾಂತಗಳು ಹಾಗೂ ಆದರ್ಶಗಳು ನಮಗೆಲ್ಲರಿಗೂ ಇಂದಿಗೂ ದಾರಿದೀಪವಾಗಿವೆ. ಅದರಂತೆ ಅವರ ವಿಚಾರ ಧಾರೆಗಳನ್ನು ಮುಂದಿನ ಪೀಳಿಗೆಗೆ ತಿಳಿಸಿ ಕೊಡಬೇಕು ಎಂದು ಕರೆ ನೀಡಿದರು.
ಸಂವಿಧಾನದ ಮೂಲಕ ಪಂಚಾಯಿತಿ ರಾಜ್ ವ್ಯವಸ್ಥೆ ಪ್ರತಿಪಾದಿಸಿ ಗ್ರಾಮಗಳಲ್ಲಿ ಸಮಾನತೆಗೆ ಒತ್ತು ನೀಡಿದ ಅವರು ಕಾರ್ಮಿಕ ವರ್ಗಗಳಿಗೆ, ಶೋಷಿತ ವರ್ಗಗಳಿಗೆ ಹಾಗೂ ಪ್ರತಿಯೊಂದು ಸಮುದಾಯಗಳಿಗೆ ನ್ಯಾಯ ದೊರಕಿಸುವ ಜೊತೆಗೆ ಸಮಾನತೆಯನ್ನು ಪ್ರತಿಪಾದಿಸಿದ್ದಾರೆ. ಅಂಬೇಡ್ಕರ್ ಅವರು ನೀಡಿದ ತ್ಯಾಗ, ಬಲಿದಾನವನ್ನು ಎಲ್ಲ ಪ್ರಜೆಗಳು ಅರ್ಥ ಮಾಡಿಕೊಳ್ಳುವುದರ ಜೊತೆಗೆ ಮುಂದಿನ ಪೀಳಿಗೆಗೆ ಅವರ ವಿಚಾರ ಧಾರೆಗಳನ್ನು ತಿಳಿಸಿ ಕೊಡಬೇಕು ಎಂದು ಜಿಲ್ಲಾಧಿಕಾರಿಗಳು ಕರೆ ನೀಡಿದರು.


ಜನಪ್ರತಿನಿಧಿಗಳ ಕಾಳಜಿ ಹಾಗೂ ಹೋರಾಟದ ಫಲವಾಗಿ ಜಿಲ್ಲಾಡಳಿತದ ಮೂಲಕ ಡಾ. ಬಿ.ಆರ್. ಅಂಬೇಡ್ಕರ್ ಅವರ ಮೂರ್ತಿಯನ್ನು ಜಿಲ್ಲಾ ಕ್ರೀಡಾಂಗಣದ ವ್ಯಾಪ್ತಿಯಲ್ಲಿ ಸ್ಥಾಪಿಸಿದ್ದು, ಮುಂದಿನ ದಿನಗಳಲ್ಲಿ ಅಂಬೇಡ್ಕರ್ ವೃತ್ತದಲ್ಲಿ ಡಾ. ಬಿ.ಆರ್. ಅಂಬೇಡ್ಕರ ಅವರ ನೂತನ ಪ್ರತಿಮೆ ಪ್ರತಿಷ್ಠಾಪಿಸಿ, ಮುಂಬರುವ ವರ್ಷಗಳಿಂದ ಜಯಂತಿ ಅಂಗವಾಗಿ ಅಲ್ಲಿಯೇ ಗೌರವಾರ್ಪಣೆ ಕಾರ್ಯ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ತಿಳಿಸಿದರು.
ಜಾತಿ, ಭೇದ, ತೊಲಗಿಸಿ, ಅವತಾರ ಪುರುಷ ಜನಿಸಿ ಸಂವಿಧಾನದ ಮೂಲಕ ನ್ಯಾಯ ಒದಗಿಸಿಕೊಟ್ಟ ಡಾ. ಬಿ. ಆರ್. ಅಂಬೇಡ್ಕರ್ ಅವರ ಕುರಿತು ಜೋಗುಳ ಹಾಡನ್ನು ಹಾಡುವ ಮೂಲಕ ಬಸಮ್ಮ ನಡುವಿನಮನಿ ಹಾಗೂ ಪೀರಪ್ಪ ನಡುವಿನಮನಿ ಅವರು ಎಲ್ಲರ ಗಮನ ಸೆಳೆದರು.
ಈ ಸಂದರ್ಭದಲ್ಲಿ ಬೌದ್ಧ ಧರ್ಮದ ಪ್ರಾರ್ಥನೆ ಪಠಣ ಮಾಡುವ ಮೂಲಕ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಸ್ಮರಿಸಿ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ ಅಗ್ರವಾಲ, ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ ಲಕ್ಷ್ಮಣ ಅರಸಿದ್ಧಿ, ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ, ವಿಜಯಪುರ ಉಪವಿಭಾಗಾಧಿಕಾರಿ ಬಲರಾಮ ಲಮಾಣಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಮನಗೌಡ, ಕ್ರೀಡಾಧಿಕಾರಿ ಎಸ್. ಜಿ. ಲೋಣಿ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಸಮಾಜದ ಮುಖಂಡರು ಹಾಗೂ ನಿವೃತ್ತ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರಾದ ಕ್ಯಾತನ್, ಮುಖಂಡರಾದ ಅಡಿವೆಪ್ಪ ಸಾಲಗಲ, ಅಭಿಷೇಕ ಚಕ್ರವರ್ತಿ, ಜಿತೇಂದ್ರ ಕಾಂಬಳೆ, ಸೋಮನಗೌಡ ಕಲ್ಲೂರು, ಸಿದ್ದು ರಾಯಣ್ಣವರ, ನಾಗರಾಜ ಲಂಬು, ಬಿ. ಎಚ್. ನಾಡಗಿರಿ, ಬಸವಂತ ಗುಣದಾಳ, ಅಮರಪ್ಪ ಚಲವಾದಿ, ವಿಜಯಕುಮಾರ ಸೂರ್ಯವಂಶಿ, ನಿಜಪ್ಪ ಮೇಲಿನಕೇರಿ, ಆರ್. ಬಿ. ಬಡಿಗೇರ, ಭೀಮರಾಯ ಜಿಗಜಿಣಗಿ ಸೇರಿದಂತೆ ಇತರರು ಉಪಸ್ಥಿತರಿದ್ದು ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಿದರು.

Leave a Reply

ಹೊಸ ಪೋಸ್ಟ್‌