ವಿಜಯಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಾ. ಬಿ. ಆರ್. ಅಂಬೇಡ್ಕರ ಜಯಂತಿ ಆಚರಣೆ

ಬಸವನಾಡು

ವಿಜಯಪುರ- ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ ಅವರ ಜಯಂತಿಯನ್ನು ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಸರಳವಾಗಿ ಆಚರಿಸಲಾಗುತ್ತಿದೆ. ಡಾ. ಬಿ. ಆರ್. ಅಂಬೇಡ್ಕರ ಅವರು ಸಂವಿಧಾನದ ಮೂಲಕ ಸಮಾಜಕ್ಕೆ ನೀಡಿದ ಕೊಡುಗೆಗಳು, ಅವರ ವಿಚಾರಧಾರೆಗಳು ಎಲ್ಲರಿಗೂ ದಾರಿದೀಪಗಳಾಗಿದ್ದು, ಸಮಾಜದ ಪ್ರತಿಯೊಬ್ಬರೂ ಅವರ ತತ್ವ, ಆದರ್ಶಗಳನ್ನು ಅರ್ಥಮಾಡಿಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಕರೆ ನೀಡಿದ್ದಾರೆ.


ವಿಜಯಪುರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಡಾ. ಬಿ. ಆರ್. ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮ ಉದ್ಗಾಟಿಸಿ ಅವರು ಮಾತನಾಡಿದರು.

ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ್ ಮಾತನಾಡಿ, ಈ ದೇಶದ ಪ್ರತಿ ಸಮಾಜಕ್ಕೆ ತಮ್ಮದೇ ಆದ ಹಕ್ಕುಗಳನ್ನು ಸಂವಿಧಾನದ ಮೂಲಕ ನೀಡಿದವರು ಡಾ. ಬಿ. ಆರ್. ಅಂಬೇಡ್ಕರ. ಸಾಮಾಜಿಕ, ಆರ್ಥಿಕ, ರಾಜಕೀಯ, ನ್ಯಾಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಸಮಾನತೆ, ರಾಷ್ಟ್ರೀಯ ಐಕ್ಯತೆ, ವ್ಯಕ್ತಿಗೌರವ, ಮಹಿಳೆಯರಿಗೆ ಸ್ವಾತಂತ್ರ್ಯ ಮತ್ತು ಹಕ್ಕುಗಳು ,ಸಾಮಾಜಿಕ ನ್ಯಾಯ, ಪ್ರಜಾಸತ್ತಾತ್ಮಕ, ಪ್ರಜಾಪ್ರಭುತ್ವ ವ್ಯವಸ್ಥೆ ಜಾತಿ ಪದ್ಧತಿ ನಿರ್ಮೂಲನೆ, ಸೇರಿದಂತೆ ಪ್ರತಿಯೊಂದು ಸಮಾಜದ ಪ್ರತಿ ಸಮುದಾಯಕ್ಕೆ ಮತ್ತು ದೇಶದ ಉನ್ನತಿಗಾಗಿ ಸಂವಿಧಾನದ ಮೂಲಕ ಅಂಬೇಡ್ಕರ ಮಾರ್ಗದರ್ಶನ ನೀಡಿದ್ದಾರೆ. ಸ್ವ-ಸಹಾಯದ ಮೂಲಕ ದೇಶದ ಸಹಾಯಕ್ಕೆ ಅವರು ಒತ್ತು ನೀಡಿದ್ದು ನಾವೆಲ್ಲರೂ ಒಂದು ಎಂದು ಭಾವಿಸಿ ಮುನ್ನಡೆಯಬೇಕು ಎಂದು ಕರೆ ನೀಡಿದರು.


ಈ ಸಂದರ್ಭದಲ್ಲಿ ಸೋಮಲಿಂಗ ಗೆಣ್ಣೂರ ರಚಿತ ಡಾ. ಬಿ. ಆರ್. ಅಂಬೇಡ್ಕರ್ ಮಾರ್ಗ ಪುಸ್ತಕವನ್ನು ಸಂಸದ ರಮೇಶ ಜಿಗಜಿಣಗಿ ಮತ್ತು ಇತರ ಗಣ್ಯರು ಬಿಡುಗಡೆ ಮಾಡದಿರು.
ಇದೇ ಸಂದರ್ಭದಲ್ಲಿ ದಲಿತ ವಿದ್ಯಾರ್ಥಿ ವಿದ್ಯಾರ್ಥಿ ಪರಿಷತ ವತಿಯಿಂದ ವಿದ್ಯಾರ್ಥಿಗಳಿಗೆ ಧನಸಹಾಯದ ಚೆಕ್ ನ್ನು ಐದು ಜನ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.


ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ ಅಗ್ರವಾಲ, ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಉಪವಿಭಾಗಾಧಿಕಾರಿ ಬಲರಾಮ ಲಮಾಣಿ, ಮುಖಂಡರಾದ ಅಡಿವೆಪ್ಪ ಸಾಲಗಲ, ಅಭಿಷೇಕ ಚಕ್ರವರ್ತಿ, ಸಿದ್ದು ರಾಯಣ್ಣವರ, ಜಿತೇಂದ್ರ ಕಾಂಬಳೆ, ಸೋಮನಗೌಡ ಕಲ್ಲೂರು, ಶರಣು ಕುಂಬಾರ, ಮಹಾದೇವ ಕಬಾಡೆ, ಭೀಮರಾಯ ಜಿಗಜಿಣಗಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌