ಎಲ್ಲರ ಚಿತ್ತ ಸ್ವಾಮೀಜಿಯತ್ತ- ಸ್ವಾಮೀಜಿ ದೃಷ್ಠಿ ಪುಟ್ಟ ಬಾಲಕಿಯತ್ತ- ಬಸವ ನಾಡಿನಲ್ಲಿಂದು ಗಮನ ಸೆಳೆದ ಪ್ರಸಂಗ

ಬಸವ ನಾಡು

ವಿಜಯಪುರ- ಇದು ಅಪರೂಪದ ಪ್ರಸಂಗ. ಇಂಥ ಘಟನೆಯನ್ನು ನ್ಯೂಸ್ ಸೆನ್ಸ್ ಮೂಲಕ ಸೆರೆ ಹಿಡಿದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಾಕುವ ಮೂಲಕ ಗಮನ ಸೆಳೆದವರು ಪ್ರತಿಷ್ಠಿತ ಬಿ. ಎಲ್. ಡಿ. ಇ. ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಹಾಂತೇಶ ಬಿರಾದಾರ.
ಡಾ. ಮಹಾಂತೇಶ ಬಿರಾದಾರ ಫೇಸ್ ಬುಕ್ ನಲ್ಲಿ ಹಂಚಿಕೊಂಡಿರುವ ಈ ಘಟನೆ ಈಗ ಮೆಚ್ಚುಗೆಗೆ ಪಾತ್ರವಾಗಿದೆ. ಅಷ್ಟಕ್ಕೂ ಆಗಿದ್ದೇನೆಂದರೆ ಸುತ್ತೂರು ದೇಶಿಕೇಂದ್ರ ಸ್ವಾಮೀಜಿ ಮೈಸೂರಿನಿಂದ ಹೊರಟು ಬೀದರ ಜಿಲ್ಲೆಯ ಭಾಲ್ಕಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೋಂಡು ವಿಜಯಪುರಕ್ಕೆ ಆಗಮಿಸಿದ್ದಾರೆ. ಈವರೆಗೆ ತಮ್ಮ ಜೊತೆಯಲ್ಲಿಯೇ ಇದ್ದ ವಿಜಯಪುರ ಜ್ಞಾನಯೋಗಾಶ್ರಮದ ನಡೆದಾಡುವ ದೇವರು ಎಂದೇ ಖ್ಯಾತರಾಗಿರುವ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರನ್ನು ಹೆಲಿಕಾಪ್ಟರ್ ನಲ್ಲಿ ಕರೆದುಕೊಂಡು ಬಂದಿದ್ದರು.


ಈ ವಿಷಯ ತಿಳಿದಿದ್ದ ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ಸಂಸ್ಥೆಯ ಆಡಳಿತಾಧಿಕಾರಿ ರಾಘವೇಂದ್ರ ಕುಲಕರ್ಣಿ ಮತ್ತು ಡಾ. ಮಹಾಂತೇಶ ಬಿರಾದಾರ ಹಾಗೂ ಇತರ ಗಣ್ಯರು ಹೆಲಿಪ್ಯಾಡ್ ಗೆ ತೆರಳಿದ್ದರು. ಆಗ ನಡೆದ ಈ ಘಟನೆ ಸುತ್ತೂರು ಶ್ರೀಗಳ ಸರಳತೆಗೆ ಮತ್ತು ದೃಷ್ಠಿಕೋನಕ್ಕೆ ಸಾಕ್ಷಿಯಾಯಿತು.
ಡಾ. ಮಹಾಂತೇಶ ಬಿರಾದಾರ ಹಂಚಿಕೊಂಡ ವಿಚಾರದಂತೆ ದೈವೀಪುರುಷರು ಎಲ್ಲೆಡೆ ದೈವವನ್ನೇ ಕಾಣುತ್ತಾರೆ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿ ಇಂದು ಜರುಗಿತು.


ವಿಜಯಪುರಕ್ಕೆ ಇಂದು ಹೆಲಿಕ್ಯಾಪ್ಟರ್ ಮೂಲಕ ಆಗಮಿಸಿದ ಆದಿ ಜಗದ್ಗುರು ಸುತ್ತೂರು ಮಹಾಸಂಸ್ಥಾನ ಮಠದ ಪರಮಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರು ಹೆಲಿಕ್ಯಾಪ್ಟರ್ ನಲ್ಲಿ ಇಳಿಯುತ್ತಿದ್ದಂತೆ, ಬರಮಾಡಿಕೊಳ್ಳಲು ನಾನು ಮತ್ತು ಬಿಎಲ್ ಡಿಇ ಸಂಸ್ಥೆ ಆಡಳಿತಾಧಿಕಾರಿ ಶ್ರೀ ರಾಘವೇಂದ್ರ ಕುಲಕರ್ಣಿ ಮತ್ತು ಇತರೆ ಗಣ್ಯರು ನಿಂತಿದ್ದೆವು.
ಶ್ರೀಗಳಿಗೆ ಮಾಲಾರ್ಪಣೆ ಮಾಡಿ ಸ್ವಾಗತಿಸಲು ದ ಕುಲಕರ್ಣಿಯವರು ಮುಂದಾದಾಗ ಶ್ರೀಗಳು ಆ ಮಾಲೆಯನ್ನು ತಕ್ಷಣ ನನ್ನ ಹಿಂದೆ ನಿಂತಿದ್ದ ಪುಟ್ಟ ಕುವರಿಯತ್ತ ಅವರ ಗಮನ ಹೋಗಿ ಅವಳಿಗೆ ಕೈಹಿಡಿದು ಕರೆತಂದು ಆ ಹಾರವನ್ನು ಹಾಕಿ ಆಶೀರ್ವದಿಸಿದರು.


ಪರಮಪೂಜ್ಯ ಸಿದ್ಧೇಶ್ವರ ಮಹಾಸ್ವಾಮಿಗಳು, ಸುತ್ತೂರು ಮಹಾ ಸ್ವಾಮಿಗಳನ್ನು ಸ್ವಾಗತಿಸಲು ಸೇರಿದ್ದ ಗಣ್ಯರು,ಭಕ್ತಗಣದ ಜನಜಂಗುಳಿ ಹಾಗೂ ಹೆಲಿಕಾಪ್ಟರ್ ನೋಡಲು ಆಗಮಿಸಿದ ಹಲವರ ದಾಂಗುಡಿಯ ಮಧ್ಯದಲ್ಲಿಯೂ ಪೂಜ್ಯ ಸುತ್ತೂರು ಶ್ರೀಗಳ ಗಮನ ಆ ಪುಟ್ಟ ಬಾಲಕಿಯತ್ತ ಹೋಗಿದ್ದೆ ನನಗೆ ಪವಾಡವೆಂಬಂತೆ ಗೋಚರಿಸಿತು.
ಶ್ರೀಗಳಿಂದ ಹಾರ ಹಾಕಿ ಆಶೀರ್ವಾದ ಪಡೆದ ಕು.ಅದ್ವಿತಾ ಚಂದ್ರಕಾಂತ್, ನಾಡಿನ ಹಿರಿಯ ರಾಜಕೀಯ ನಾಯಕರು ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷರೂ ಬಸವತತ್ವ ನಿಷ್ಠರು ಆಗಿರುವ ಬಳ್ಳಾರಿಯ ಶರಣ ಶ್ರೀ ಎನ್. ತಿಪ್ಪಣ್ಣನವರ ವಂಶದ ಕುಡಿ.
ಈ ಕುವರಿಯ ತಂದೆ ಬೆಂಗಳೂರಿನಲ್ಲಿರುವ ದಕ್ಷ ಪೋಲಿಸ್ ಅಧಿಕಾರಿ ಚಂದ್ರಕಾಂತ್ ಎಲ್.ಟಿ. ನನಗೆ ಸಂಬಂಧಿಗಳಾದ ಕಾರಣ ಸದ್ಯ ವಿಜಯಪುರದ ನಮ್ಮ ಮನೆಯಲ್ಲಿರುವ ಕು.ಅದ್ವಿತಾ, ಶ್ರೀಗಳನ್ನು ಸ್ವಾಗತಿಸಲು ನಾನು ತಯಾರಾಗುವಾಗ, ಊಟಕ್ಕೆ ಕುಳಿತಿದ್ದ ಅವಳು ಬೇಗ ಬೇಗ ಊಟ ಮಾಡಿ ತಾನೂ ಬರುತ್ತೇನೆಂದು ಹಠ ಹಿಡಿದು ನನ್ನ ಜೊತೆ ಹೆಲಿಪ್ಯಾಡ್ ವರೆಗೆ ಬಂದಿದ್ದಳು.


ಅದಕ್ಕೆ ಹೇಳಿದ್ದು, ಹೆಲಿಪ್ಯಾಡ್ ನಲ್ಲಿ ಎಲ್ಲರ ದೃಷ್ಠಿ ಶ್ರೀಗಳ ಮೇಲಿದ್ದರೆ, ಶ್ರೀಗಳ ನೋಟ ಮಾತ್ರ ಪುಟ್ಟ ಬಾಲಕಿಯ ಮೇಲಿದ್ದು ಆಕೆಯನ್ನು ಹಾರ ಹಾಕಿ ಆಶೀರ್ವದಿಸುವ ಮೂಲಕ ಶುಭ ಕೋರಿದ್ದು ಮಾತ್ರ ಸ್ವಾಮೀಜಿಗಳ ಸರಳತೆ ಪ್ರತ್ಯಕ್ಷ ಸಾಕ್ಷಿಯಾಗಿತ್ತು.

Leave a Reply

ಹೊಸ ಪೋಸ್ಟ್‌