10 ತಿಂಗಳಲ್ಲಿ ವಿಜಯಪುರ ವಿಮಾನ ನಿಲ್ದಾಣ ಮೊದಲ ಹಂತದ ಕಾಮಗಾರಿ ಪೂರ್ಣ- ಸಂಸದ ರಮೇಶ ಜಿಗಜಿಣಗಿ

ಬಸವ ನಾಡು

ವಿಜಯಪುರ- ಬಹು ನಿರೀಕ್ಷಿತ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ನಿಗದಿಗಿಂತ ಮೊದಲೇ ಪೂರ್ಣವಾಗಲಿದೆ ಎಂದು ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಯ ಬುರಣಾಪುರ ಬಳಿ ನಡೆಯುತ್ತಿರುವ ವಿಮಾನ ನಿಲ್ದಾಣ ಕಾಮಗಾರಿ ಸ್ಥಳಕ್ಕೆ ರಮೇಶ ಜಿಗಜಿಣಗಿ ಅವರು ಅಧಿಕಾರಿಗಳ ಜೊತೆ ಭೇಟಿ ನೀಡಿದರು. ಕಾಮಗಾರಿ ಪರಿಶೀಲನೆ ನಡೆಸಿದರು. ಈ ಕಾಮಗಾರಿಗೆ ನೀಡಲಾಗಿರುವ ಹಣ ಮತ್ತು ನಿಗದಿತ ಸ್ಥಳದ ಬಗ್ಗೆ ಕೆಲವು ಜನಪ್ರತಿನಿಧಿಗಳು ಅಪಸ್ವರ ಎತ್ತಿದ್ದರು. ಈ ಹಿನ್ನೆಲೆಯಲ್ಲಿ ಈ ಹಿಂದೆಯೇ ಈ ಕುರಿತು ಸ್ಪಷ್ಟನೆ ನೀಡಿದ್ದ ರಮೇಶ ಜಿಗಜಿಣಗಿ ಈ ಯೋಜನೆಯನ್ನು ಜಾರಿ ಮಾಡಿಯೇ ತೀರುವುದಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿದ ಬಳಿಕ ಇದೇ ಮೊದಲ ಬಾರಿಗೆ ಅವರು ಬುರಣಾಪುರಕ್ಕೆ ತೆರಳಿ ಕಾಮಗಾರಿ ಪರಿಶೀಲನೆ ನಡೆಸಿದರು. ಅವರು, ನಂತರ ಈ ಕುರಿತು ಮಾಧ್ಯಮದವರ ಜೊತೆ ಮಾತನಾಡಿದರು.


ಊಗ ಕಾಮಗಾರಿಯನ್ನು ಸಮರೋಪಾದಿಯಲ್ಲಿ ಮಾಡಲಾಗುತ್ತಿದೆ. ದಿನದ 24 ಗಂಟೆಗಳ ಕಾಲ ಕೆಲಸ ನಡೆಯುತ್ತಿರುವುದರಿಂದ ಸಂತಸವಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ಮೊದಲ ಹಂತದ ಕಾಮಗಾರಿಗೆ 11 ತಿಂಗಳ ಕಾಲಾವಧಿ ನಿಗದಿ ಪಡಿಸಲಾಗಿದೆ. ಆದರೆ, ಈಗ ನಡೆದಿರುವ ಕಾಮಗಾರಿಯ ವೇಗವನ್ನು ಗಮನಿಸಿದರೆ ಕೇವಲ 10 ತಿಂಗಳಲ್ಲಿ ಈ ಕಾಮಗಾರಿ ಮುಕ್ತಾಯವಾಗುವ ವಿಶ್ವಾಸವಿದೆ.


ರೂ. 95 ಕೋ. ರೂ ವೆಚ್ಚದಲ್ಲಿ ಮೊದಲ ಹಂತದ ಕಾಮಗಾರಿ ನಡೆಯುತ್ತಿದೆ. ಎಸ್. ಎಸ್. ಆಲೂರ ಎಂಬ ಗುತ್ತಿಗೆದಾರರು ಕಾಮಗಾರಿ ಕೈಗೆತ್ತಿಕೊಂಡಿದ್ದು, ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. 2ನೇ ಹಂತದ ಕಾಮಗಾರಿಯ ಟೆಂಡರ್ ಕರೆಯುವ ಕುರಿತು ಡಿಸಿಎಂ ಮತ್ತು ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಈಗಾಗಲೇ ತಮ್ಮ ಜೊತೆ ಮತ್ತು ಅಧಿಕಾರಿಗಳ ಜೊತೆ ಮಾತನಾಡಿದ್ದಾರೆ. ಆದಷ್ಟು ಬೇಗನೇ ಆ ಕಾಮಗಾರಿಗೂ ಟೆಂಡರ್ ಕರೆಯಲಾಗುವದುದು. ಒಟ್ಟಾರೆ ರೂ. 220 ಕೋಟಿ ವೆಚ್ಚದ ಎರಡು ಹಂತದ ಯೋಜನೆ ಇದಾಗಿದೆ ಎಂದು ಅವರು ರಮೇಶ ಜಿಗಜಿಣಗಿ ತಿಳಿಸಿದರು.


ಈ ಸಂದರ್ಭದಲ್ಲಿ ಬಿಡಿಎ ಮಾಜಿ ಅಧ್ಯಕ್ಷ ಭೀಮಾಶಂಕರ ಹದನೂರು, ಲೋಕೋಪಯೋಗಿ ಇಲಾಖೆ ಎಕ್ಸಿಕ್ಯೂಟಿವ್ ಎಂಜಿನಿಯರ್ ಬಿ. ಬಿ. ಪಾಟೀಲ, ಅಸಿಸ್ಟಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಆರ್. ಕೆ. ಮುಜುಮದಾರ, ವಿಮಾನ ನಿಲ್ದಾಣ ಯೋಜನೆಯ ಅಡೆಕ್ ಟೀಮ್ ಲೀಡರ್ ಟೀಮ್ ಲೀಡರ್ ಐಡೆಕ್ ಪ್ರಕಾಶ, ಗುತ್ತಿಗೆದಾರ ಎಸ್. ಎಸ್. ಆಲೂರ, ಬಿಜೆಪಿ ಮುಖಂಡರಾದ ಚಿದಾನಂದ ಚಲವಾದಿ, ವಿಜಯ ಜೋಶಿ, ರಾಜು ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌