ಗುಮ್ಮಟ ನಗರಿಯಲ್ಲಿ ಕೊರೊನಾ ಲಸಿಕೆ ಅಭಿಯಾನವನ್ನು ಮುಂದುವರೆಸಿದ ಶಾಸಕ ಯತ್ನಾಳ

ಬಸವ ನಾಡು

ವಿಜಯಪುರ- ಗುಮ್ಮಟ ನಗರಿ ವಿಜಯಪುರದಲ್ಲಿ ಕೊರೊನಾ 2ನೇ ಅಲೆಯಿಂದಾಗಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ಲಸಿಕೆ ಅಭಿಯಾನವನ್ನೂ ಹೆಚ್ಚಿಸಲಾಗಿದೆ.
ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕೂಡ ಸ್ವತಃ ನಾನಾ ಬಡಾವಣೆಗಳಲ್ಲಿ ಕೊರೊನಾ ಲಸಿಕೆ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಮೂಲಕ ಕೊರೊನಾ ಬಗ್ಗೆ ಜಾಗೃತಿಗೆ ಮುಂದಾಗಿದ್ದಾರೆ. ಈ ಮುಂಚೆ ವಿಜಯಪುರ ನಗರದಲ್ಲಿ ಶೇ. 4 ರಷ್ಟಿದ್ದ ಕೊರೊನಾ ಲಸಿಕೆ ಪಡೆದವರ ಸಂಖ್ಯೆ ಈಗ ಶೇ. 40ಕ್ಕೆ ಹೆಚ್ಚಾಗಿದೆ. ಸಾರ್ವಜನಿಕರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪಡೆಯುವಂತಾಗಲು ಯತ್ನಾಳ ಈಗ ಕಾರ್ಯೋನ್ಮುಖರಾಗಿದ್ದು, ದಿನಕ್ಕೆರಡು ಬಡಾವಣೆಗಳಲ್ಲಿ ಆರೋಗ್ಯಾಧಿಕಾರಿಗಳೊಂದಿಗೆ ಲಸಿಕೆ ಕಾರ್ಯಕ್ರಮಗಳಿಗೆ ಚಾಲನೆ ನೀಡುತ್ತಿದ್ದಾರೆ.
ಶಾಸಕ ಬಸನಗೌಡ ಪಾಟೀಲ ಯತ್ನಾಳ ತಮ್ಮ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ನಿರ್ಮಿಸಿದ ಚಾಲುಕ್ಯ ನಗರದ ಮಹೇಶ್ವರಿ ಮಂಗಲ ಕಾರ್ಯಾಲಯದ ಮುಂದೆ ಪ್ರಜಾಪಿತ ಬ್ರಹ್ಮಕುಮಾರಿ ವಿವಿಯ ಸಮುದಾಯ ಭವನ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ನಂತರ ಕೊರೊನಾ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದರು.


ನಂತರ ವಿಜಯಪುರ ನಗರದ ಮಠಪತಿಗಲ್ಲಿಯ ಆದಿಶಕ್ತಿ ಸಭಾಭವನದಲ್ಲಿ ಕೊರೊನಾ ಉಚಿತ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿಶ್ವ ಮತ್ತು ದೇಶಾದ್ಯಂತ ಕೊರೊನಾ 2ನೇ ಅಲೆ ಆರಂಭವಾಗಿದೆ. ಆದ್ದರಿಂದ ಎಲ್ಲರೂ ಜಾಗೃತರಾಗಿ ಇರುವುದರ ಜೊತೆಗೆ ಸರಕಾರದ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು. ಅಲ್ಲದೇ, ಯಾವುದೇ ರೀತಿಯ ನಿರ್ಲಕ್ಷ ಮಾಡಬಾರದು. ಸರಕಾರ ನಿಗದಿ ಪಡಿಸಿದ ವಯಸ್ಸಿನವರು ತಪ್ಪದೆ ಕೊರೊನಾ ಲಸಿಕೆ ಪಡೆಯಬೇಕು ಎಂದು ಸಲಹೆ ನೀಡಿದರು.
ಭಾರತದಲ್ಲೇ ಅಭಿವೃದ್ಧಿ ಪಡಿಸಿದ ಕೊರೊನಾ ಲಸಿಕೆ ಅತ್ಯಂತ ಸುರಕ್ಷಿತವಾಗಿದ್ದು ಕೊರೊನಾ ನಿಯಂತ್ರಿಸಲು ಅಗತ್ಯವಿರುವ ಈ ಲಸಿಕೆಯನ್ನು ಎಲ್ಲ ಹಿರಿಯ ನಾಗರಿಕರು ಹಾಗೂ ಅರ್ಹ ವ್ಯಕ್ತಿಗಳು ಪಡೆದುಕೊಳ್ಳಬೇಕು. ಸ್ವಯಂ ಪ್ರೇರಿತವಾಗಿ ಲಸಿಕೆ ಪಡೆದು ಭಾರತವನ್ನು ಕೊರೊನಾ ಮುಕ್ತವಾಗಿಸಲು ಸಹಕರಿಸಬೇಕು ಎಂದು ನಾಗರಿಕರಲ್ಲಿ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಯಷ ಶ್ರೀಹರಿ ಗೊಳಸಂಗಿ, ವೈದ್ಯಾಧಿಕಾರಿ ಅಗರವಾಲ ಮತ್ತು ಇತರ ಮುಖಂಡರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌