ಕೊರೊನಾ ಜೊತೆಗೆ ಸಾಮಾನ್ಯ ರೋಗಿಗಳ ನೆರವಿಗೆ ಧಾವಿಸಿದ ಶಾಸಕ ಎಂ. ಬಿ. ಪಾಟೀಲ- ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ಬೆಡ್ ಗಳ ಸಂಖ್ಯೆ ಹೆಚ್ಚಳು, ಚಿಕಿತ್ಸಾ ಶುಲ್ಕ ಕಡಿತ

ಬಸವ ನಾಡು

ವಿಜಯಪುರ- ಸದಾ ಜನಪರ ತುಡಿತ ಹೊಂದಿರುವ ಮಾಜಿ ಸಚಿವ ಮತ್ತು ವಿಜಯಪುರ ಜಿಲ್ಲೆಯ ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಈಗ ಕೊರೊನಾ ಸಂಕಷ್ಟ ಕಾಲದಲ್ಲಿ ರೋಗಿಗಳ ನೆರವಿಗೆ ಧಾವಿಸಿದ್ದಾರೆ.
ಕೊರೊನಾ 2ನೇ ಅಲೆಯಿಂದಾಗಿ ರೋಗಿಗಳು ತತ್ತರಿಸುತ್ತಿದ್ದು, ಉತ್ತಮ ಚಿಕಿತ್ಸೆ ಒದಗಿಸಲು ತಮ್ಮ ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ಬೆಡ್ ಗಳ ಸಂಖ್ಯೆಯನ್ನು ಹೆಚ್ಚಳ ಮಾಡಿದ್ದಾರೆ. ಅಷ್ಟೇ ಅಲ್ಲ, ಚಿಕಿತ್ಸಾ ಶುಲ್ಕವನ್ನೂ ಕಡಿಮೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಬೆಡ್‍ಗಳು ಸಿಗುತ್ತಿಲ್ಲ. ರೋಗಿಗಳಿಗೆ ಚಿಕಿತ್ಸೆ ಸೂಕ್ತ ಚಿಕಿತ್ಸೆ ಲಭ್ಯ.ವಾಗುತ್ತಿಲ್ಲ ಎಂಬ ವ್ಯಾಪಕ ಕೂಗು ವಿಜಯಪುರ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಬಿ ಎಲ್ ಜಿ ಇ ಆಸ್ಪತ್ರೆಗೆ ಭೇಟಿ ನೀಡಿ ಹಿರಿಯ ವೈದ್ಯರ ತುರ್ತು ಸಭೆ ನಡೆಸಿದ್ದಾರೆ. ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ಸಧ್ಯಕ್ಕೆ ಕೊರೊನಾ ಸೋಂಕಿತರಿಗೆ ಮೀಸಲಾಗಿರುವ 250 ಹಾಸಿಗೆಗಳನ್ನು 500ಕ್ಕೆ ವಿಸ್ತರಣೆ ಮಾಡಲಾಗಿದೆ. ಇದರಲ್ಲಿ ಜನರಲ್ ವಾರ್ಡನಲ್ಲಿ 200, ಐಸಿಯು ನಲ್ಲಿ 50 ಮತ್ತು ಸ್ಪೆಷಲ್ ರೂಂಗಳಲ್ಲಿ 50 ಒಟ್ಟು 300 ಆಕ್ಸಿಜನ್ ಬೆಡ್‍ಗಳ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೇ, 200 ಐಸೊಲೇಶನ್ ಬೆಡ್‍ಗಳು ರೋಗಿಗಳಿಗೆ ಒದಗಿಸುವ ಕಾರ್ಯ ಮಾಡಿದ್ದಾರೆ.


ಅಲ್ಲದೇ ಸರಕಾರ ಖಾಸಗಿ ಆಸ್ಪತ್ರೆಗಳಿಗೆ ನಿಗದಿ ಪಡಿಸಿದ ಚಿಕಿತ್ಸಾ ದರಕ್ಕಿಂತಲೂ ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ಶೇ.70 ಕಡಿಮೆ ಶುಲ್ಕವನ್ನು ಕಳೆದ 2 ತಿಂಗಳಿಂದಲೂ ಪಡೆಯಲಾಗುತ್ತಿದೆ. ಇದೀಗ ಕರೋನಾ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದರೂ, ಬಡವರಿಗೆ, ಜನಸಾಮಾನ್ಯರಿಗೆ ಅನಕೂಲವಾಗಲಿ ಎಂಬ ಕಾರಣದಿಂದ ರಿಯಾಯಿತಿ ಶುಲ್ಕವನ್ನು ಮುಂದುವರೆಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಎಂ. ಬಿ. ಪಾಟೀಲ ತಿಳಿಸಿದ್ದಾರೆ.
ರಾಜ್ಯ ಸರಕಾರ ಜನರಲ್ ವಾರ್ಡ್‍ಗಳಲ್ಲಿ ಆಕ್ಸಿಜನ್ ರಹಿತ ಬೆಡ್‍ಗೆ ರೂ. 10 ಸಾವಿರ ನಿಗದಿ ಪಡಿಸಿದ್ದರೆ ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ರೂ.3 ಸಾವಿರ, ಆಕ್ಸಿಜನ್ ಸಹಿತ ಬೆಡ್‍ಗೆ ಸರಕಾರ ನಿಗದಿ ಪಡಿಸಿದ ರೂ. 12 ಸಾವಿರ ಬದಲಾಗಿ ರೂ. 5 ಸಾವಿರ ಹಾಗೂ ಐ ಸಿ ಯುನಲ್ಲಿ ವೆಂಟಿಲೆಟರ್‍ ಗೆ ರೂ. 25 ಸಾವಿರ ನಿಗದಿತ ವೆಚ್ಚದ ಬದಲಾಗಿ ರೂ. 8 ಸಾವಿರ ಮಾತ್ರ ಪಡೆಯಲಾಗುತ್ತಿದೆ. ಸದ್ಯ ಆಸ್ಪತ್ರೆಯ 1100 ಹಾಸಿಗೆಗಳಲ್ಲಿ 500 ಪ್ರತ್ಯೇಕ ಹಾಸಿಗೆಗಳನ್ನು ಕೊರೋನಾ ರೋಗಿಗಳಿಗೆ ಸೇವೆಯನ್ನು ಒದಗಿಸಲಾಗುತ್ತಿದ್ದು, ಸಿ ಟಿ ಸ್ಕ್ಯಾನ್ ಸೇರಿದಂತೆ ಎಲ್ಲ ಹೆಚ್ಚಿನ ತಪಾಸಣೆಗಳು ಹಾಗೂ ನಿರಂತರ ವೈದ್ಯರ ಸೇವೆಯನ್ನು ಒಂದೇ ಕಡೆ ಒದಗಿಸಲಾಗಿದೆ. ರೆಮೆಡಿಶಿವಿರ್ ಎಂಜೆಕ್ಷನ್ ಸೇರಿದಂತೆ ಎಲ್ಲ ತುರ್ತು ಔಷಧಗಳು ಇಲ್ಲಿನ ರೋಗಿಗಳಿಗೆ ಸದಾ ಲಭ್ಯವಾಗುವಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಕೊರೊನಾ ಇಲ್ಲದ ರೋಗಿಗಳಿಗೆ ಚಿಕಿತ್ಸೆ ಮುಂದುವರಿಕೆ

ಇದೇ ವೇಳೆ, ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ 1100 ಹಾಸಿಗೆಗಳಲ್ಲಿ ಕೊರೊನಾ ರೋಗಿಗಳಿಗೆ ಕಾಯ್ದಿರಿಸಿದ 500 ಹಾಸಿಗೆಗಳನ್ನು ಹೊರತು ಪಡಿಸಿ ಉಳಿದ 600 ಹಾಸಿಗೆಗಳಲ್ಲಿ ಕೊರೊನಾ ಹೊರತಾದ ರೋಗಿಗಳಿಗೆ ಚಿಕಿತ್ಸೆ ಎಂದಿನಂತೆ ಮುಂದುವರೆದಿದೆ. ಹೆರಿಗೆ, ಮಕ್ಕಳ ಚಿಕಿತ್ಸೆಗಳು, ಶಸ್ತ್ರ ಚಿಕಿತ್ಸೆಗಳು ಯಥಾಸ್ಥಿತಿಯಲ್ಲಿ ನಡೆದಿವೆ. ಸಾಮಾನ್ಯ ವಾರ್ಡಗಳಿಗೆ ದಾಖಲಾಗುವ ಎಲ್ಲ ಕೊರೊನಾ ಹೊರತಾದ ರೋಗಿಗಳಿಗೆ ಹಾಸಿಗೆ ಶುಲ್ಕ, ಊಟ, ಔಷಧಿ, ಶಸ್ತ್ರ ಚಿಕಿತ್ಸೆಗಳು ಹಾಗೂ ಸಾಮಾನ್ಯ ತಪಾಸಣೆಗಳು ಸಂಪೂರ್ಣ ಉಚಿತವಾಗಿವೆ. ಇದು ಆಸ್ಪತ್ರೆಯ ಮಕ್ಕಳ ವಿಭಾಗದಿಂದ ಹಿಡಿದು ಎಲ್ಲ ವಿಭಾಗಗಳಲ್ಲಿ ದಾಖಲಾಗುವ ಎಲ್ಲ ಸಾಮಾನ್ಯ ವಿಭಾಗದ ರೋಗಿಗಳಿಗೆ ಅನ್ವಯಿಸುತ್ತದೆ ಎಂದು ಮಾಜಿ ಸಚಿವರೂ ಆಗಿರುವ ಎಂ. ಬಿ. ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಭೆಯಲ್ಲಿ ಬಿ ಎಲ್ ಡಿ ಇ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎಂ. ಎಸ್. ಬಿರಾದಾರ. ಸಮಕುಲಪತಿ ಡಾ. ಆರ್. ಎಸ್. ಮುಧೋಳ. ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ. ಅರವಿಂದ ಪಾಟೀಲ. ಆಸ್ಪತ್ರೆಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ, ಸಂಸ್ಥೆಯ ಪ್ರಚಾರಾಧಿಕಾರಿ ಡಾ. ಮಹಾಂತೇಶ ಬಿರಾದಾರ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌