ಬಸವ ನಾಡು
ವಿಜಯಪುರ- ಕರ್ನಾಟಕದಲ್ಲಿ ಕೊರೊನಾ ರೋಗಿಗಳ ಸಂಖ್ಯೆ ದಿನ ದನೇ ಹೆಚ್ಚುತ್ತಿದ್ದರೂ, ರೋಗಿಗಳ ಸಂಖ್ಯೆಗೆ ಅನುಗುಣವಾಗಿ ರೆಮಿಡಿಸಿವಿಯರ್ ಎಂಜೆಕ್ಶನ್ ಸರಬರಾಜು ಮಾಡದೇ, ಕೇಂದ್ರ ಸರಕಾರ ತಾರತಮ್ಯ ಎಸಗುತ್ತಿದೆ ಎಂದು ಮಾಜಿ ಸಚಿವ, ಬಿ. ಎಲ್. ಡಿ. ಇ ಸಂಸ್ಥೆ ಅಧ್ಯಕ್ಷ ಹಾಗೂ ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಗಂಭೀರ ಆರೋಪ ಮಾಡಿದ್ದಾರೆ.
ವಿಜಯಪುರದ ಪ್ರತಿಷ್ಠಿತ ಬಿ. ಎಲ್. ಡಿ. ಇ ಆಸ್ಪತ್ರೆಗೆ ಭೇಟಿ ನೀಡಿ ಹಿರಿಯ ವೈದ್ಯರ ಸಭೆ ನಡೆಸಿದ ಅವರು, ಆಸ್ಪತ್ರೆಯಲ್ಲಿ ಚಿಕಿತ್ಸಾ ಸೌಲಭ್ಯಗಳನ್ನು ಪರಿಶೀಲನೆ ನಡೆಸಿ ಮಾತನಾಡಿದರು. ಕರ್ನಾಟಕದಲ್ಲಿ ಇಂದು 40 ಸಾವಿರ ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಛತ್ತೀಸಗಡ ರಾಜ್ಯದಲ್ಲಿ 15 ಸಾವಿರ, ಗುಜರಾತ ರಾಜ್ಯದಲ್ಲಿ ಇಂದು 14 ಸಾವಿರ ಕೊರೊನಾ ರೋಗಿಗಳು ಇಂದು ದಾಖಲಾಗಿದ್ದಾರೆ. ಆದರೆ ಕೇಂದ್ರ ಸರಕಾರ ರೆಮಿಡಿಸಿವಿಯರ್ ಪೂರೈಕೆಯಲ್ಲಿ ದಿ. 21 ರಿಂದ ಏ. 30ರ ವರೆಗೆ 10 ದಿನಗಳ ಅವಧಿಯಲ್ಲಿ ಗುಜರಾತ ರಾಜ್ಯಕ್ಕೆ 163559 ಮತ್ತು ಛತ್ತೀಸಗಡ ರಾಜ್ಯಕ್ಕೆ 48250 ರೆಮಿಡಿಸಿವಿರ್ ಎಂಜೆಕ್ಷನ್ ಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ ರೋಗಿಗಳ ಸಂಖ್ಯೆ ಹೆಚ್ಚಿರುವ ಕರ್ನಾಟಕಕ್ಕೆ ಕೇವಲ 25352 ರೆಮಿಡಿಸಿವಿರ್ ಎಂಜಕ್ಷನ್ ಗಳನ್ನು ಮಾತ್ರ ಹಂಚಿಕೆ ನೀಡಲಾಗಿದೆ. ಈ ಅಂಕಿ-ಅಂಶಗಳನ್ನು ನೋಡಿದಾಗ ರೆಮಿಡಿಸಿವಿಯರ್ ಎಂಜೆಕ್ಷನ್ ಹಂಚಿಕೆ ಮತ್ತು ಪೂರೈಕೆ ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಪಾರದರ್ಶಕವಾಗಿಲ್ಲ ಎಂಬುದು ಮೇಲ್ನೊಟಕ್ಕೆ ಕಂಡು ಬರುತ್ತಿದೆ ಎಂದು ತಿಳಿಸಿದ ಅವರು ಈ ಕುರಿತು ಸರಕಾರಿ ದಾಖಲೆ ಬಿಡುಗಡೆ ಮಾಡಿದರು.
ಈ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿಗಳು ಕೂಡಲೇ ಮಧ್ಯ ಪ್ರವೇಶಿಸಿ, ಈ ತಾರತಮ್ಯ ನಿವಾರಣೆ ಮಾಡಿ, ಕೊರೊನಾದಿಂದ ಬಳಲುತ್ತಿರುವ ರೋಗಿಗಳಿಗೆ ಔಷಧ ನೀಡಲು ಈ ಕೂಡಲೇ ನೆರವಾಗಬೇಕು ಎಂದು ಅವರು ಒತ್ತಾಯಿಸಿದರು. ಅಷ್ಟೇ ಅಲ್ಲ, ಈ ಕುರಿತು ಪ್ರಧಾನಿಗಳಿಗೆ, ಕೇಂದ್ರ ಆರೋಗ್ಯ ಸಚಿವರಿಗೆ, ರಾಜ್ಯದ ಮುಖ್ಯಮಂತ್ರಿಗಳಿಗೆ, ಆರೋಗ್ಯ ಸಚಿವರಿಗೆ ಟ್ವೀಟ್ ಮೂಲಕ ಗಮನ ಸೆಳೆಯಲಾಗುವುದು ಎಂದು ಅವರು ತಿಳಿಸಿದರು.
ಅತೀ ಕಡಿಮೆ ಶುಲ್ಕ ಪಡೆದು ಹೆಚ್ಚಿನ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಬಿ. ಎಲ್. ಡಿ. ಇ ಆಸ್ಪತ್ರೆಗೆ ನಿನ್ನೆ 382 ರೆಮಿಡಿಸಿವಿರ್ ಎಂಜೆಕ್ಷನ್ ಬಂದಿದ್ದು, ನಿನ್ನೆಯೇ ಖಾಲಿಯಾಗಿವೆ. ಇಂದು 482 ರೆಮಿಡಿಸಿವಿರ್ ಎಂಜೆಕ್ಷನ್ ಗಳು ಬಂದಿವೆ. ಆದರೆ ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಅವುಗಳನ್ನು ನೀಡಲು ಆಗುತ್ತಿಲ್ಲ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದರು.
ಅವರು, ಬಿ. ಎಲ್. ಡಿ. ಇ. ಆಸತ್ರೆಯಲ್ಲಿ ಹೆಚ್ಚುತ್ತಿರುವ ರೋಗಿಗಳಿಗೆ ಆಕ್ಸಿಜನ್ ಪೂರೈಸಲು ಈಗೀರುವ 13 ಕೆ. ಎಲ್. ಸಾಮಾರ್ಥ್ಯದ ಆಕ್ಸಿಜನ್ ಘಟಕದ ಜೊತೆಗೆ ಹೆಚ್ಚುವರಿಯಾಗಿ ಇನ್ನೂ 13 ಕೆ. ಎಲ್. ಆಕ್ಸಿಜನ್ ಘಟಕವನ್ನು ಸ್ಥಾಪಿಸಲು ಇಂದಿನ ಸಭೆಯಲ್ಲಿ ನಿರ್ಣಯ ಕೈಗೊಳ್ಳಳಾಗಿದೆ. ಮುಂದಿನ 15 ದಿನಗಳಲ್ಲಿ ಈ ಘಟಕವನ್ನು ಸ್ಥಾಪಿಸಲು ಸಮರೋಪಾದಿಯಲ್ಲಿ ಕೆಲಸ ಮಾಡಿ, ಆಕ್ಸಿಜನ್ ಬೆಡ್‍ಗಳ ಕೊರತೆ ನಿವಾರಿಸಲಾಗುವುದು ಎಂದು ಅವರು ತಿಳಿಸಿದರು.
ತುರ್ತಾಗಿ 100 ಜಂಬೋ ಆಕ್ಸಿಜನ್ ಸಿಲೆಂಡರ್ ಗಳನ್ನು ಈಗಾಗಲೇ ತರಿಸಲಾಗಿದ್ದು, ಅವುಗಳು ಕೂಡ ಕಾರ್ಯ ನಿರ್ವಹಿಸುತ್ತಿವೆ. ಆಸ್ಪತ್ರೆಗೆ ನಿತ್ಯವೂ ಹೆಚ್ಚಿನ ರೋಗಿಗಳು ದಾಖಲಾಗಲು ಬರುತ್ತಿರುವ ಹಿನ್ನೆಯಲ್ಲಿ ಕೇವಲ ಅಗತ್ಯವಿರುವವರಿಗೆ ಮಾತ್ರ ಒಳರೋಗಿಯಾಗಿ ದಾಖಲಾಗಬೇಕು. ಮನೆಯಲ್ಲಿಯೇ ಆರೈಕೆಯಾಗುವವರನ್ನು ಆಸ್ಪತ್ರೆಗೆ ದಾಖಲಿಸಬಾರದು. ಇದರಿಂದ ಬೆಡ್‍ಗಳ ಕೊರತೆ ನಿಗಲಿದೆ. ಅಲ್ಲದೇ, ತುರ್ತು ಸೇವೆ ಅಗತ್ಯವಿರುವ ರೋಗಿಗಳಿಗೆ ಅನುಕೂಲವಾಗಲಿದೆ. ದಾಖಲಾಗುವ ಒಳರೋಗಿಗಳಲ್ಲಿ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದ ನಂತರ ಅವರನ್ನು ದೀರ್ಘಾವಧಿವರೆಗೆ ಆಸ್ಪತ್ರೆಯಲ್ಲಿ ಅನಗತ್ಯವಾಗಿ ಇಟ್ಟುಕೊಳ್ಳದೇ ಡಿಸ್ಚಾರ್ಜ್ ಮಾಡಬೇಕು ಎಂದು ಇಂದಿನ ಸಭೆಯಲ್ಲಿಲ್ಲಿ ಉಪಸ್ಥಿತತರಿದ್ದ ಬಿ ಎಲ್ ಡಿ ಇ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿಗಳೆಗ ಶಾಸಕ ಎಂ. ಬಿ. ಪಾಟೀಲ ಸೂಚನೆ ನೀಡಿದರು.
ಆಸ್ಪತ್ರೆಯಲ್ಲಿ ಹೆಚ್ಚುತ್ತಿರುವ ರೋಗಿಗಗಳ ಚಿಕಿತ್ಸೆಗೆ ಅನಕೂಲವಾಗಲು ಬಿ. ಎಲ್. ಡಿ. ಇ ಸಂಸ್ಥೆ ನರ್ಸಿಂಗ್ ಹಾಗೂ ಫಾರ್ಮಸಿ ಕಾಲೇಜಿನ ನುರಿತ ಸಿಬ್ಬಂದಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಸೇವೆಯನ್ನು ಬಳಸಿಕೊಳ್ಳಲು ಈ ಸಭೆಯಲ್ಲಿ ನಿರ್ಧರಿಸಲಾಯಿತು. ಅಲ್ಲದೇ ಗುಣಮುಖರಾಗುತ್ತಿರುವ ರೋಗಿಗಳಿಗೆ ಆಸ್ಪತ್ರೆಯಲ್ಲಿಯೇ ಫೀಜಿಯೋಥೆರಪಿ ಸೌಲಭ್ಯವನ್ನು ಆಸ್ಪತ್ರೆಯಲ್ಲಿ ಒದಗಿಸಲಾಗುತ್ತಿದ್ದು, ಇದರಿಂದ ಉತ್ತಮ ಫಲಿತಾಂಶ ಕಂಡು ಬಂದಿದೆ ಎಂದು ಎಂ. ಬಿ. ಪಾಟೀಲ ಸಭೆಯಲ್ಲಿ ತಿಳಿಸಿದರು.
ಈ ಸಭೆಯಲ್ಲಿ ಬಿ. ಎಲ್. ಡಿ. ಇ ವಿವಿ ಸಮಕುಲಪತಿ ಡಾ. ಆರ್. ಎಸ್. ಮುಧೋಳ, ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ಆಸ್ಪತ್ರೆ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ, ರಿಜಿಸ್ಟಾರ್ ಡಾ. ಜೆ. ಜಿ. ಅಂಬೇಕರ್, ಸಂಸ್ಥೆಯ ಆಡಳಿತಾಧಿಕಾರಿ ಡಾ. ರಾಘವೇಂದ್ರ ಕುಲಕರ್ಣಿ, ಪ್ರಚಾರಾಧಿಕಾರಿ ಡಾ. ಮಹಾಂತೇಶ ಬಿರಾದಾರ ಉಪಸ್ಥಿತರಿದ್ದರು.