ಸರಕಾರ ಆಕ್ಸಿಜನ್, ರೆಮಿಡಿಸಿವಿರ್ ಪೂರೈಕೆ ಜೊತೆಗೆ ಕೊರೊನಾ ತಡೆಗಟ್ಟಲು ಸೂಕ್ತವಾಗಿ ಕೆಲಸ ಮಾಡಲಿ ಶಾಸಕ ಎಂ. ಬಿ. ಪಾಟೀಲ

ಬಸವ ನಾಡು

ವಿಜಯಪುರ- ರಾಜ್ಯಾದ್ಯಂತ ಕೊರೊನಾ ಸೋಂಕು ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರಕಾರ ನಿಯಂತ್ರಣಕ್ಕೆ ಸಾಕಷ್ಟು ಕ್ರಮ ಕೈಗೊಳ್ಳಬೇಕಿದೆ ಎಂದು ವಿಜಯಪುರ ಜಿಲ್ಲೆಯ ಬಬಲೇಶ್ವರ ಕಾಂಗ್ರೆಸ್ ಶಾಸಕ ಮತ್ತು ಮಾಜಿ ಸಚಿವ ಎಂ. ಬಿ. ಪಾಟೀಲ ಆಗ್ರಹಿಸಿದ್ದಾರೆ.
ವಿಜಯಪುರದಲ್ಲಿ ಪ್ರತಿಷ್ಠಿತ ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆ ಮತ್ತು ರಾಜ್ಯಾದ್ಯಂತ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಸರಕಾರ ಯುದ್ಧೋಪಾದಿಯಲ್ಲಿ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಸಚಿವುರ ಕೇವಲ ಟಿವಿಯಲ್ಲಿ ಹೇಳಿಕೆಯನ್ನು ನೀಡುವ ಮೂಲಕ, ಭವಿಷ್ಯದಲ್ಲಿ ಅಷ್ಟು ಔಷಧಿ ಬರಲಿವೆ, ಇಷ್ಟು ಸಾಮಗ್ರಿ ಬರಲಿವೆ ಎಂದು ಹೇಳುವುದನ್ನು ಬಿಡಲಿ. ಫ್ಯೂಚರ್ ಟೆನ್ಸ್ ನಲ್ಲಿ ಮಾತನಾಡುವ ಬದಲು ಕೊರೊನಾ ನಿಯಂತ್ರಣಕ್ಕೆ ಅಗತ್ಯವಾಗಿರುವ ರೆಮಿಡಿಸಿವಿರ್ ಎಂಜೆಕ್ಷನ್, ಆಕ್ಸಿಜನ್ ವ್ಯವಸ್ಥೆ ಮಾಡಿಕೊಳ್ಳಬೇಕು. ಔಷಧಿಗಳು ಬರುತ್ತವೇ ಎಂದು ಸಚಿವರು ಮತ್ತು ಸರಕಾರ ಹೇಳುತ್ತಿದ್ದಾರೆ. ಆದರೆ, ಅವು ಬರುವಷ್ಟರಲ್ಲಿ ಸಾಕಷ್ಟು ಅಹಿತಕರ ಘಟನೆಗಳು ನಡೆಯುತ್ತಿವೆ. ಈಗಾಗಲೇ ನಡೆದಿವೆ ಕೂಡ. ಇದು ಪ್ರಚಾರದ ಸಂದರ್ಭದವಲ್ಲ. ಹೇಳಿಕೆ ನೀಡುವ ಬದಲು, ಯುದ್ಧದ ಸಮಯದಲ್ಲಿ ಮಾಡುವಂತೆ ಕೆಲಸ ಮಾಡಬೇಕು. ಬರೀ ಕಥೆ ಹೇಳುವ ಬದಲು ಫೀಲ್ಡಿಗಿಳಿದು ಕೆಲಸ ಮಾಡಿ ಎಂದು ಎಂ. ಬಿ. ಪಾಟೀಲ ಸರಕಾರಕ್ಕೆ ಬುದ್ದಿವಾದ ಹೇಳಿದರು.
ಸರಕಾರದ ಹೇಳಿಕೆ ಕೇವಲ ಪ್ರಚಾರಕ್ಕೆ ಸೀಮಿತವಾಗಬಾರದು. ಕೆಲವೊಂದು ಸಚಿವರು ಅಷ್ಟು ಕೋಟಿ ಆರ್ಡರ್ ಮಾಡಿದ್ದೇವೆ. ಇಷ್ಟು ಸಾಮಗ್ರಿ ತರಿಸುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ, ಎಷ್ಟು ಆರ್ಡರ್ ಮಾಡಿದ್ದೀರಿ? ಮೊದಲು ಹೇಳಿ. ಇದು ರಾಜಕೀಯ ಮಾಡುವ ಸಂದರ್ಭವಂತೂ ಅಲ್ಲ. ಇದು ಪಕ್ಷ, ಜಾತಿ, ಧರ್ಮಗಳನ್ನು ಮೀರಿದ ಕೆಲಸ. ಮಾನವೀಯತೆಗೆ ಎದುರಾಗಿರುವ ಸವಾಲನ್ನು ನಾವು ಯಾವ ರೀತಿ ನಿಭಾಯಿಸುತ್ತೇವೆ ಎಂಬುದು ಮುಖ್ಯ ಎಂದು ಅವರು ತಿಳಿಸಿದರು.
ತಾವು ಅಧ್ಯಕ್ಷರಾಗಿರುವ ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಈ ಆಸ್ಪತ್ರೆಗೆ 5600 ರೆಮಿಡಿಸಿವಿರ್ ಎಂಜೆಕ್ಷನ್ ಬೇಕಾಗಿತ್ತು. ಆದರೆ, ಕೇವಲ 736 ಎಂಜೆಕ್ಷನ್ ಮಾತ್ರ ನೀಡಿದ್ದಾರೆ. ಈ ಕುರಿತು ಆರೋಗ್ಯ ಇಲಾಖೆ ಅಧಿಕಾರಿ ಅವಿನಾಶ ಮೆನನ್ ಎಂಬುವರ ಜೊತೆ ಮೊಬೈಲಿನಲ್ಲಿ ಮಾತನಾಡಿದ್ದೇನೆ. ಅವರು ನಮ್ಮ ರಾಜ್ಯಕ್ಕೆ 3840 ಲಸಿಕೆ ಮಾತ್ರ ಬಂದಿವೆ. ಈಗ 1.40 ಲಕ್ಷ ಹಂಚಿಕೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ. ನಮಗೆ ಸುಮ್ಮನೇ ಲೆಕ್ಕ ನೀಡುವುದು ಬೇಡ. ವೈಜ್ಞಾನಿಕವಾಗಿ ಅಂಕಿ-ಅಂಶ ಪಡೆದು ಸಮಗ್ರ ಮಾಹಿತಿ ನೀಡಿ. ರೋಗಿಗಳಿಗೆ ಅಗತ್ಯಕ್ಕೆ ತಕ್ಕಂತೆ ರೆಮಿಡಿಸಿವಿರ್ ಎಂಜೆಕ್ಷನ್ ಹಂಚಿಕೆಯಾಗಬೇಕು ಎಂದು ಎಂ. ಬಿ. ಪಾಟೀಲ ಆಗ್ರಹಿಸಿದರು.
ವಿಜಯಪುರ ಜಿಲ್ಲೆ ಮತ್ತು ರಾಜ್ಯ ಹಾಗೂ ದೇಶದಲ್ಲಿ ಕೊರೊನಾ ಸೋಂಕಿತರಿಗೆ ಬೆಡ್, ರೆಮಿಡಿಸಿವಿರ್ ಎಂಜೆಕ್ಷನ್, ವೆಂಟಿಲೇಟರ್ ಸಿಗುತ್ತಿಲ್ಲ. ವಿಜಯಪುರ ನಗರದ ಪ್ರತಿಷ್ಠಿತ ಬಿ ಎಲ್ ಡಿ ಇ ಆಸ್ಪತ್ರೆಗೆ ಪ್ರತಿನಿತ್ಯ 10 ರೋಗಿಗಳು ವೆಂಟಿಲೇಟರ್ ಗಾಗಿ ಬಂದು ಸಿಗದೆ ವಾಪಸ್ಸಾಗುತ್ತಿದ್ದಾರೆ. ಇನ್ನೂ 500 ಬೆಡ್ ವ್ಯವಸ್ಥೆ ಇರಬೇಕಿತ್ತು. ನಮ್ಮ ಶಕ್ತಿ ಮೀರಿ ಕೆಲಸ ಮಾಡಿದ್ದೇವೆ. ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ 500 ಬೆಡ್ ಗಳಲ್ಲಿ 430 ಫುಲ್ ಇವೆ, ಆಕ್ಸಿಜನ್, ವೆಂಟಿಲೇಟರ್ ಬೆಡ್ ಫುಲ್ ಇವೆ. ತುರ್ತು ಅಗತ್ಯವಿರುವವರಿಗೆ ಮಾತ್ರ ರೆಮಿಡಿಸಿವಿರ್ ಎಂಜೆಕ್ಷನ್ ನೀಡಲಾಗು್ತಿದೆ. ಕೊರೊನಾ ಮತ್ತು ಕೊರೊನಾ ಹೊರತಾದ ರೋಗಿಗಳಿಗೆ 500 ಬೆಡ್ ಮೀಸಲಿಡುವ ಮೂಲಕ ಜನಸಾಮಾನ್ಯರಿಗೆ ಸ್ಪಂದಿಸಿದ್ದೇವೆ. 300 ಆಕ್ಸಿಜನ್ ಮಾಡಿದ್ದೇವೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ 13 ಕೆ ಎಲ್ ಡಿ ಲಿಕ್ವಿಡ್ ಆಕ್ಸಿಜನ್ ಸ್ಟೋರೇಜ್ ಇದೆ. ಇಂದಿನಿಂದ ಮತ್ತೆ 13 ಕೆ ಎಲ್ ಡಿ ಆಕ್ಸಿಜನ್ ಸ್ಟೋರೇಜ್ ಘಟಕದ ಕೆಲಸ ಆರಂಭವಾಗಲಿದೆ. ಮುಂದಿನ 10 ರಿಂದ 13 ದಿನಗಳಲ್ಲಿ ಈ ಕೆಲಸ ಪೂರ್ಣವಾಗಲಿದೆ. ಅಷ್ಟೇ ಅಲ್ಲ, 70 ಆಕ್ಸಿಜನ್ ಸಿಲಿಂಡರ್ ಗಳನ್ನು ಹೊರಗಿನಿಂದ ತಂದು ಆಕ್ಸಿಜನ್ ಕೊರತೆಯಾಗದಂತೆ ವ್ಯವಸ್ಥೆ ಮಾಡಿದ್ದೇವೆ. ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಇಲ್ಲ ಎಂದು ಎಂ. ಬಿ. ಪಾಟೀಲ ತಿಳಿಸಿದರು.


ಕೊರೊನಾ ಹಿನ್ನೆಲೆಯಲ್ಲಿ ರಾತ್ರಿ 1ಕ್ಕೆ, 2ಕ್ಕೆ ಜನ ಫೋನ್ ಮಾಡುತ್ತಿರುತ್ತಾರೆ. ವಿಜಯಪುರ ನಗರದೆಲ್ಲೆಡೆ ಇದೇ ಪರಿಸ್ಥಿತಿ ಇದೆ. ಏನು ಸಾಧ್ಯವೋ ಅದೆಲ್ಲವನ್ನು ಬಿ ಎಲ್ ಡಿ ಇ ಸಂಸ್ಥೆ ಮಾಡುತ್ತಿದೆ. ಇಲ್ಲಿನ ವೈದ್ಯರು, ದಾದಿಯರು, ತಂತ್ರಜ್ಞರು ಹಗಲು ರಾತ್ರಿ ಎನ್ನದೇ ಕೆಲಸ ಮಾಡುತ್ತಿದ್ದಾರೆ. ತಾವು ಇದನ್ನು ಹಣಕಾಸಿನ ಲಾಭಕ್ಕಾಗಿ ಮಾಡುತ್ತಿಲ್ಲ. ಜನರಿಗಾಗಿ ಮಾಡುತ್ತಿದ್ದೇವೆ. ನಾನಾ ವೈದ್ಯಕೀಯ ತಪಾಸಣೆ ದರವನ್ನು ಕಡಿಮೆ ಮಾಡಲಾಗಿದೆ. ಸಿಟಿ ಸ್ಕ್ಯಾನ್ ದರವನ್ನು ರೂ. 4000 ದಿಂದ ರೂ. 4500 ಇತ್ತು. ಅದನ್ನು ಈಗ ರೂ. 2500ಕ್ಕೆ ಇಳಿಸಿದ್ದೇವೆ ಎಂದು ಎಂ. ಬಿ. ಪಾಟೀಲ ಇದೇ ಸಂದರ್ಭದಲ್ಲಿ ತಿಳಿಸಿದರು.
ನಾನೂ ಬಿ ಎಲ್ ಡಿ ಇ ಸಂಸ್ಥೆ ಮತ್ತು ಆಸ್ಪತ್ರೆಯ ವೈದ್ಯರೊಂದಿಗೆ ನಾಲ್ಕು ಬಾರಿ ಸಭೆ ನಡೆಸಿದ್ದೇನೆ. ವೈದ್ಯರಿಗೆ ಪ್ರತಿದಿನ ಕೇವಲ ಅರ್ಧಗಂಟೆ ಸಭೆ ಮಾಡಿ ಎಂದು ಹೇಳಿದ್ದೇನೆ. ಈಗ ಪರಿಸ್ಥಿತಿ ಗಂಭೀರವಾಗಿದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಕೂಡ ಕೊರೊನಾ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಿವೆ. ನಮ್ಮ ಮನೆಯಲ್ಲಿ ಯಾರಿಗಾದರೂ ಈ ಪರಿಸ್ಥಿತಿ ಬಂದರೆ ಹೇಗೆ ಎಂದು ಯೋಚಿಸಿ ಸರಕಾರ ಮತ್ತು ಸಚಿವರು ನಿರ್ಧಾರ ಕೈಗೊಳ್ಳಬೇಕು. ಈಗ ಕೊರೊನಾ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ. ಮುನ್ನೆಚ್ಚರಿಕೆ ವಹಿಸಬೇಕು ಎಂದು ಎಂ. ಬಿ. ಪಾಟೀಲ ಕರೆ ನೀಡಿದರು.
ಹನಿ ಹನಿಗೂಡಿದರೆ ಹಳ್ಳ, ಎಂಬಂತೆ, ರಾಜ್ಯ ಸರಕಾರ, ಕೇಂದ್ರ ಸರಕಾರ ಮತ್ತು ಖಾಸಗಿ ಹಾಗೂ ಸಣ್ಣ ನರ್ಸಿಂಗ್ ಹೋಂ ಗಳು ಒಟ್ಟಾಗಿ ಸಾಮೂಹಿಕವಾಗಿ ಕೆಲಸ ಮಾಡಬೇಕು. ಸರಕಾರ ಕೂಡ ಸಾಕಷ್ಟು ಲಸಿಕೆ ಒದಗಿಸಬೇಕು ಎಂದು ಹೇಳಿದ ಅವರು, ಈಗ ಕೊರೊನಾ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ. ಕೊರೊನಾ ಸೋಂಕು ತಗುಲದಂತೆ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಜನರು ಕೊರೊನಾ ಲಸಿಕೆಯನ್ನು ಹಾಕಿಸಿಕೊಳ್ಳಬೇಕು. ಇದರಿಂದ ಕೊರೊನಾ ಬಂದರೂ ಅದರ ತೀವ್ರತೆ ಕಡಿಮೆ ಇರುತ್ತದೆ. ಕೊರೊನಾ ವ್ಯಾಕ್ಸಿನೇಶನ್ ದೊಡ್ಡ ಪ್ರಮಾಣದಲ್ಲಿ ಆಗಬೇಕು. ಸರಕಾರ ಕೂಡ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಎಂ. ಬಿ. ಪಾಟೀಲ ಕರೆ ನೀಡಿದರು.

Leave a Reply

ಹೊಸ ಪೋಸ್ಟ್‌