ಸರಕಾರದಿಂದ ಬಿ ಎಲ್ ಡಿ ಇ ಆಸ್ಪತ್ರೆ ಕೊರೊನಾ ರೋಗಿಗಳಿಗೆ ಸಂಕಷ್ಟ- ಸೂಕ್ತ ಪ್ರಮಾಣದಲ್ಲಿ ರೆಮಿಡಿಸಿವಿರ್ ಎಂಜೆಕ್ಷನ್ ನೀಡದೇ ರಾಜಕೀಯ?

ಬಸವ ನಾಡು

ವಿಜಯಪುರ- ವಿಜಯಪುರದಲ್ಲಿ ಕೊರೊನಾ ರೋಗಿಗಳು ಮತ್ತಷ್ಟು ಸಂಕಷ್ಟ ಎದುರಿಸುವಂತಾಗಿದೆ. ಈಗಾಗಲೇ ಸರಕಾರಕ್ಕಿಂತ ಕಡಿಮೆ ದರದಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಮತ್ತು ಜಿಲ್ಲಾಸ್ಪತ್ರೆಗಿಂತಲೂ ಹೆಚ್ಚಿನ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ಆಸ್ಪತ್ರೆಗೆ ಸರಕಾರದ ಅಸಹಕಾರ ಮಾಡುತ್ತಿರುವ ಅಂಶ ಬೆಳಕಿಗೆ ಬಂದಿದೆ.
ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಸಂಕಷ್ಟ ಎದುರಾಗಿದೆ. ಸರಕಾರದಿಂದ ಸೂಕ್ತ ಸಮಯಕ್ಕೆ ಔಷಧಿ ಸಿಗದೆ ರೋಗಿಗಳು ಇದೀಗ ಸಂದಿಗ್ಧ ಪರಿಸ್ಥಿತಿಯಲ್ಲಿರುವಂತಾಗಿದೆ. ಕಳೆದ ಕೆಲವು ದಿನಗಳಿಂದ ರೆಮಿಡಿಸಿವಿರ್ ಎಂಜೆಕ್ಷನ್ ಪೂರೈಕೆಯಿಲ್ಲದೇ ರೋಗಿಗಳ ಪರದಾಡುವಂತಾಗಿದ್ದು, ರೋಗಿಗಳಿಗೆ ಏನಾದರೂ ಹೆಚ್ಚು ಕಡಿಮೆಯಾದರೆ ಯಾರು ಜವಾಬ್ದಾರರು ಎಂಬ ಪ್ರಶ್ನೆ ಎದುರಾಗಿದೆ.


ಸರಕಾರ ಈಗ ಬಿ ಎಲ್ ಡಿ ಇ ಆಸ್ಪತ್ರೆಗೆ ಹಂಚಿಕೆ ಮಾಡಿರುವ ರೆಮಿಡಿಸಿವಿರ್ ಎಂಜೆಕ್ಷನ್ ಪ್ರಮಾಣ ಬಕಾಸುರನ ಹೊಟ್ಟೆಗೆ ಅರೆಕಾಸನಿ ಮಜ್ಜಿಗೆ ನೀಡಿದಂತಾಗಿದೆ. ಬೇಡಿಕೆಗಿಂತಲೂ ಅತೀ ಕಡಿಮೆ ಪೂರೈಕೆ ಮಾಡಲಾಗಿದ್ದು, ಈ ಕುರಿತು ಟ್ವೀಟ್ ಮೂಲಕ ಮಾಜಿ ಸಚಿವ ಮತ್ತು ಆಸ್ಪತ್ರೆ ಮುಖ್ಯಸ್ಥ ಹಾಗೂ ವಿಜಯಪುರ ಜಿಲ್ಲೆಯ ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ತಮ್ಮ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.


ಬಿ ಎಲ್ ಡಿ ಈ ಆಸ್ಪತ್ರೆಯಲ್ಲಿ ಒಟ್ಟು ಸಧ್ಯಕ್ಕೆ 300 ಆಕ್ಸಿಜನ್ ಬೆಡ್ ಸೇರಿದಂತೆ 500 ಬೆಡ್ ಗಳಿದ್ದು, ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆಗೆ ಸಹಕಾರ ನೀಡಲು ಸರಕಾರ ವಿಫಲವಾಗಿದೆ. ಈ ಹಿನ್ನೆಲೆ ಮಾಜಿ ಸಚಿವ ಎಂ. ಬಿ. ಪಾಟೀಲ ಟ್ವೀಟ್ ಮೂಲಕ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.


ಸಿಎಂ, ಬಿ. ಎಸ್. ಯಡಿಯೂರಪ್ಪ ಅವರಿಗೆ ಟ್ವೀಟ್ ಮೂಲಕ ಅಸಮಾಧಾನ ಹೊರ ಹಾಕಿದ ಮಾಜಿ ಸಚಿವ ಎಂ. ಬಿ. ಪಾಟೀಲ, ಸರಕಾರ ನಿಗದಿಗಿಂತಲೂ ಕಡಿಮೆ ಬೆಲೆಯಲ್ಲಿ ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ನಮಗೆ ಜೀವಗಳ ಜೊತೆ ರಾಜಕೀಯ ಮಾಡಬೇಕಿಲ್ಲ. ನಾವು ಆಕ್ಸಿಜನ್ ಸಾಮರ್ಥ್ಯವನ್ನು ನಾಲ್ಕು ದಿನಗಳಲ್ಲಿ ದ್ವಿಗುಣ ಗೊಳಿಸುತ್ತಿದ್ದೇವೆ. ಕೊರೊನಾ ರೋಗಿಗಳಿಗೆ ಬೆಡ್ ಸಂಖ್ಯೆಯನ್ನು 700 ಕ್ಕೆ ಹೆಚ್ಚಿಸುತ್ತಿದ್ದೇವೆ. ಅದರಲ್ಲಿ 500 ಆಕ್ಸಿಜನ್ ಬೆಡ್ ಗಳಿವೆ. ಆದರೆ, ಬೆಡ್ ಗಳಿಗೆ ತಕ್ಕಂತೆ ಸೂಕ್ತ ಸಹಾಯ ಸಿಗುತ್ತಿಲ್ಲ. ಬೇಕಿದ್ದರೆ ಜಿಲ್ಲಾಧಿಕಾರಿಗಳಿಗೆ ಮಾತನಾಡಿ ನಮ್ಮ ಸೇವೆಯನ್ನು ಪರಿಶೀಲಿಸಿ. ನಾನು ಮುಖ್ಯಸ್ಥನಾಗಿರುವ ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ 500(300 ಆಕ್ಸಿಜನ್) ಬೆಡ್ ಗಳನ್ನು ಸಾಮಾನ್ಯ ದರದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ನಮಗೆ ಸಾಕಷ್ಟು ಪ್ರಮಾಣದಲ್ಲಿ ತುರ್ತು ಔಷಧಿಗಳಾದ ರೆಮಿಡಿಸಿವಿರ್ ಪೂರೈಸುತ್ತಿಲ್ಲ. ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಎಂ. ಬಿ. ಪಾಟೀಲ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಬಿ ಎಲ್ ಡಿ ಇ ಆಸ್ಪತ್ರೆಗೆ ಮೇ 3 ರಂದು 289 ರೆಮಿಡಿಸಿವಿರ್ ಎಂಜೆಕ್ಷನ್ ನೀಡಲಾಗಿದೆ. ನಮಗೆ ಪ್ರತಿದಿನ ಕನಿಷ್ಠ 450 ರೆಮಿಡಿಸಿವಿರ್ ಎಂಜೆಕ್ಷನ್ ಅಗತ್ಯವಿದೆ. ನಮ್ಮ ಆಸ್ಪತ್ರೆಯಲ್ಲಿ ಪ್ರತಿದಿನ ಕನಿಷ್ಠ 350 ಜನ ರೋಗಿಗಳಿಗೆ ರೆಮಿಡಿಸಿವಿರ್ ಎಂಜೆಕ್ಷನ್ ನೀಡಲೇಬೇಕಿದೆ. ಸರಕಾರ ಈ ನಿಟ್ಟಿನಲ್ಲಿ ಮಾನವೀಯತೆಯ ದೃಷ್ಠಿಯಿಂದ ಗಮನ ಹರಿಸಬೇಕು. ಇದು ನಮ್ಮ ಒಂದು ಆಸ್ಪತ್ರೆಯ ಉದಾಹರಣೆ ಮಾತ್ರ. ಮುಂದೆ ಅನಾಹುತವಾಗುವುದನ್ನು ತಪ್ಪಿಸಲು ಸರಕಾರ ನೆರವಿಗೆ ಮುಂದಾಗಬೇಕು ಎಂದು ಸಿಎಂ ಬಿ. ಎಸ್. ಯಡಿಯೂರಪ್ಪ, ಆರೋಗ್ಯ ಸಚಿವ ಡಾ. ಸುಧಾಕರ ಅವರಿಗೆ ಮಾಜಿ ಸಚಿವ ಟ್ವೀಟ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

Leave a Reply

ಹೊಸ ಪೋಸ್ಟ್‌