ವಿಜಯಪುರ ಎಂಸಿಎಚ್ ಆಸ್ಪತ್ರೆ ವೈದ್ಯರ ಅಧ್ವಾನ- ಬಿ ಎಲ್ ಡಿ ಇ ಆಸ್ಪತ್ರೆ ವೈದ್ಯರಿಂದ ಗರ್ಭಿಣಿ, ಮಗುವಿಗೆ ಜೀವದಾನ- ತಡವಾಗಿ ಬೆಳಕಿಗೆ ಬಂದ ಘಟನೆ

ಬಸವ ನಾಡು

ವಿಜಯಪುರ- ಬಸವನಾಡು ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ(ಎಂಸಿಎಚ್) ಅಧ್ವಾನದ ಕೇಂದ್ರವಾಗುತ್ತಿದೆ. ಇಲ್ಲಿಗೆ ಬರುವ ಗರ್ಭಿಣಿ ಮಹಿಳೆಯರಿಗೆ ಸೂಕ್ತ ಚಿಕಿತ್ಸೆ ನೀಡದೇ ರೋಗಿಗಳ ಪ್ರಾಣದ ಜೊತೆ ಚೆಲ್ಲಾಟವಾಡಿದ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.
ಪೂಜಾ ಬಿಜ್ಜರಗಿ ಎಂಬ ಗರ್ಭಿಣಿ ಮಹಿಳೆ ಏ. 19 ರಂದು ಬೆಳಿಗ್ಗೆ 6 ಗಂಟೆಗೆ ಹೆರಿಗೆಗಾಗಿ ಜಿಲ್ಲಾಸ್ಪತ್ರೆಯ ಎಂಸಿಎಚ್ ಆಸ್ಪತ್ರೆಗೆ ದಾಖಲಾಗಿದ್ದರು. ಈ ಯುವತಿಗೆ ಇದು ಎರಡನೇ ಹೆರಿಗಯಾಗಿತ್ತು. ಅದೇ ದಿನ ಬೆ. 11.30ರ ಸುಮಾರಿಗೆ ಹೆರಿಗೆ ನೋವಿದ್ದರೂ ನೆಲಮಹಡಿಯಿಂದ ಮೂರನೇ ಮಹಡಿಯವರೆಗೆ ನಡೆಸಿಕೊಂಡು ಕರೆದುಕೊಂಡು ಹೋದ ಆಸ್ಪತ್ರೆಯ ಸಿಬ್ಬಂದಿ ಸಿಸೇರಿಯನ್ ಗಾಗಿ ಆಪರೇಶನ್ ಕೋಣೆಗೆ ಕರೆದೊಯ್ದಿದ್ದರು. ಆಗ ಅಲ್ಲಿಗೆ ಬಂದ ವೈದ್ಯರು ಬೇರೆ ಪೇಶಂಟ್ ಗೆ ಸಿಸೇರಿಯನ್ ಮಾಡಬೇಕು. ನಿಮಗೆ ಆಗುವುದಿಲ್ಲ ಎಂದು ಹೇಳಿ ಕೆಳಗೆ ಕಳುಹಿಸಿದ್ದಾರೆ. ಸ್ವತಃ ಕೊರೊನಾ ವಾರಿಯರ್ ಅಂದರೆ ಸ್ಟಾಪ್ ನರ್ಸ್ ಆಗಿರುವ ಪೂಜಾ ಬಿಜ್ಜರಗಿ ಹೀಗೇಕೆ ಮಾಡುತ್ತಿರಿ ಎಂದು ವೈದ್ಯರೊಂದಿಗೆ ಮಾತಿನ ಚಕಮಕಿ ಕೂಡ ಮಾಡಿದ್ದಾರೆ. ಆದರೂ, ಕಟುಕ ಹೃದಯಿ ವೈದ್ಯೆ ಇವರಿಗೆ ಚಿಕಿತ್ಸೆ ನೀಡದೆ ಕಳುಹಿಸಿದಾಗ ಹೊರ ಬಂದ ತಕ್ಷಣ ಪೂಜಾ ಬಿಜ್ಜರಗಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ನಂತರ ಆಕೆ ಸಲಾಯಿನ್ ಹಚ್ಚಿದ ಸಿಬ್ಬಂದಿ ಚಿಕಿತ್ಸೆ ನೀಡಿದ್ದಾರೆ.


ಬಳಿಕ ಮತ್ತೆ ತಮ್ಮ ಉದ್ಧಟತನ ತೋರಿದ ವೈದ್ಯರು ನಮ್ಮಲ್ಲಿ ಸಿಸೇರಿಯನ್ ಯಂತ್ರ ಕೆಟ್ಟು ಹೋಗಿದೆ. ಬಿ ಎಲ್ ಡಿ ಇ ಆಸ್ಪತ್ರೆಗೆ ಹೋಗಿ ಎಂದು ಬಿಳಿ ಕಾಗದದ ಮೇಲೆ ಬರೆದು ಕೊಟ್ಟು ಕಳುಹಿಸಿದ್ದಾರೆ. ಈ ಸಂದರ್ಭದಲ್ಲಿ ಶಿಫಾರಸು ಪತ್ರ ನೀಡದೆ ಕೇವಲ ಬಿಳಿ ಕಾಗದದ ಮೇಲೆ ಕೈಯಿಂದ ಬರೆದ ಪತ್ರ ನೀಡಿದ್ದಾರೆ. ಮೊದಲೇ ಗರ್ಭಿಣಿ ಯುವತಿ ಮತ್ತು ಪೋಷಕರು ಅಮಾಯಕರಾಗಿದ್ದರಿಂದ ವಾಗ್ವಾದ ಮಾಡದೇ ಬಿ ಎಲ್ ಡಿ ಇ ಆಸ್ಪತ್ರೆಗೆ ಬಂದಿದ್ದಾರೆ. ಆಗ, ಇವರ ಪರಿಸ್ಥಿತಿ ಗಮನಿಸಿದ ಪ್ರಸೂತಿ ತಜ್ಞ ಡಾ. ಬಸವರಾಜ ಮತ್ತು ಸಿಬ್ಬಂದಿ ಕೂಡಲೇ ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಿದ್ದು, ಗಂಡು ಮಗು ಜನಿಸಿದೆ. ನಂತರ ಗಂಡು ಮಗುವಿಗೆ ಉಸಿರಾಟದ ತೊಂದರೆ ಇದ್ದ ಹಿನ್ನೆಲೆಯಲ್ಲಿ ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ಎನ್ ಐ ಸಿ ಯು ನಲ್ಲಿ ಸುಮಾರು 11 ದಿನಗಳ ಚಿಕಿತ್ಸೆ ನೀಡಲಾಗಿದೆ. ನಂತರ ಮಗುವಿನ ಆರೋಗ್ಯ ಸುಧಾರಿಸಿದ ಬಳಿಕ ವೈದ್ಯರು ಕೇವಲ ಎನ್ ಐ ಸಿ ಯು ಚಿಕಿತ್ಸೆಯ ವೆಚ್ಚವನ್ನು ಮಾತ್ರ ಪಡೆದು ಹೆರಿಗೆ ಮತ್ತೀತರ ಸೌಲಭ್ಯಗಳ ಸೇವೆಯನ್ನು ಉಚಿತವಾಗಿ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅಷ್ಟೇ ಅಲ್ಲ, ಸಂಕಷ್ಟದ ಸಮಯದಲ್ಲಿ ಕೊರೊನಾ ವರದಿಗಾಗಿ ಕಾಯದೇ ತಾಯಿ ಮತ್ತು ಮಗುವಿನ ಜೀವ ಉಳಿಸಿದ್ದಾರೆ.


ಈ ವಿಷಯ ತಿಳಿದ ಬಸವ ನಾಡು ಈ ವಿಚಾರವನ್ನು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಅವರ ಗಮನಕ್ಕೆ ತಂದಿದೆ. ಆಗ, ಕೂಡಲೇ ವಿಜಯಪುರ ಜಿಲ್ಲಾಸ್ಪತ್ರೆಯ ಸಿಎಂಓ ಡಾ. ಲಕ್ಕಣ್ಣವರ್ ಅವರಿಗೆ ಕರೆ ಮಾಡಿದ ಜಿಲ್ಲಾಧಿಕಾರಿಗಳು ಶಿಫಾರಸು ಪತ್ರ ಯಾಕೆ ಬಿಳಿ ಕಾಗದದಲ್ಲಿ ನೀಡಲಾಗಿದೆ? ನಿಗದಿತ ನಮೂನೆಯಲ್ಲಿ ಶಿಫಾರಸು ಪತ್ರ ನೀಡಿ. ತಾಯಿ ಮತ್ತು ಮಗುವಿನ ಚಿಕಿತ್ಸೆಗೆ ಸರಕಾರಿ ಯೋಜನೆಗಳಡಿ ನೆರವಾಗಿ ಎಂದು ಹೇಳಿದ್ದಾರೆ.
ಅದರಂತೆ, ಪೂಜಾ ಬಿಜ್ಜರಗಿ ಅವರ ತಾಯಿ ಭಾರತಿ ರಾಚಗೊಂಡ ಮತ್ತು ಪೂಜಾ ಪತಿ ವಿನೋದ ಬಿಜ್ಜರಗಿ ವಿಜಯಪುರ ಜಿಲ್ಲಾಸ್ಪತ್ರೆಗೆ ತೆರಳಿ ಡಾ. ಲಕ್ಕಣ್ಣವರ ಅವರನ್ನು ಭೇಟಿ ಮಾಡಿದ್ದಾರೆ. ಅವರ ಸೂಚನೆಯಂತೆ ಸತತ ನಾಲ್ಕೈದು ದಿನ ಎಂಸಿಎಚ್ ಆಸ್ಪತ್ರೆಗೆ ಅಲೆದಾಡಿದ್ದಾರೆ. ಆದರೆ, ಅಲ್ಲಿನ ಕಲ್ಲು ಹೃದಯಿ ವೈದ್ಯರು ಮಾತ್ರ ಶಿಫಾರಸು ಪತ್ರ ನೀಡುವುದಿಲ್ಲ. ಡಾ. ಲಕ್ಕಣ್ಣವರ ಹೇಳಿದರೇನಂತೆ ಎಂದು ಮತ್ತೆ ಉದ್ದಟತನ ತೋರಿದ್ದಾರೆ.
ಜಡ್ಡು ಗಟ್ಟಿರುವ ವಿಜಯಪುರ ಜಿಲ್ಲಾಸ್ಪತ್ರೆಯ ಎಂಸಿಎಚ್ ಆಸ್ಪತ್ರೆಯ ವೈದ್ಯರ ವರ್ತನೆಯಿಂದ ಬೇಸತ್ತ ಪೂಜಾ ಬಿಜ್ಜರಗಿ ಮತ್ತು ಅವರು ಪೋಷಕರು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ತಮ್ಮೂರಿಗೆ ಮರಳಿದ್ದಾರೆ.

ಇಲ್ಲಿ ಉದ್ಭವಿಸುವ ಪ್ರಶ್ನೆ ಎನೇಂದರೆ ನಿಗದಿತ ಸರಕಾರಿ ನಮೂನೆಯಲ್ಲಿ ಶಿಫಾರಸು ಪತ್ರ ನೀಡಬೇಕಿದ್ದ ವೈದ್ಯರು ಕೇವಲ ಬಿಳಿ ಹಾಳೆಯ ಮೇಲೆ ಶಿಫಾರಸು ಪತ್ರ ಬರೆದು ಕೈತೊಳೆದುಕೊಂಡಿದ್ದಾರೆ. ಅಲ್ಲದೇ, ಶಿಫಾರಸು ಪತ್ರ ನೀಡುವುದರಿಂದ ರಾಜ್ಯ ಸರಕಾರದ ನಾನಾ ಆರೋಗ್ಯ ಯೋಜನೆಗಳಡಿ ಸಿಗುವ ಸೌಲಭ್ಯದಿಂದ ಈ ಯುವತಿಗೆ ಅನ್ಯಾಯ ಮಾಡಿದ್ದಾರೆ. ಅಷ್ಟೇ ಅಲ್ಲ, ಅದೇ ದಿನ ಮತ್ತು ಅದಕ್ಕೂ ಮುಂಚೆ ಇದೇ ರೀತಿ ಮೂರು ಜನರಿಗೆ ಬಿಳಿ ಕಾಗದದ ಮೇಲೆ ಶಿಫಾರಸು ಪತ್ರ ನೀಡಿರುವ ಪ್ರತಿ ಬಸವ ನಾಡು ವೆಬ್ ಗೆ ಲಭ್ಯವಾಗಿದೆ.


ತಾಯಿ ಮತ್ತು ಮಗುವಿನ ಆಸ್ಪತ್ರೆಯಲ್ಲಿ ಭ್ರಷ್ಟಾಚಾರದ ಆರೋಪಗಳೂ ಕೂಡ ಕೇಳಿ ಬರುತ್ತಿದ್ದು, ಹಣ ನೀಡಿದರೆ ಮಾತ್ರ ಕೂಡಲೇ ಸಿಸೇರಿಯನ್ ಮಾಡುತ್ತಾರೆ. ಇಲ್ಲದಿದ್ದರೆ, ಅಲ್ ಅಮೀನ್ ಮತ್ತು ಬಿ ಎಲ್ ಡಿ ಇ ಆಸ್ಪತ್ರೆ ಸೇರಿದಂತೆ ಬೇರೆ ಕಡೆ ಇದೇ ರೀತಿ ಶಿಫಾರಸು ಮಾಡಿ ಕಳುಹಿಸುತ್ತಾರೆ ಎಂಬ ಆರೋಪಗಳೂ ಆಗಾಗ ಕೇಳಿ ಬರುತ್ತಿವೆ.
ಪ್ರತಿದಿನ ಇಂಥ ಒಂದಿಲ್ಲೊಂದು ಕೇಸ್ ಗಳು ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ಆಸ್ಪತ್ರೆಗೆ ಬರುತ್ತಿದ್ದು, ಜೀವ ರಕ್ಷಿಸಬೇಕಾದ ಎಂಸಿಎಚ್ ಆಸ್ಪತ್ರೆಯ ವೈದ್ಯರ ಅಮಾನವೀಯತೆ ಮತ್ತು ಉದ್ಧಟತನದಿಂದಾಗಿ ಗರ್ಭಿಣಿ ಮಹಿಳೆಯರು ಸಂಕಷ್ಟಕ್ಕೆ ಸಿಗುವಂತಾಗಿದೆ. ಇಂಥ ಗರ್ಭಿಣಿಯರ ಪಾಲಿಗೆ ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ಆಸ್ಪತ್ರೆ ನಿಜವಾಗಿಯೂ ಸಂಜೀವಿನಿಯಾದಂತಾಗಿದೆ.
ಈ ಪ್ರಕರಣದ ಕುರಿತು ವಿಜಯಪುರ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಹಾಗೂ ರಾಜ್ಯ ಸರಕಾರ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ಮತ್ತು ಕಟುಕ ಹೃದಯಿ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಸವ ನಾಡು ವೆಬ್ ಆಗ್ರಹಿಸುತ್ತದೆ.

Leave a Reply

ಹೊಸ ಪೋಸ್ಟ್‌