ನಿನ್ನೆ ಪೊಲೀಸರಿಂದ ಬೆತ್ತ ಏಟು ತಿಂದ ಯುವಕ- ಇಂದು ಕೋರ್ಟಿನಲ್ಲಿ ದಂಡ ಕಟ್ಟಿ ಬಂದು ಪೊಲೀಸರ ಕ್ಷಮೆಯಾಚನೆ- ಯಾಕೆ ಗೊತ್ತಾ?

ಬಸವ ನಾಡು

ವಿಜಯಪುರ- ನಿನ್ನೆ ಸೋಮವಾರ ಪೊಲೀಸರ ಮೇಲೆ ಕಾರು ಹತ್ತಿಸಲು ಹೋಗಿ ಬೆತ್ತದ ರುಚಿ ಉಂಡಿದ್ದ ಯುವಕನ ವಿಡಿಯೋ ವೈರಲ್ ಆಗಿತ್ತು. ಇಂದು ಅದೇ ಯುವಕ ಪೊಲೀಸರಿಗೆ ಕ್ಷಮೆಯಾಚಿಸಿ ಲಿಖಿತವಾಗಿ ಕ್ಷಮೆಯಾಚಿಸಿದ್ದಾನೆ.
ಅಷ್ಟಕ್ಕೂ ಆಗಿದ್ದೇನೆಂದರೆ ನಿನ್ನೆ ಬಸವೇಶ್ವರ ಸರ್ಕಲ್ ನಲ್ಲಿ ಪೊಲೀಸರು ಕಾರಿನಿಂದ ಇಳಿಸಿ ಯುವಕನೊಬ್ಬನಿಗೆ ಬೆತ್ತದ ರುಚಿ ತೋರಿಸಿದ್ದರು. ಈ ಕುರಿತಾದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆದರೆ, ಅದರ ಹಿಂದಿನ ಅಸಲಿಯತ್ತು ಇಂದು ಬಯಲಾಗಿದೆ.
ಬಸವರಾಜ ಶಾಂತಯ್ಯ ಕರಜಗಿ ನಿನ್ನೆ ತನ್ನ ಕಾರು ಸಂಖ್ಯೆ KA-22.P-0202 ದಲ್ಲಿ ಗಾಂಧಿಚೌಕಿನಿಂದ ಹೊರಟಿದ್ದ. ಆಗ, ಆತನ ಕಾರನ್ನು ತಪಾಸಣೆಗೆ ತಡೆಯಲು ಯತ್ನಿಸಿದ ಪೊಲೀಸರ ಮೇಲೆಯೇ ಕಾರು ನುಗ್ಗಿಸಲು ಯತ್ನಿಸಿದ್ದ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಬಸವೇಶ್ವರ ಚೌಕಿನ ಬಳಿ ಆತನ ಕಾರನ್ನು ತಡೆದು ಅದನ್ನು ಮತ್ತೆ ಗಾಂಧಿಚೌಕ್ ಪೊಲೀಸ್ ಠಾಣೆ ಬಳಿಗೆ ಕರೆ ತಂದು ಕಾರು ಚಾಲಕನನ್ನು ಕೆಳಗೆ ಇಳಿಸಿ ಲಾಠಿ ರುಚಿ ತೋರಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣ ವೈರಲ್ ಆಗಿ ಮಾಧ್ಯಮಗಳಲ್ಲಿಯೂ ಪ್ರಸಾರವಾಗಿತ್ತು.


ಇದಾದ ಬಳಿಕ ಆತನನ್ನು ಪೊಲೀಸರು ತಪಾಸಣೆ ನಡೆಸಿದಾಗ ಮಧ್ಯ ಸೇವಿಸಿದ್ದು ಪತ್ತೆಯಾಗಿತ್ತು. ನಂತರ ಆತನ ವಿರುದ್ಧ ವಿಜಯಪುರ ಪೊಲೀಸರು ಕೇಸ್ ದಾಖಲಿಸಿದ್ದರು. ಇಂದು ನ್ಯಾಯಾಲಯಕ್ಕೆ ಹಾಜರಾದ ಆತ ರೂ. 10100 ದಂಡ ಪಾವತಿಸಿದ್ದಾನೆ. ಅಲ್ಲದೇ, ಪೊಲೀಸರಿಗೆ ಕ್ಷಮೆ ಕೋರಿ ಲಿಖಿತವಾಗಿ ಪತ್ರ ನೀಡಿದ್ದಾನೆ.
ತಾನು ವಿಜಯಪುರ ಜಿಲ್ಲೆಯ ಸಿಂದಗಿ ಜಿಓಸಿಸಿ ಬ್ಯಾಂಕಿನಲ್ಲಿ ಬ್ರ್ಯಾಂಚಿನಲ್ಲಿ ಜ್ಯೂನಿಯರ್ ಅಸಿಸ್ಟಂಟ್ ಆಗಿದ್ದು, ನಿನ್ನೆ ತನ್ನ ಸಹೋದ್ಯೋಗಿಯಾದ ಎಸ್. ಎನ್. ನ್ಯಾಮಗೊಂಡ ಜೊತೆ ಸಿಂದಗಿಗೆ ಹೋಗುವಾಗ ಗಾಂಧಿಚೌಕಿನಲ್ಲಿ ಪೊಲೀಸರು ತಪಾಸಣೆಗೆ ತಡೆದಾಗ ತಾನು ಮದ್ಯ ಸೇವಿಸಿದ ಹಿನ್ನೆಲೆಯಲ್ಲಿ ಕಾರನ್ನು ನಿಲ್ಲಿಸದೇ ಹೋರಟಿದ್ದೆ. ನಂತರ ಬಸವೇಸ್ವರ ಸರ್ಕಲ್ ನಲ್ಲಿ ಕಾರನ್ನು ತಡೆದಾಗ ಮದ್ಯದ ನಶೆಯಲ್ಲಿ ಪೊಲೀಸರೊಂದಿಗೆ ಅಸಭ್ಯವಾಗಿ ವರ್ತಿಸಿದ್ದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಬ್ರೀಥ್ ಎನಲೈಸರ್ ಮೂಲಕ ಪರೀಕ್ಷೆ ಮಾಡಿಸಿದ್ದರು. ನಂತರ ನ್ಯಾಯಾಲಯಕ್ಕೆ ಹೋಗಿ ದಂಡ ಕಟ್ಟಿ ಬಂದಿದ್ದೇನೆ.


ಸಾರಾಯಿ ಕುಡಿದ ಅಮಲಿನಲ್ಲಿ ಪೊಲೀಸರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಕ್ಕೆ ಕ್ಷಮೆಯಾಚಿಸುತ್ತೇನೆ. ಅಲ್ಲದೇ, ಇನ್ನು ಮುಂದೆ ನಡವಳಿಕೆಯನ್ನು ತಿದ್ದಿಕೊಂಡು ತಿದ್ದಿಕೊಂಡು ಒಳ್ಳೆಯ ಜೀವನ ಸಾಗಿಸುತ್ತೇನೆ. ಒಂದು ವೇಳೆ ತನ್ನ ವರ್ತನೆ ಇದೇ ರೀತಿ ಮುಂದುವರೆದರೆ ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಳ್ಳಬಹುದಾಗಿದೆ ಎಂದು ಲಿಖಿತವಾಗಿ ಗಾಂಧಿಚೌಕ್ ಪೊಲೀಸಿರಿಗೆ ಪತ್ರ ಬರೆದು ಕ್ಷಮೆಯಾಚಿಸಿದ್ದಾನೆ.

ಕಳೆದ ವರ್ಷ ಲಾಕಡೌನ್ ಸಂದರ್ಭದಲ್ಲಿ ರಸ್ತೆಯ ಮೇಲೆ ಕರ್ತವ್ಯ ನಿರತರಾಗಿದ್ದ ಎಎಸ್ಪಿ ಡಾ. ರಾಮ ಲಕ್ಷ್ಮಣ ಅರಸಿದ್ಧಿ ಅವರಿಗೆ ಯುವಕನೊಬ್ಬ ಬೈಕ್ ನುಗ್ಗಿಸಿದ್ದರಿಂದ ಅವರು ಗಂಭೀರವಾಗಿ ಗಾಯಗೊಂಡು ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ಸುಮಾರು ಒಂದು ತಿಂಗಳು ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ನಿನ್ನೆ ಕೂಡ ಇಂಥದ್ದೆ ಘಟನೆ ಸಂಭವಿಸುವ ಅಪಾಯವಿದ್ದ ಹಿನ್ನೆಲೆಯಲ್ಲಿ ಪೊಲೀಸರು ಕಾರುನ್ನು ತಡೆದು ಚಾಲಕನಿಗೆ ಬೆತ್ತದ ರುಚಿ ತೋರಿಸಿದ್ದರು ಎನ್ನಲಾಗಿದೆ.
ಇದೀಗ ಪೊಲೀಸರ ಲಾಠಿ ಏಟಿನ ಹಿಂದಿನ ಮರ್ಮ ಈಗ ಯುವಕ ಲಿಖಿತವಾಗಿ ಬರೆದು ಕೊಟ್ಟಿರುವ ಪತ್ರದಲ್ಲಿ ಬಹಿರಂಗವಾದಂತಾಗಿದೆ.

One Response

Leave a Reply

ಹೊಸ ಪೋಸ್ಟ್‌