ಪ್ರೊ. ರವಿ ಎನ್. ಕೋಟೆಣ್ಣವರ,
ಖ್ಯಾತ ಹೋಮಿಯೋಪಥಿ ವೈದ್ಯರು
ವಿಜಯಪುರ- ಮಳೆ ಬರುವ ಕಾಲಕ್ಕೆ ಒಳಗ್ಯಾಕ ಕುಂತೇವು
ಇಳೆಯೊಡನೆ ಜಳಕವಾಡೋಣು ನಾವೂನು
ಮೋಡಗಳ ಆಟ ನೋಡೋಣು
ಎಂದು ಪ್ರಾಸಬದ್ದವಾಗಿ ಭಾವಪೂರ್ಣ ಸಾಲುಗಳನ್ನು ಬರೆದರು ವರಕವಿ ಬೇಂದ್ರೆ.ನಿಜ, ಮಳೆ ಎಂದರೆ ಹಾಗೇನೆ, ಆಗಸದ ಶೂನ್ಯದಿಂದ ಥಳಥಳಿಸುವ ಮುತ್ತುಗಳಂತೆ ನೆಲಕ್ಕೆ ಬಿದ್ದು ಜೀವಸೃಷ್ಟಿಗೆ ನಾಂದಿ ಹಾಡುವ ಮಳೆಯು ಅದ್ಯಾವುದೋ ಮಾಯದ ಲೋಕದಿಂದ ಬಂದದ್ದೇ ಇರಬಹುದೇನೊ ಎಂಬ ವಿಸ್ಮಯ.ಈ ಮಳೆಯ ಹುಟ್ಟೇ ಒಂದು ಅದ್ಭುತ, ಅಚ್ಚರಿ, ಕೌತುಕ, ಚೋದ್ಯ. ಬಿಸಿ ಬಿಸಿ ಬೇಗೆಯ ದಿನಗಳಲ್ಲಿ, ಮಳೆಯ ಸೂಚನೆಯೂ ಇರದೇ, ಆಗಸದಲ್ಲೆಲ್ಲಾ ಬಿಳಿ ಮೋಡ, ಬಿಸಿ ಗಾಳಿ. ನೆಲವೂ ಸಹ ಬಿರುಕು ಬಿಟ್ಟಿದ್ದು, ಅಂತರಾಳದ ಬೇಗೆಯನ್ನು ತಾಳದೇ ಬಿಸಿಯುಸಿರನ್ನು ಹೊರಹಾಕುತ್ತಿದೆಯೇನೊ ಎಂಬ ಭಾವನೆ. ಆಗ, ಅದೆಲ್ಲಿಂದಲೋ ಒಂದಷ್ಟು ಧೂಳಿ, ಅದರ ಮಧ್ಯೆ ತಂಗಾಳಿ. ಬಿಳಿ ಮೋಡಗಳ ನಡುವೆ ದಟ್ಟ ನೀಲಿಯ ಛಾಯೆ; ಮದಿಸಿದ ಕರಿಗಳ ರೂಪ ಪಡೆಯುವ ಕರಿಮೋಡಗಳು. ಮಿಂಚುಗಳ ಕೋರೈಸುವ ಬೆಳಕು. ಗುಡುಗುಗಳ ಗುಡುಗಾಟ. ಖಾಲಿಯಾಗಿದ್ದ ಆಗಸದಲ್ಲಿ ಒಮ್ಮೆಗೇ ಸೃಷ್ಟಿಯಾಗುವ ನೀರಿನ ಹನಿಗಳು ನೆಲಕ್ಕೆ ಬಿದ್ದು, ಬಿಸಿ ಬಿಸಿ ಭೂಮಿಯನ್ನು ಹಸಿ ಹಸಿಗೊಳಿಸುವ ಅಪೂರ್ವ ಪ್ರಕ್ರಿಯೆ ಒಂದೆಡೆಯಾದರೆ, ಮಳೆಗಾಲದಲ್ಲಿ ಸ್ವಲ್ಪ ಜಾಗ್ರತೆ ವಹಿಸದೇ ಮೋಜು ಮಸ್ತಿಗೆ ಬ್ರೆಕ್ ಹಾಕದಿದ್ದರೆ ರೋಗಗಳ ಸರಮಾಲೆಯೇ ಶುರುವಾಗುತ್ತೆ. ಇನ್ನು ಮಳೆಗಾಲದಲ್ಲಿ ಶಿಶುಗಳಿ೦ದ ವಯೋವೃದ್ಧರವರೆಗೆ ಹಲವಾರು ಆರೋಗ್ಯ ಸಮಸ್ಯೆಗಳನ್ನು ಸಾಮಾನ್ಯವಾಗಿ ಕಾಣಬಹುದು.ಈಗಾಗಲೇ ಮಾನವ ಕುಲ ಮಹಾಮಾರಿ, ಕ್ರೂರಿ ಕೊರೊನಾದಿಂದ ತತ್ತರಿಸಿ ಹೋಗಿರುವಾಗ ಇದೀಗ ಮಳೆಗಾಲ ಪ್ರಾರಂಭವಾಯಿತು. ಇನ್ನೂ ಈ ಕೊರೊನಾದಿಂದ ಚೇತರಿಸಿಕೊಂಡಿಲ್ಲ. ಈಗ ಮಳೆಗಾಲದ ಆರೋಗ್ಯ ಸಮಸ್ಯೆಗಳಿ೦ದ ಬಳಲಿದ್ದೇವೆ. ಮಳೆಗಾಲದಲ್ಲಿ ಉದ್ಭವಿಸುವ ಆರೋಗ್ಯ ತಾಪತ್ರಯಗಳನ್ನು ವೈದ್ಯಕೀಯದಲ್ಲಿ ಚಿಕಿತ್ಸೆ ನೀಡಲು ಅನುಕೂಲವಾಗಲು ನೀರು ಮತ್ತು ಆಹಾರದಿಂದ ಬರುವ ರೋಗಗಳು. ಗಾಳಿಯಿಂದ ಬರುವ ರೋಗಗಳು ಮತ್ತು ಸೊಳ್ಳೆಗಳಿಂದ ಬರುವ ರೋಗಗಳು ಎಂದು ಮೂರು ಬಗೆಯಲ್ಲಿ ವಿಂಗಡಿಸಲಾಗಿದೆ.
ನೀರು ಮತ್ತು ಆಹಾರದಿಂದ ಬರುವ ರೋಗಗಳು:
ಸಾಮಾನ್ಯವಾಗಿ ಮಳೆಗಾಲದಲ್ಲಿ ಕುಲುಶಿತ ನೀರು ಹಾಗೂ ಆಹಾರ ಶೇವಿಸುವುದರಿಂದ ಕಾಣುವ ಪ್ರಮುಖ ರೋಗಗಳೆಂದರೆ ಟಾಯಫಾಯ್ಡ, ಕಾಲರಾ ಹಾಗೂ ಕಾಮಾಲೆ. ಮು೦ಜಾಗ್ರತೆ ಕ್ರಮಗಳು : ಬಿಸಿ ನೀರನ್ನು ಕುಡಿಯಬೇಕು. ತೆರೆದಿಟ್ಟ ಹಾಗೂ ಸಂಸ್ಕರಿಸಿಟ್ಟ ಆಹಾರ ಪದಾಥ೯ಗಳನ್ನು ಸೇವಿಸಬಾರದು. ಮಾಂಸಾಹಾರ ಸೇವಿಸಬಾರದು.ಆದಷ್ಟು ತಾಜಾ & ಬಿಸಿಯಾದ ಆಹಾರ ಸೇವಿಸಬೇಕು..
ಗಾಳಿಯಿಂದ ಬರುವ ರೋಗಗಳು:
ಶೀತ, ಅಸ್ತಮಾ..ಸೈನು ಸೈಟಿಸ್. ವೈರಲ ಜ್ವರ, ಇನಪ್ಲೂಯಂಜಾ. ಮುಂಜಾಗ್ರತೆ ಕ್ರಮಗಳು : ಬೆಚ್ಚಗಿನ ಬಟ್ಟೆಗಳನ್ನು ಧರಿಸಬೇಕು. ಸ್ಕಾಪ೯ ಸುತ್ತಿಕೊಳ್ಳಬೇಕು. ಶೀತ – ಜ್ವರವಿದ್ದ ವ್ಯಕ್ತಿಯಿಂದ ದೂರವಿರಬೇಕು. ಬಿಸಿ ನೀರನ್ನು ಕುಡಿಯಬೇಕು, ದಿನಕ್ಕೆ 2-3 ಬಾರಿ ಬಿಸಿನೀರಿನ ಉಗಿಯನ್ನು ತೆಗೆದುಕೊಳ್ಳಬೇಕು ಹಾಗೂ ಬಿಸಿ ನೀರಿನಲ್ಲಿ ಉಪ್ಪನ್ನು ಹಾಕಿ ಮುಕ್ಕಳಿಸಬೇಕು.. ಬೆಲ್ಲ -ಶುಂಠಿ – ಕರಿಮೆಣಸು – ದಾಲ್ಚಿನಿ ಹಾಕಿತಯಾರಿಸಿದ ಕಶಾಯವನ್ನು ಕುಡಿಯಬೇಕು.
ಸೊಳ್ಳೆಗಳಿಂದ ಬರುವ ರೋಗಗಳು:
ಸಾಮಾನ್ಯವಾಗಿ ಮಳೆಗಾಲದಲ್ಲಿ ಅಲ್ಲಲ್ಲಿ ನೀರು ನಿಂತು ಸೊಳ್ಳೆಗಳಾಗಿ ಈ ಸೊಳ್ಳೆಗಳ ಕಡಿತದಿಂದ ಮಲೇರಿಯಾ, ಡೆಂಗ್ಯೂ ಜ್ವರ, ಚಿಕೂನ ಗುನಿಯಾ ರೋಗಗಳಿಗೆ ತುತ್ತಾಗುವರು. ಮುOಜಾಗ್ರತೆ ಕ್ರಮಗಳು : ಸೊಳ್ಳೆಗಳ ಉತ್ಪತ್ತಿಯಾಗಲು ಮನೆಯ ಸುತ್ತ ಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು.. ಸೊಳ್ಳೆಗಳು ಕಚ್ಚದಂತೆ ಸೊಳ್ಳೆ ಪರದೆ, ಸೊಳ್ಳೆ ಬತ್ತಿ, ಸೊಳ್ಳೆ ಕ್ರೀಮ ಉಪಯೋಗಿಸಬೇಕು. ಈ ರೀತಿಯಾಗಿ ಮಳೆಗಾಲದಲ್ಲಿ ಕಾಣಬರುವ ಆರೋಗ್ಯ ಸಮಸ್ಯೆಗಳ ಮುಂಜಾಗ್ರತೆ ವಹಿಸಿದರು ರೋಗಕ್ಕಿಡಾದರೆ ವ್ಯಾಧಿ ಉಲ್ಫಣಗೊಳ್ಳುವ ಮೊದಲೇ ತಜ್ಞ ವೈದ್ಯರನ್ನು ಸಂಪಕಿ೯ಸಿ ಚಿಕಿತ್ಸೆ ತೆಗೆದುಕೊಳ್ಳಬೇಕು.
ಹೋಮಿಯೋಪಥಿ ನಿವ೯ಹಣೆ
ಹೋಮಿಯೋಪಥಿ ವೈದ್ಯ ಪದ್ದತಿಯಲ್ಲಿ ರೋಗದ ಹೆಸರಿನಿಂದ ಚಿಕಿತ್ಸೆ ನೀಡದೆ ವ್ಯಕ್ತಿಯ ಒಟ್ಟು ಮಾನಸಿಕ, ದೈಹಿಕ ರೋಗ ಲಕ್ಷಣಗಳನ್ನು. ಅಪೇಕ್ಷೆ – ಉಪೇಕ್ಷೆಗಳನ್ನು, ವ್ಯಾಧಿ ಕಾರಣಗಳನ್ನು ಅವಲೋಕಿಸಿ -ಅಭ್ಯಸಿಸಿ ಚಿಕಿತ್ಸೆ ನೀಡಲಾಗುತ್ತದೆ.
ಹೋಮಿಯೋಪಥಿ ವೈದ್ಯ ಪದ್ದತಿಯಲ್ಲಿ ವ್ಯಾಧಿಗಳ ಚಿಕಿತ್ಸೆ ಜೊತೆಗೆ ರೋಗ ಬರದಂತೆ ಮುಂಜಾಗ್ರತಾ ಔಷಧಿಗಳು ಕೂಡ ಇವೆ. ಸಾಮಾನ್ಯವಾಗಿ ಮಳೆಗಾಲದ ಆರೋಗ್ಯ ಸಮಸ್ಯೆಗಳ ನಿವ೯ಹಣೆಯಲ್ಲಿ ಉಪಯೋಗಿಸಲ್ಪಡುವ ಹೋಮಿಯೋಪಥಿ ಔಷಧಿಗಳು: ಎಕೋನೈಟ, ಎಲೀಯಮ್ ಸೀಪಾ, ಅರ್ಸ ಅಲ್ಬ, ಬೆಲ್ಲ, ಬೆಸಿಲಿನಮ್, ಬೆಪ್ಟೀಶಿಯಾ, ಬ್ರೈಯೋನಿಯಾ, ಕಾಡ೯ಸಮರ್, ಸಿಂಕೋನಾ, ಚೀನಿ ಸಲ್ಫ್, ಚೆಲಿಡೋನಿಯಮ್, ಕುಪ್ರಮ ಮೆಟ್, ಡಲ್ಕೆಮೇ ಈ ಔಷಧಿಗಳನ್ನು ಹೋಮಿಯೋಪಥಿ ವೈದ್ಯರು ಶಿಫಾರಸು ಮಾಡುತ್ತಾರೆ.
ಹೋಮಿಯೋಪಥಿ ಔಷಧಿಯನ್ನು ಬಳಸುವವರು ವೈದ್ಯರ ಸಲಹೆಯ ಮೇರೆಗೆ ಈ ಔಷಧಿಯನ್ನು ಉಪಯೋಗಿಸಬಹುದಾಗಿದೆ.