ಬಸವನಾಡು
ವಿಜಯಪುರ: ಕೊರೊನಾ ಸಂಕಷ್ಟದ ಸಂದರ್ಭದಲ್ಲೂ ಕಳೆದ 8 ವರ್ಷಗಳಿಂದ ತಾಂತ್ರಿಕ ಸಮಸ್ಯೆಯಿಂದ ನೆನೆಗುದಿಗೆ ಬಿದ್ದಿದ್ದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗಾಗಿ 417 ಭೂ ಸ್ವಾಧೀನ ಪ್ರಕರಣಗಳನ್ನು ಇತ್ಯರ್ಥ ಪಡಿಸಿ, ಸಂಬಂಧಿಸಿದ ಜಮೀನಿನ ರೈತರಿಗೆ ನೇರವಾಗಿ ಪರಿಹಾರ ಧನವನ್ನು ನೀಡಲಾಗಿದೆ ಎಂದು ಡಿಸಿಎಂ ಗೋವಿಂದ ಎಂ ಕಾರಜೋಳ ಅವರು ತಿಳಿಸಿದ್ದಾರೆ.
ಶಿವಮೊಗ್ಗ- ಚಿತ್ರದುರ್ಗ ಮಾರ್ಗದ ರಾಷ್ಟ್ರೀಯ ಹೆದ್ದಾರಿ -13, ಮುಧುಗಿರಿ- ಆಂಧ್ರಗಡಿ ಮಾರ್ಗದ ರಾಷ್ಟ್ರೀಯ ಹೆದ್ದಾರಿ 234, ಕೊಳ್ಳೆಗಾಲ- ಕೇರಳ ಗಡಿ ಮಾರ್ಗದ ರಾಷ್ಟ್ರೀಯ ಹೆದ್ದಾರಿ 212 ರಸ್ತೆಗಳ ಅಭಿವೃದ್ಧಿ ಗಾಗಿ ಭೂ ಸ್ವಾಧೀನ ಪ್ರಕ್ರಿಯೆ ತಾಂತ್ರಿಕ ಸಮಸ್ಯೆಯಿಂದ ನೆನೆಗುದಿಗೆ ಬಿದ್ದಿತ್ತು.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಡಿಸಿಎಂ, ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸುಧೀರ್ಘ ವಾಗಿ ಚರ್ಚಿಸಿ, ಇಂಥ ಸಂಕಷ್ಟದ ಸಂದರ್ಭದಲ್ಲಿ ರೈತರು ಪರಿಹಾರ ದನಕ್ಕಾಗಿ ಕಚೇರಿಗೆ ಪದೇ ಪದೇ ಬರುವುದು ಉಚಿತವಲ್ಲ. ರಸ್ತೆ ಅಭಿವೃದ್ಧಿ ಕಾಮಗಾರಿಗೆ ನೆರವಾಗುತ್ತದೆ. ತಾಂತ್ರಿಕ ಸಮಸ್ಯೆಯನ್ನು ಕೂಡಲೇ ಪರಿಹರಿಸುವಂತೆ ಸೂಚನೆ ಹಾಗೂ ಮಾರ್ಗದರ್ಶನಗಳನ್ನು ನೀಡಿದೆ. ಅದರನ್ವಯ ಭೂ ಸ್ವಾಧೀನ ಪ್ರಕರಣಗಳನ್ನು ಕೂಡಲೇ ಇತ್ಯರ್ಥ ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
80 ಕೋ. ಪರಿಹಾರ ಧನವನ್ನು ಸಂಬಂಧಿಸಿದ ರೈತರಿಗೆ ಪಾವತಿಸಲಾಗಿದೆ ಇದೊಂದು ಶ್ಘಾಘನೀಯ ಕಾರ್ಯವಾಗಿದೆ. ದಿನದಿಂದ ದಿನಕ್ಕೆ ಭೂ ಸ್ವಾಧೀನ ಪರಿಹಾರ ಮೊತ್ತವೂ ಹೆಚ್ಚಳವಾಗುವುದರ ಜೊತೆಗೆ ರಸ್ತೆ ನಿರ್ಮಾಣ ವೆಚ್ಚವೂ ಅಧಿಕವಾಗುತ್ತದೆ. ತ್ವರಿತವಾಗಿ ಸಮಸ್ಯೆ ಪರಿಹರಿಸಿದರೆ ಹೆದ್ದಾರಿ ನಿರ್ಮಾಣವಾಗಿ ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅನುವಾಗಲಿದೆ. ಇಂಥ ಮಾದರಿ ಹಾಗೂ ಅಭಿವೃದ್ಧಿ ಗೆ ಪೂರಕ ಚಿಂತನೆಗಳನ್ನು ಅಧಿಕಾರಿಗಳು ಅಳವಡಿಸಿ ಕೊಳ್ಳಬೇಕು ಎಂದು ಡಿಸಿಎಂ ತಿಳಿಸಿದ್ದಾರೆ.
ಭೂ ಸ್ವಾಧೀನ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ಪಡಿಸಿದ್ದಕ್ಕಾಗಿ ಲೋಕೋಪಯೋಗಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಕಾರ್ಯದರ್ಶಿ ಡಾ. ಕೆ.ಎಸ್.ಕೃಷ್ಣರೆಡ್ಡಿ, ರಾಜ್ಯ ಹೆದ್ದಾರಿ ಮುಖ್ಯ ಅಭಿಯಂತರ ರಾದ ಶ್ರೀ ಗೋವಿಂದ ರಾಜು, ಭೂ ಸ್ವಾಧೀನ ಅಧಿಕಾರಿ ಕಮಲಾಬಾಯಿ ಅವರನ್ನು ಡಿಸಿಎಂ ಗೋವಿಂದ ಎಂ. ಕಾರಜೋಳ ಅವರು ಅಭಿನಂದಿಸಿದ್ದಾರೆ.