ಕೊರೊನಾ 3ನೆ ಅಲೆ- ಚಿಕ್ಕಮಕ್ಕಳ ವಿಶೇಷ ಚಿಕಿತ್ಸಾ ಘಟಕ ಸ್ಥಾಪನೆಗೆ ಎಂ. ಬಿ. ಪಾಟೀಲ ಸೂಚನೆ

ಬಸವ ನಾಡು

ವಿಜಯಪುರ: ಕೊರೊನಾ ಮೂರನೇ ಅಲೆಯಲ್ಲಿ ಚಿಕ್ಕಮಕ್ಕಳು ಹೆಚ್ಚು ಬಾಧೀತರಾಗುತ್ತಾರೆ ಎಂಬ ವರದಿಗಳಿವೆ. ಈ ಹಿನ್ನೆಲೆ ಆಸ್ಪತ್ರೆಯಲ್ಲಿ ಚಿಕ್ಕಮಕ್ಕಳ ಕೋವಿಡ್ ವಿಶೇಷ ಘಟಕ ಆರಂಭಿಸಲು ಈಗಲೇ ಕ್ರಮ ಕೈಗೊಳ್ಳಬೇಕು ಎಂದು ಬಿ ಎಲ್ ಡಿ ಇ ಸಂಸ್ಥೆಯ ಅಧ್ಯಕ್ಷ, ಮಾಜಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.

ಬಿ ಎಲ್ ಡಿ ಇ ಡೀಮ್ಡ್ ವಿವಿಯಲ್ಲಿ ನಡೆದ ಸಭೆಯಲ್ಲಿ ಕೊರೊನಾ ಮೂರನೇ ಅಲೆಯಲ್ಲಿ ಮಕ್ಕಳು ಹೆಚ್ಚು ಬಾಧೀತರಾಗುವ ಕುರಿತು ವರದಿಗಳು ಬರುತ್ತಿವೆ. ಇದನ್ನು ಗಮನದಲ್ಲಿರಿಸಿ ನಾವು ಈಗಿನಿಂದಲೇ ಮಕ್ಕಳ ಚಿಕಿತ್ಸೆಗೆ ಹೆಚ್ಚು ನಿಗಾ ವಹಿಸಿ ಯಾವ ಮಗು ಕೂಡ ಚಿಕಿತ್ಸೆಯಿಂದ ವಂಚಿತರಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲೆ ಇದೆ. ಅದರ ಅನುಸಾರ ಹೆಚ್ಚಿನ ಬೆಡ್ ಗಳು, ಆಕ್ಸಿಜನ್ ಮತ್ತು ವೆಂಟಿಲೇಟರ್ ವ್ಯವಸ್ಥೆ ಮಾಡಲು ಚಿಕ್ಕಮಕ್ಕಳ ವಿಭಾಗವನ್ನು ಈಗಿನಿಂದಲೇ ಸಜ್ಜುಗೊಳಿಸಬೇಕು ಎಂದು ಎಂ. ಬಿ. ಪಾಟೀಲ ಆಸ್ಪತ್ರೆಯ ವೈದ್ಯರಿಗೆ ಸೂಚನೆ ನೀಡಿದರು.

ಮುಖ್ಯವಾಗಿ ಮಕ್ಕಳ ಚಿಕಿತ್ಸೆಗೆ ಅಗತ್ಯವಿರುವ ಎಂಜೆಕ್ಷನ್ ಮತ್ತು ಔಷಧಗಳನ್ನು ಈಗಿನಿಂದಲೇ ಸಂಗ್ರಹಿಸಲು ಸೂಚಿಸಿದ ಅವರು, ಯಾವುದೇ ಪರಿಸ್ಥಿತಿಯಲ್ಲಿ ಈಗಿನಂತೆ ಔಷಧಿಗಳ ಕೊರತೆಯಾಗುವುದು ಬೇಡ ಎಂದು ತಿಳಿಸಿದರು.

ವಿಶೇಷವಾಗಿ ಕೊರೊನಾ ಮೂರನೇ ಅಲೆಯಲ್ಲಿ ಮಕ್ಕಳಿಗೆ ಆಗುವ ತೊಂದರೆಗಳು ಮತ್ತು ಸೂಕ್ತ ಚಿಕಿತ್ಸೆ ಕುರಿತು ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ತಜ್ಞವೈದ್ಯರೊಂದಿಗೆ ನಮ್ಮ ವೈದ್ಯರ ತಂಡ ಸಮಾಲೋಚನೆ ನಡೆಸಿ ಮಾಹಿತಿ ಮತ್ತು ನೆರವು ಪಡೆದುಕೊಳ್ಳುವ ನಿಟ್ಟಿನಲ್ಲಿ ಕೂಡಲೇ ಕಾರ್ಯಾಗಾರಗಳನ್ನು ಸಂಘಟಿಸುವಂತೆ ಎಂ. ಬಿ. ಪಾಟೀಲ ಸೂಚಿಸಿದರು.

ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ. ಅರವಿಂದ ಪಾಟೀಲ ಮಾತನಾಡಿ, ಮೂರನೇ ಅಲೆಯನ್ನು ಗಮನಿಸಿ, ಮಕ್ಕಳ ಚಿಕಿತ್ಸಾ ವಿಭಾಗವನ್ನು ಅಲರ್ಟ್ ಮಾಡಲಾಗಿದೆ. ಈಗಾಗಲೇ ನಮ್ಮ ಆಸ್ಪತ್ರೆಯಲ್ಲಿ ನಾಲ್ಕು ಮಕ್ಕಳು ದಾಖಲಾಗಿ, ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರಂಭಿಕ ಹಂತದಲ್ಲಿ 60 ಆಕ್ಸಿಜನ್ ಬೆಡ್ ಗಳನ್ನು ಸಜ್ಜುಗೊಳಿಸಲಾಗಿದೆ. ಅಗತ್ಯವಿದ್ದರೆ ಇನ್ನೂ 60 ಬೆಡ್ ಗಳಿಗೆ ವಿಸ್ತರಿಸಿ ಒಟ್ಟು 120 ಆಕ್ಸಿಜನ್ ಸಹಿತ ಮಕ್ಕಳ ಚಿಕಿತ್ಸಾ ವಾರ್ಡ್ ಆರಂಭಿಸಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ, ಚಿಕಿತ್ಸೆಗೆ ಅಗತ್ಯವಿರುವ ಔಷಧಿ ದಾಸ್ತಾನು ಸಂಗ್ರಹಿಸಲಾಗುವುದು. ಸರಣಿ ಕಾರ್ಯಾಗಾರಗಳನ್ನು ಏರ್ಪಡಿಸಿ ತಜ್ಞವೈದ್ಯರೊಂದಿಗೆ ಮಕ್ಕಳ ವೈದ್ಯರು, ಶುಶ್ರೂಷಕ ಸಿಬ್ಬಂದಿ ಹಾಗೂ ತಂತ್ರಜ್ಞರನ್ನು ಸನ್ನದ್ಧಗೊಳಿಸಲಾಗುವುದು ಎಂದು ಸಭೆಗೆ ತಿಳಿಸಿದರು.

ಈ ಸಂದರ್ಭದಲ್ಲಿ ಸಮಉಪಕುಲಪತಿ ಡಾ. ಆರ್. ಎಸ್. ಮುಧೋಳ, ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ, ಸಂಸ್ಥೆ ಪ್ರಚಾರಾಧಿಕಾರಿ ಡಾ. ಮಹಾಂತೇಶ ಬಿರಾದಾರ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌