ಬಸವ ನಾಡು
ವಿಜಯಪುರ: ಮೇ 07 ರಿಂದ ರಾಜ್ಯ ಮತ್ತು ಕೇಂದ್ರ ಸರಕಾರಗಳು 45 ವರ್ಷ ಮೇಲ್ಪಟ್ಟವರಿಗೆ ಹಂಚಿಕೆಯಾದ ಕೊರೊನಾ ಲಸಿಕೆಗಳನ್ನು 2ನೇಯ ಡೋಸ್ ಪಡೆಯಲು ಬಾಕಿ ಇರುವ ಫಲಾನುಭವಿಗಳಿಗೆ ಮಾತ್ರ ಬಳಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ತಿಳಿಸಿದ್ದಾರೆ.
ರಾಜ್ಯದಲ್ಲಿ ಆರೋಗ್ಯ ಕಾರ್ಯಕರ್ತರಿಗೆ, ಮುಂಚೂಣಿ ಕಾರ್ಯಕರ್ತರಿಗೆ 18 ರಿಂದ 44 ಹಾಗೂ 45 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಹಾಕಲಾಗುತ್ತಿದೆ. ಮೊದಲನೇ ಡೋಸ್ ಪಡೆದ ಅನೇಕ ಫಲಾನುಭವಿಗಳು ಎರಡನೇ ಡೋಸ್ ಲಸಿಕೆ ಪಡೆಯಬೇಕಾಗಿದೆ. ಈ ಹಿನ್ನೆಲೆಯಲ್ಲಿ ಮೇ 07 ರಿಂದ ರಾಜ್ಯ ಮತ್ತು ಕೇಂದ್ರ ಸರಕಾರಗಳು 45 ವರ್ಷ ಮೇಲ್ಪಟ್ಟವರಿಗೆ ಹಂಚಿಕೆಯಾದ ಲಸಿಕೆಗಳನ್ನು 2ನೇಯ ಡೋಸ್ ಪಡೆಯಲು ಬಾಕಿ ಇರುವ ಫಲಾನುಭವಿಗಳಿಗೆ ಮಾತ್ರ ಬಳಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ರಾಜ್ಯ ಸರಕಾರವು ನೇರವಾಗಿ 18 ರಿಂದ 44 ವರ್ಷದ ವಯೋಮಾನದ ಫಲಾನುಭವಿಗಳ ಲಸಿಕಾಕರಣಕ್ಕೆ ಖರೀದಿಸಿದ ಪೂರ್ಣ ದಾಸ್ತಾನನ್ನು ಸಹ 2ನೇಯ ಡೋಸ್ ಪಡೆಯಲು ಬಾಕಿ ಇರುವ ಫಲಾನುಭವಿಗಳ ಬಳಕೆಗೆ ವಿನಿಯೋಗಿಸಲು ನಿರ್ಧರಿಸಿದೆ. ಆದ್ದರಿಂದ ರಾಜ್ಯದಲ್ಲಿರುವ ಎಲ್ಲಾ ಲಸಿಕೆಗಳ (ಕೇಂದ್ರ ಸರಕಾರದಿಂದ ಒದಗಿಸಲಾದ ಮತ್ತು ರಾಜ್ಯ ಸರಕಾರದಿಂದ ನೇರವಾಗಿ ಖರೀದಿಸಿದ) ಪೂರ್ಣ ದಾಸ್ತಾನನ್ನು ಸಹ 2ನೇಯ ಡೋಸ್ ಪಡೆಯಲು ಬಾಕಿ ಇರುವ ಫಲಾನುಭವಿಗಳ ಲಸಿಕಾಕರಣಕ್ಕೆ ಮಾತ್ರ ಬಳಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಈ ಸಂಬಂಧ 18 ರಿಂದ 44 ವರ್ಷ ವಯೋಮಾನದವರು ಕೋವಿಡ್ ಲಸಿಕಾಕರಣವನ್ನು (ಈಗಾಗಲೇ ಲಸಿಕೆಗಾಗಿ ಸಮಯ ನಿಗದಿ ಪಡಿಸಿಕೊಂಡವರೂ ಸೇರಿದಂತೆ) ಮೇ 14 ರಿಂದ ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಆದರೆ ಮೊದಲನೇ ಡೋಸ ಪಡೆದ 18 ರಿಂದ 44 ವರ್ಷದ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರು 2ನೇ ಡೋಸ ಲಸಿಕೆ ಪಡೆಯಲು ಅರ್ಹರಿದ್ದರೆ ಅಂಥ ಫಲಾನುಭವಿಗಳು 2ನೇ ಡೋಸ್ ಲಸಿಕೆ ಪಡೆಯಬಹುದು. ಎರಡನೇ ಡೋಸ್ ಲಸಿಕೆ ನೀಡುವ ಸಮಯದಲ್ಲಿ ಕೋವಿಶೀಲ್ಡ್ ಮೊದಲನೇ ಡೋಸ್ ಪಡೆದು 8 ವಾರಗಳನ್ನು ಪೂರ್ಣಗೊಳಿಸಿರುವ ಮತ್ತು ಕೋವ್ಯಾಕ್ಸಿನ್ ಮೊದಲನೆ ಡೋಸ ಪಡೆದು 6 ವಾರಗಳನ್ನು ಪೂರ್ಣಗೊಳಿಸಿರುವ ಫಲಾನುಭವಿಗಳಿಗೆ ಮೊದಲನೇ ಆದ್ಯತೆ ನೀಡಲಾಗುವುದು. ಈ ಆದೇಶವು ಕೋವಿಡ್ ಲಸಿಕಾಕರಣ ನಡೆಯುತ್ತಿರುವ ಎಲ್ಲ ಸರಕಾರಿ ಕೋವಿಡ್ ಲಸಿಕಾ ಕೇಂದ್ರಗಳಿಗೆ ಅನ್ವಯಿಸುತ್ತದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.