ಬಸವ ನಾಡು
ವಿಜಯಪುರ: ರಾಜ್ಯ ಸರಕಾರ ಸ್ವ್ಯಾಬ್ ಟೆಸ್ಟ್ ಕಡಿಮೆ ಮಾಡಿರುವುದೇ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗಲು ಕಾರಣ. ಇದು ಇದೇ ರೀತಿ ಮುಂದುವರೆದರೆ ಕೊರೊನಾ ಮಹಾಸ್ಪೋಟವಾಗಲಿದೆ ಎಂದು ಮಾಜಿ ಸಚಿವ ಮತ್ತು ವಿಜಯಪುರ ಜಿಲ್ಲೆಯ ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಎಚ್ಚರಿಕೆ ನೀಡಿದ್ದಾರೆ.
ಖಾಸಗಿ ವಾಹಿನಿ ಪಬ್ಲಿಕ್ ಟಿವಿ ಜೊತೆ ದೂರವಾಣಿ ಮೂಲಕ ಮಾತನಾಡಿದ ಅವರು, ಈಗ ರಾಜ್ಯಾದ್ಯಂತ ಕೊರೊ ನಾ ಟೆಸ್ಟಿಂಗ್ ಕಡಿಮೆಯಾಗಿದೆ. ಜನೇವರಿ, ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಪ್ರತಿದಿನ 4000 ಜನರನ್ನು ಟೆಸ್ಟ್ ಮಾಡಿಸಲು ಟಾರ್ಗೆಟ್ ನೀಡಲಾಗಿತ್ತು. ಈಗ ಅದನ್ನು ಸರಕಾರ ಕೇವಲ 1660ಕ್ಕೆ ಇಳಿಕೆ ಮಾಡಿದೆ. ತಮಗಿರುವ ಮಾಹಿತಿಯಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ 10 ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಿಗೆ ಗರಿಷ್ಠ 20 ಜನರ ಕೊರೊನಾ ಟೆಸ್ಟ್ ಮಾಡಿಸಲು ಟಾರ್ಗೆಟ್ ನೀಡಲಾಗಿದೆ. 4000 ದಿಂದ 1640ಕ್ಕೆ ಟಾರ್ಗೆಟ್ ಫಿಕ್ಸ್ ಮಾಡಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ ಮಾಡುವುದರಿಂದ ಕೊರೊನಾ ಕಡಿಮೆಯಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಕೊರೊನಾ 3ನೇ ಅಲೆಗೆ ಸರಕಾರವೇ ಕಾರಣರಾಗುತ್ತಾರೆ. ಈಗ ತೋರಿಸುತ್ತಿರುವ ಅಂಕಿ ಅಂಶಗಳಿಂದ ಒಂದು ವಾರ, 15 ದಿನ, ಒಂದು ತಿಂಗಳು ಕಡಿಮೆಯಾಗಿದೆ ಎಂದು ತೋರಿಸಬಹುದು. ಆದರೆ, ಇದರ ಪರಿಣಾಮ ಕೊರೊನಾ ದೊಡ್ಡ ಸ್ಪೋಟವಾಗಲಿದೆ. ಬೆಳಗಾವಿ ಜಿಲ್ಲೆಯಲ್ಲಿ ಈ ಮುಂಚೆ 6000 ಜನರ ಟೆಸ್ಟ್ ನಡೆಸಲಾಗುತ್ತಿತ್ತು. ಆದರೆ, ಈಗ 2500 ಜನರಿಗೆ ಟೆಸ್ಟ್ ಮಾಡಿಸಲು ಟಾರ್ಗೆಟ್ ನೀಡಲಾಗಿದೆ. ಎಲ್ಲ ಜಿಲ್ಲೆಗಳಲ್ಲಿ ರೀತಿ ಟಾರ್ಗೆಟ್ ಕಡಿತ ಮಾಡಲಾಗಿದೆ ಎಂದು ಅವರು ಆರೋಪಿಸಿದರು.
ದಕ್ಷಿಣ ಕನ್ನಡದಂಥ ಜಿಲ್ಲೆಗಳಲ್ಲಿ ಜನಸಂದಣಿ ಕಡಿಮೆ ಇರುತ್ತದೆ. ಅಲ್ಲಿ ಜನಸಾಂದ್ರತೆ ಉತ್ತರ ಕರ್ನಾಟಕದಂತೆ ಒಂದೇ ಪ್ರದೇಶದಲ್ಲಿ ದಟ್ಟವಾಗಿರುವುದಿಲ್ಲ. ಆದರೂ, ದಕ್ಷಿಣ ಕನ್ನಡದಂಥ ಜಿಲ್ಲೆಯ ಗ್ರಾಮೀಣ ಭಾಗಕ್ಕೂ ಕೊರೊನಾ ಸೋಂಕು ಹರಡುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಇದನ್ನು ಸರಕಾರ ಅರ್ಥ ಮಾಡಿಕೊಳ್ಳಬೇಕು. ಟೆಸ್ಟಿಂಗ್ ಕಡಿಮೆ ಮಾಡಿ ಜನರಿಗೆ ಕಣ್ಣೋರಿಸುವ ತಂತ್ರ ಮಾಡಬಾರದು. ಟೆಸ್, ಟ್ರೇಸ್ ಆ್ಯಂಡ್ ಟ್ರೀಟ್ ಮಾಡಿ ಸೋಂಕು ನಿಯಂತ್ರಣಕ್ಕೆ ತನ್ನಿ. ಅದರ ಬದಲು ಟೆಸ್ಟ್ ಕಡಿಮೆ ಮಾಡಿ ಈ ಥರ ಮಾಹಿತಿ ನೀಡುವುದು ಬೇಡ ಎಂದು ಮಾಜಿ ಸಚಿವರು ಸರಕಾರಕ್ಕೆ ಕಿವಿಮಾತು ಹೇಳಿದರು.
ವಿಜಯಪುರ ನಗರದ ಹೊರವಲಯದಲ್ಲಿರುವ ತೊರವಿ ಗ್ರಾಮದಲ್ಲಿ ಈವರೆಗೆ 71 ಜನ ಸಾವಿಗೀಡಾಗಿದ್ದಾರೆ. ಅವರಲ್ಲಿ 40 ಜನ ಕೊರೊನಾದಿಂದ ಸಾವಿಗೀಡಾಗಿದ್ದಾರೆ. ಕೊರೊನಾ ಸೋಂಕಿತ 100 ಜನ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ವರ್ಷ ಎಲ್ಲ ಆಶಾ ಕಾರ್ಯಕರ್ತೆಯರು ಸೇರಿದಂತೆ ಎಲ್ಲ ಇಲಾಖೆಯ ಸಿಬ್ಬಂದಿಗಳನ್ನು ಬಳಸಿಕೊಂಡು ಕೊರೊನಾ ನಿಯಂತ್ರಣಕ್ಕೆ ಸರಕಾರ ಕ್ರಮ ಕೈಗೊಂಡಿತ್ತು. ಆದರೆ, ಈ ಬಾರಿ ಆ ರೀತಿ ನಡೆಯುತ್ತಿಲ್ಲ ಎಂದು ಮಾಜಿ ಸಚಿವ ಮತ್ತು ಬಬಲೇಶ್ವರ ಶಾಸಕ ಎಂ. ಬಿ. ಪಾಟೀಲ ಕೊರೊನಾ ನಿಯಂತ್ರಣದ ಬಗ್ಗೆ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.