ಬಸವ ನಾಡು
ವಿಜಯಪುರ- ಬಸವ ನಾಡು ವಿಜಯಪುರ ಹೊರ ವಲಯದ ರಂಭಾಪುರ ಗ್ರಾಮಸ್ಥರು ಈ ಬಾರಿ ಹಬ್ಬದಾಚರಣೆಯ ಬದಲು ವಿನೂತನ ಕಾರ್ಯ ಮಾಡುವ ಮೂಲಕ ಕಾಯಕವೇ ಕೈಲಾಸ ಎಂಬಂತೆ ಇಡೀ ಊರಿಗೆ ಉಪಕಾರ ಮಾಡಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿಯೂ ಕೊರೊನಾ ಎರಡನೇ ಅಲೆ ಜೋರಾಗಿಯೇ ಇದೆ. ಈ ಹಿನ್ನೆಲೆಯಲ್ಲಿ ಇಲ್ಲಿಯೂ ಲಾಕಡೌನ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಹಬ್ಬ, ಹರಿದಿನಗಳಿದ್ದರೂ ಮನೆಯಲ್ಲಿಯೇ ಆಚರಿಸಬೇಕು ಎಂದು ಸರಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಈ ಹಿನ್ನೆಲೆಯಲ್ಲಿ ರಂಭಾಪುರ ಗ್ರಾಮಸ್ಥರು ಬಸವ ಜಯಂತಿಯನ್ನಂತೂ ಜನ ಸೇರಿ ಆಚರಿಸುವಂತಿಲ್ಲ. ಆದರೆ, ಕೊರೊನಾ ಸಂದರ್ಭದಲ್ಲಿ ಊರಿಗಾದರೂ ಉಪಕಾರ ಮಾಡಿ ಬಸವಣ್ಣನವರಿಗೆ ಗೌರವ ಪೂರಕ ನಮನ ಸಲ್ಲಿಸಿದರಾಯಿತು ಎಂದು ಯೋಚಿಸಿ ವಿನೂತನ ಕೆಲಸ ಮಾಡಿದ್ದಾರೆ.
ರಂಭಾಪುರ ಗ್ರಾಮದಲ್ಲಿರುವ ಬಸವೇಶ್ವರ ಗ್ರೂಪ್ ವತಿಯಿಂದ ಇಡೀ ರಂಭಾಪುರ ಗ್ರಾಮದಲ್ಲಿ ಸ್ಯಾನಿಟೈಸ್ ಸಿಂಪಡಣೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಬಸವೇಶ್ವರ ಜಾತ್ರೆ ಮಾಡುವ ಖರ್ಚಿನ ಹಣವನ್ನು ಬಳಸಿ ಗ್ರಾಮದ ತುಂಬೆಲ್ಲ ಸ್ಯಾನಿಟೈಸರ್ ಸಿಂಪಡಣೆ ಮಾಡುವ ಮೂಲಕ ಕೊರೊನಾ ವಿರುದ್ಧ ಹೋರಾಟದಲ್ಲಿ ಪಾಲ್ಗೋಂಡಿದ್ದಾರೆ.
ಟ್ರ್ಯಾಕ್ಟರ್ ಮೂಲಕ ಹಾಗೂ ಯುವಕರು ಬೆನ್ನಿಗೆ ಔಷಧಿ ಸಿಂಪಡಣೆ ಟ್ಯಾಂಕ್ ಹಾಕಿಕೊಂಡು ಇಡೀ ರಂಭಾಪುರ ಗ್ರಾಮದ ತುಂಬ ಸಂಚರಿಸಿ ಔಷಧಿ ಸಿಂಪಡಿಸಿದ್ದಾರೆ. ಈ ಮೂಲಕ ಜಾತ್ರೆಯ ಹಣವನ್ನು ಇಡೀ ಗ್ರಾಮಸ್ಥರ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ವಹಿಸುವ ಮೂಲಕ ಸದುಪಯೋಗ ಪಡಿಸಿಕೊಳ್ಳಲಾಗಿದೆ. ಅಲ್ಲದೇ, ಈ ಹಣ ಬಸವೇಶ್ವರ ಗ್ರೂಪ್ ಸದಸ್ಯರು ವೈಯಕ್ತಿಕವಾಗಿ ನೀಡಿದ ದುಡ್ಡು ಆಗಿದೆ ಎಂದು ಗ್ರುಪ್ ಮುಖಂಡರಾದ ಶರಣ ಪಾಟೀಲ ಮತ್ತು ನಾಗೇಶ ಮೆಂಡೆಗಾರ ಮತ್ತು ಸುನೀಲ ಗೋಡೆನವರ ಮಾಹಿತಿ ನೀಡಿದ್ದಾರೆ.