ಬೆಂಗಳೂರು: ಒಂದು ಅಕೌಂಟಿಬಿಲಿಟಿ ಇದ್ದರೆ ರೆಮಿಡಿಸಿವಿರ್ ಎಂಜೆಕ್ಷನ್ ಅಕ್ರಮ ಮಾರಾಟ ತಪ್ಪಿಸಲು ಸಾಧ್ಯ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಪ್ರಕೃತಿ ವಿಕೋಪ ನಿರ್ವಹಣೆ ಸಲಕರಣೆಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಬಳಿಕ ಮಾಧ್ಯದಮಗಳ ಜೊತೆ ಮಾತನಾಡಿದ ಅವರು, ರೆಮಿಡಿಸಿವಿರ್ ಅಕ್ರಮ ಮಾರಾಟ ತಪ್ಪಿಸಲು ಅಕೌಂಟಿಬಿಲಿಟಿ ಅಗತ್ಯವಾಗಿದೆ. ಒಂದು ಬ್ಯಾಚಿನ ಔಷಧಿ ಯಾರಿಗೆ, ಎಷ್ಟು ಜನರಿಗೆ ಹೋಗಿದೆ? ಎಷ್ಟು ಜನರಿಗೆ ಕೊಡಬೇಕು? ಎಷ್ಟು ಜನರಿಗೆ ನೀಡಲಾಗಿದೆ? ಎಂಬುದರ ಬಗ್ಗೆ ಲೆಕ್ಕ ಇರಬೇಕು. ಆರೋಗ್ಯ ಇಲಾಖೆ ಈ ಬಗ್ಗೆ ಗಮನ ಹರಿಸಲಿದೆ ಎಂದು ತಿಳಿಸಿದ ಅವರು, ಇಂಥ ಅಕ್ರಮ ಮಾರಾಟ ಪ್ರಕರಗಳು ರಾಜ್ಯಾದ್ಯಂತ ವರದಿಯಾಗಿದ್ದು, ಎಲ್ಲ ಕಡೆ ಕ್ರಿಮಿನ್ಯಾಲಿಟಿ ಇದೆ. ಹಳೆಯ ವೈಯಲ್ ನಲ್ಲಿ ಬೇರೆ ಔಷಧಿ ತುಂಬಿ ಮಾರಾಟ ಮಾಡುತ್ತಿದ್ದ ಪ್ರಕರಣಗಳನ್ನು ಪೊಲೀಸರು ಪತ್ತೆ ಹಚ್ಚಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ ಎಂದು ತಿಳಿಸಿದರು.
ವೃತ್ತಿಪರ ನೀತಿ ಸಂಹಿತೆ ಉಲ್ಲಂಘಿಸಿ ರೆಮಿಡಿಸಿವಿರ್ ಔಷಧಿಯನ್ನು ಅಕ್ರಮವಾಗಿ ಮಾರಾಟ ಮಾಡುವ ಮೂಲಕ ಅಪರಾಧಗಳಲ್ಲಿ ಭಾಗಿಯಾದವರ ವಿರುದ್ಧ ಪ್ರಕರಣಗಳು ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ತಮಗೆ ನೀಡಲಾಗಿರುವ ಔಷಧಿಯನ್ನು ದುರುಪಯೋಗ ಪಡಿಸಿಕೊಲ್ಳುವುದು ಮತ್ತು ಖಾಲಿ ಶಿಶೆಗಳಲ್ಲಿ ಸಲಾಯಿನ್ ತುಂಬಿ ಮಾರಾಟ ಮಾಡಿದ ಘಟನೆಗಳ ವಿರುದ್ಧವೂ ತನಿಖೆ ನಡೆಯುತ್ತಿದೆ. ತನಿಖೆಯಲ್ಲಿ ಅಪರಾಧ ಸಾಬೀತವಾದರೆ ವೃತ್ತಿಪರ ನೀತಿ ಸಂಹಿತೆ ಪಾಲಿಸದ ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ಬೆಂಗಳೂರು ಅಷ್ಟೇ ಅಲ್ಲ, ಮೈಸೂರು, ದಾವಣಗೆರೆ ಸೇರಿದಂತೆ ಪ್ರತಿನಿತ್ಯ ಒಂದಿಲ್ಲೊಂದು ಕಡೆ ಇಂಥ ಪ್ರಕರಣಗಳು ದಾಖಲಾಗುತ್ತವೆ ಎಂದು ಅವರು ತಿಳಿಸಿದರು.
ಎಸ್ ಡಿ ಆರ್ ಎಫ್ ಗೆ ಬಲ ನೀಡುವ ಕೆಲಸವನ್ನು ಸರಕಾರ ಮಾಡುತ್ತಿದೆ. ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಕಳೆದ ವರ್ಷ 100ಕ್ಕೂ ಹೆಚ್ಚು ಜನ ಮಾಜಿ ಸೈನಿಕರನ್ನು ಕೆಲಸಕ್ಕೆ ಸೇರಿಸಿಕೊಳ್ಳಲಾಗಿದೆ. ಈ ಬಾರಿ ಮತ್ತೆ ಹೊಸದಾಗಿ 100 ಜನರನ್ನು ಸೇರಿಸಿಕೊಳ್ಳಲಾಗುತ್ತಿದೆ. ಈಗಾಗಲೇ 434 ಜನ ನಾಲ್ಕು ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರು, ಮಂಗಳೂರು, ಕಲಬುರಗಿ ಮತ್ತು ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗ ಹೊಸದಾಗಿ ದಾವಣಗೆರೆ, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ಮಧ್ಯೆ ಒಂದು ಕಂಪನಿ ತೆರೆಯಲಾಗುವುದು. ಬೆಳಗಾವಿ ಜಿಲ್ಲೆಯಲ್ಲಿ ಪದೇ ಪದೇ ಪ್ರವಾಹ ಉಂಟಾಗುತ್ತಿದೆ ಎಂದು ಅವರು ತಿಳಿಸಿದರು.
ಕಳೆದ ವರ್ಷ ಪ್ರವಾಹ ಪರಿಸ್ಥಿತಿ ನಿರ್ವಹಣೆಗಾಗಿ ನಾನಾ ಸಲಕರಣೆ ಖರೀದಿಗೆ ರಾಜ್ಯ ಸರಕಾರ ರೂ. 15 ಕೋ. ಬಿಡುಗಡೆ ಮಾಡಿತ್ತು. ಈವರೆಗೆ ಪ್ರಮುಖ ಸಲಕರಣೆಗಳು ಇರಲಿಲ್ಲ. ಹೈಡ್ರಾಲಿಕ್, ಎಲೆಕ್ಟಿಕ್, ಬ್ಯಾಟರಿ ಆಧರಿತ ಸಲಕರಣೆಗಳನ್ನು, ಚಂಡಮಾರುತ ಬಂದ ಸಂದರ್ಭಗಳಲ್ಲಿ ಸ್ಪೀಡ್ ಬೋಟು ಮತ್ತು ಜನರ ರಕ್ಷಣೆಗೆ ಅಗತ್ಯವಾಗಿರುವ ಸಲಕರಣೆಗಳನ್ನು ಈಗ ಖರೀದಿ ಮಾಡಲಾಗಿದೆ. ಪ್ರವಾಹ ಪರಿಸ್ಥಿತಿ ಎದುರಿಸಲು ಈಗಾಗಲೇ ಒಂದು ಬ್ಯಾಚ್ ಸಲಕರಣೆಗಳು ಉಡುಪಿಗೆ ಹೋಗಿವೆ. ಹೊಸದಾಗಿ ಬಸ್ಸುಗಳು, ಲಾರಿಗಳು ಮತ್ತೀತರ ಸಲಕರಣೆಗಳಿಗೆ ಈಗಾಗಲೇ ಹಸಿರು ನಿಶಾನೆ ತೋರಿಸಿದ್ದೇನೆ. ಅವುಗಳು ಮಂಗಳೂರು, ಉಡುಪಿ ಕಾರವಾರಕ್ಕೆ ಹೋಗಿವೆ. ಕಲಬುರಗಿಯಿಂದಲೂ ನುರಿತ ಸಿಬ್ಬಂದಿಯನ್ನು ಮತ್ತು ವಾಹನಗಳನ್ನು ತರಿಸಲಾಗುತ್ತಿದೆ ಎಂದು ಗೃಹ ಸಚಿವರು ತಿಳಿಸಿದರು.
ಎಸ್ ಡಿ ಆರ್ ಎಫ್, ಫಾಯರ್ ಫೋರ್ಸ್, ಸಿವಿಲ್ ಮತ್ತು ವೆಸ್ಟರ್ನ್ ಪೊಲೀಸ್, ಹೋಂ ಗಾರ್ಡ್ಸ್ ಹಾಗೂ ಸಿವಿಲ್ ಡಿಫೆಂಸ್ ನ ಒಂದು ಸಾವಿರ ಜನರನ್ನು ಈಗ ಚಂಡಮಾರುತ ಪೀಡಿತ ಜಿಲ್ಲೆಗಳಲ್ಲಿ ನಿಯೋಜನೆ ಮಾಡಲಾಗಿದೆ. ತಗ್ಗು ಪ್ರದೇಶಗಳಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗುತ್ತಿದೆ. ಉಡುಪಿಯಲ್ಲಿ ಸುಮಾರು 34 ಮನೆಗಳು ಚಂಡಮಾರುತದಿಂದಾಗಿ ಹಾನಿಗೀಡಾಗಿವೆ. ಅವುಗಳಲ್ಲಿರುವ ಜನರನ್ನು ರಕ್ಷಿಸಲಾಗಿದೆ. ಮೂಡಬಿದ್ರಿ-ಸೂರತ್ಕಲ್ ಬಳಿ ಮುಳುಗಿದ್ದ ಒಂದು ಹಡಗಿನಲ್ಲಿದ್ದ 8 ಜನ ಕಾಣೆಯಾಗಿದ್ದರು. ಇಬ್ಬರನ್ನು ರಕ್ಷಿಸಲಾಗಿದ್ದು, ಕೆಲವು ಶವಗಳು ಸಿಕ್ಕಿವೆ. ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ ಎಂದು ಅವರು ತಿಳಿಸಿದರು.
ಆಪತ್ತು ನಿರ್ವಹಣೆಗೆ ಈಗ ಮತ್ತೆ ರೂ. 15 ಕೋ. ಹಣವನ್ನು ನೀಡಲಾಗುತ್ತಿದೆ. ನಾಲ್ಕು ಜೆಸಿಬಿ, ಸುಮಾರು 14 ಆ್ಯಂಬುಲನ್ಸ್ ಗಳು ಇನ್ನೆರಡು ಕಂಪನಿಗಳನ್ನು ಸ್ಥಾಪಿಸುವುದು ಹಾಗೂ ಸಲಕರಣೆಗಳನ್ನು ಖರೀದಿಸುವ ಕಾರ್ಯ ಈಗ ನಡೆಯುತ್ತಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಈ ಸಂದರ್ಭದಲ್ಲಿ ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಜನೀಶ ಗೋಯಲ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ ಸೂದ, ರಾಜ್ಯ ಪೊಲೀಸ ಮಹಾನಿರ್ದೇಶಕ ಹಾಗೂ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ನಿರ್ದೇಶನಾಲಯದ ನಿರ್ದೇಶಕ ಅಮರ ಕುಮಾರ ಪಾಂಡೆ, ಎಡಿಜಿಪಿ ಸುನಿಲ್ ಅಗರ್ವಾಲ, ಎಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು.