ವಿಜಯಪುರ- ಕಳೆದ ಸುಮಾರು ಒಂದು ತಿಂಗಳಿಂದ ವಿಜಯಪುರ ಮತಕ್ಷೇತ್ರದ ಜನತೆಗೆ ಕೊರೊನಾ ಲಸಿಕೆ ಹಾಕಿಸಲು ಅಭಿಯಾನ ಕೈಗೊಂಡಿದ್ದ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಈಗ ಕೊರೊನಾ ವಾರಿಯರ್ಸ್ ನೆರವಿಗೆ ಧಾವಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕೊರೊನಾ ಮಾಹಾಮಾರಿಯ ಎರಡನೇ ಅಲೆಯಲ್ಲಿ ಸಾಕಷ್ಟು ಜನರು ತೀವ್ರ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಹೆಚ್ಚಿನ ರೋಗಿಗಗಳಿಗೆ ಪ್ರಾಣವಾಯು, ವೆಂಟಿಲೇಟರ್ ಗಳನ್ನು ಅವಲಂಬಿಸಬೇಕಾಗಿದೆ. ಇಂಥ ಸಂದಿಗ್ಧ ಪರಿಸ್ಥಿತಿತಿಯಲ್ಲಿಯೂ ಕೂಡ ಜೀವದ ಹಂಗು ತೊರೆದು ವಿಜಯಪುರ ನಗರದಲ್ಲಿ ಕೊರೊನಾ ಲಸಿಕೆ ಹಾಕಿಸುವ ನಿಟ್ಟಿನಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ 53 ಜನ ಆಶಾ ಕಾರ್ಯಕರ್ತೆಯರು ಹಾಗೂ ವಿಜಯಪುರ ನಗರದ ಶಾಂತಿನಗರ, ದರ್ಗಾ, ಯೋಗಾಪುರ, ಗಣೇಶ ನಗರ, ನವಭಾಗ ಮತ್ತು ಎಪಿಎಂಸಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಳ 92 ಜನ ನರ್ಸಿಂಗ್ ಸಿಬ್ಬಂದಿ ಹಾಗೂ ವಾಹನಗಳ ಚಾಲಕರಿಗೆ ಪ್ರೋತ್ಸಾಹ ನೀಡಲು ನಿರ್ಧರಿಸಲಾಗಿದೆ.
ಒಟ್ಟು 145 ಜನ ಸಿಬ್ಬಂದಿಗೆ ರೂ. 5000 ಪ್ರೋತ್ಸಾಹ ಧನದ ಸ್ಮಾರ್ಟ್ ಕಾರ್ಡ್ ನೀಡಲಾಗುವುದು. ಈ ಸ್ಮಾರ್ಟ್ ಕಾರ್ಡ್ ಬಳಸಿ ವಿಜಯಪುರ ನಗರದಲ್ಲಿರುವ ಶ್ರೀ ಸಿದ್ಧೇಶ್ವರ ಸೂಪರ್ ಬಜಾರ್ ಅಥವಾ ವಿಜಯಪುರ ನಗರದ ಹೊರ ಭಾಗದಲ್ಲಿರುವ ಹೈಪರ್ ಮಾರ್ಟ್ ನಲ್ಲಿ ರೂ. 5000 ವರೆಗೆ ತಮಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಶೀಘ್ರದಲ್ಲಿಯೇ ಆಶಾ ಕಾರ್ಯಕರ್ತೆಯರಿಗೆ ಮತ್ತು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯ ಹೆಸರಿನಲ್ಲಿ ಈ ಸ್ಮಾರ್ಟ್ ಕಾರ್ಡ್ ನೀಡಲಾಗುವುದು. ಇದರಿಂದ ಈ ಸಿಬ್ಬಂದಿ ಮತ್ತಷ್ಟು ಹುರುಪಿನಿಂದ ಕೊರೊನಾ ಸೋಂಕಿತರ ಸೇವೆಯಲ್ಲಿ ಮತ್ತು ಕೊರೊನಾ ತಡೆಯಲು ಪ್ರೋತ್ಸಾಹ ನೀಡಲಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.