4000 ಕೊರೊನಾ ವಾರಿಯರ್ಸ್, ಕೊವಿಡ್ ಕಾರ್ಯಪಡೆ ಪದಾಧಿಕಾರಿಗಳಿಗೆ ರೋಗ ನಿಯಂತ್ರಣ ಕುರಿತು ಯುಟ್ಯೂಬ್ ಮೂಲಕ ತಿಳಿವಳಿಕೆ

ವಿಜಯಪುರ: ಕೊರೊನಾ ಎರಡನೇ ಅಲೆ ಗ್ರಾಮೀಣ ಭಾಗಕ್ಕೆ ವ್ಯಾಪಕವಾಗಿ ಹರಡದಂತೆ ಬಸವ ನಾಡು ವಿಜಯಪುರ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಯ ಕೋವಿಡ್-19 ಕಾರ್ಯಪಡೆಯ ಸುಮಾರು 4000 ಜನ ಕೊರೊನಾ ವಾರಿಯರ್ಸ್, ಅಧ್ಯಕ್ಷರು ಮತ್ತು ಸದಸ್ಯರಿಗೆ ಯೂಟ್ಯೂಬ್ ಚಾನಲ್ ಮುಖಾಂತರ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ, ಜಿ. ಪಂ. ಸಿಇಓ ಗೋವಿಂದ ರೆಡ್ಡಿ ಮತ್ತು ಆರೋಗ್ಯ ಇಲಾಖೆ ಹಿರಿಯ ತಜ್ಞ ವೈದ್ಯರ ನೇತೃತ್ವದಲ್ಲಿ ಏಕಕಾಲಕ್ಕೆ ತಿಳುವಳಿಕೆಯನ್ನು ನೀಡಲಾಯಿತು.

ಕೊರೊನಾ ಎರಡನೇ ಅಲೆಯು ಹರಡದಂತೆ ಸರಪಳಿಯನ್ನು ತುಂಡರಿಸಲು ಈಗಾಗಲೇ ಸರಕಾರದಿಂದ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಕೊರೊನಾ ಪ್ರಕರಣಗಳು ನಗರ, ಪಟ್ಟಣ ಮಟ್ಟದಿಂದ ಗ್ರಾಮ ಮಟ್ಟಕ್ಕೂ ವೇಗವಾಗಿ ಹರಡುತ್ತಿವೆ. ಇದರ ನಿಯಂತ್ರಣ ಕುರಿತು ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಪಿ. ಸುನಿಲ ಕುಮಾರ, ಜಿ. ಪಂ. ಸಿಇಓ ಗೋವಿಂದ ರೆಡ್ಡಿ ಇವರ ನೇತೃತ್ವದಲ್ಲಿ ತಜ್ಞ ವೈದ್ಯರಾದ ಡಾ. ಲಕ್ಕಣ್ಣವರ, ಸ್ಥಾನಿಕ ವೈದ್ಯಾಧಿಕಾರಿ ಡಾ. ಮುಕುಂದ ಗಲಗಲಿ. ಯಶೋಧಾ ಆಸ್ಪತ್ರೆಯ ಡಾ. ಮದ್ದರಕಿ ಅವರು ವಿಡಿಯೋ ಸಂವಾದದ ಮೂಲಕ ಮತ್ತು ಯುಟ್ಯೂಬ್ ಚಾನೆಲ್ ಮುಖಾಂತರ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ಕೋವಿಡ -19 ಕಾರ್ಯಪಡೆಯ ಅಧ್ಯಕ್ಷರು ಹಾಗೂ ಸದಸ್ಯರಿಗೆ ತಿಳುವಳಿಕೆಯನ್ನು ನೀಡಿದರು.

ಯ್ಯೂಟ್ಯೂಬ್ ಮೂಲಕ ಕೊವಿಡ್-19 ಕಾರ್ಯಪಡೆ ಪದಾಧಿಕಾರಿಗಳಿಗೆ ವಿಜಯಪುರ ಜಿಲ್ಲಾಡಳಿತದಿಂದ ಜಾಗೃತಿ ಕಾರ್ಯಕ್ರಮ

ಸತತ ಮೂರು ಗಂಟೆಗಳ ಕಾಲ ನಡೆದ ಈ ಸಭೆಯಲ್ಲಿ ಕೋವಿಡ್ -19 ಸಂಕಷ್ಟ ಪರಿಸ್ಥಿತಿಯಲ್ಲಿ ಎಲ್ಲರೂ ದೇಶ ಸೇವೆ ಮಾಡುವ ಸುಸಂದರ್ಭ ಒದಗಿಬಂದಿದ್ದು, ಈ ಸೋಂಕು ಹರಡದಂತೆ ಸರಕಾರದ ಮಾರ್ಗಸೂಚಿ ಗಳಂತೆ ಅವಶ್ಯಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು. ಮಾಸ್ಕ ಧರಿಸುವುದು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು, ಶುಚಿತ್ವ ಇತ್ಯಾದಿ ಕ್ರಮಗಳನ್ನು ತೆಗೆದುಕೊಳ್ಳುವುದರ ಮೂಲಕ ಜಿಲ್ಲೆಯ ಪ್ರತಿಯೊಂದು ಗ್ರಾಮಗಳನ್ನು ಕೊರೊನಾ ಮುಕ್ತ ಗ್ರಾಮಗಳನ್ನಾಗಿ ಮಾಡಿ ರಾಜ್ಯ ಮತ್ತು ದೇಶಕ್ಕೆ ಮಾದರಿ ಗ್ರಾಮಗಳನ್ನಾಗಿ ಮಾಡುವ ಮೂಲಕ ದೇಶ ಸೇವೆ ಮಾಡೋಣ. ಎಲ್ಲ ಗ್ರಾಮ ಪಂಚಾಯಿತಿಯ ಕಾರ್ಯಪಡೆಯ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಗ್ರಾಮಸ್ಥರು ಜಿಲ್ಲಾಡಳಿತದೊಂದಿಗೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನಿಲ ಕುಮಾರ ಅವರು ಕರೆ ನೀಡಿದರು.

ಜಿ. ಪಂ. ಸಿಇಓ ಗೋವಿಂದ ರೆಡ್ಡಿ ಮಾತನಾಡಿ, ಕೋವಿಡ್- 19 ಕುರಿತು ಗ್ರಾಮಸ್ಥರಿಗೆ ಈಗಾಗಲೇ ಸಾಕಷ್ಟು ತಿಳಿವಳಿಕೆ ಇದ್ದರೂ ಸಹ ಮಾಸ್ಕ ಧರಿಸದೇ ಇರುವುದು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೆ ಇರುವುದರಿಂದ ಗ್ರಾಮೀಣ ಮಟ್ಟದಲ್ಲಿ ಕೋವಿಡ್- 19 ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇದೊಂದು ಅತ್ಯಂತ ಕಷ್ಟ ಕಾಲವಾಗಿದ್ದು ಇಂಥ ಸಮಯದಲ್ಲಿ ಗ್ರಾಮ ಪಂಚಾಯಿತಿ ಕಾರ್ಯಪಡೆಯ ಅಧ್ಯಕ್ಷರು ಹಾಗೂ ಸದಸ್ಯರುಗಳು ಗ್ರಾಮ ಮಟ್ಟದಲ್ಲಿ ಕೋವಿಡ್- 19 ಕುರಿತು ಪ್ರತಿ ಮನೆ ಮನೆಗೂ ಮಾಸ್ಕ ದರಿಸುವಿಕೆ, ಸಾಮಾಜಿಕ ಅಂತರ ಕಾಪಾಡುವಿಕೆ ಹಾಗೂ ಪ್ರಾರಂಭಿಕ ಹಂತದಲ್ಲಿ ಸೂಕ್ತ ಚಿಕಿತ್ಸೆಯನ್ನು ಪಡೆದರೆ ಯಶಸ್ವಿಯಾಗಿ ತಡೆಗಟ್ಟಬಹುದಾಗಿದು. ಈ ಮಾಹಿತಿಯನ್ನು ಗ್ರಾಮಸ್ಥರಿಗೆ ತಲುಪಿಸುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ ಎಂದು ತಿಳಿಸಿದರು.

ನೆಗಡಿ. ಕೆಮ್ಮು. ಜ್ವರ ಇನ್ನಿತರೆ ಕೊರೊನಾ ಲಕ್ಷಣಗಳು ಕಂಡು ಬಂದ ಕೂಡಲೇ ಗ್ರಾಮಸ್ಥರು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ವೈದ್ಯರ ಸಲಹೆ ಪಡೆದುಕೊಂಡು ಔಷಧಿಯನ್ನು ತೆಗೆದುಕೊಳ್ಳಲು ಗ್ರಾಮಸ್ಥರಿಗೆ ಸೂಕ್ತ ತಿಳುವಳಿಕೆ ನೀಡಲು ಡಾ. ಮುಕುಂದ ಗಲಗಲಿ. ಡಾ ಲಕ್ಕಣ್ಣವರ್ ಹಾಗೂ ಡಾ. ಮದ್ದರಕಿ ಅವರು ಕೋವಿಡ್ -19 ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತಿಯ 15ನೇ ಹಣಕಾಸು ಯೋಜನೆಯಡಿ ಇರುವ ಅನುದಾನವನ್ನು ನಿಯಮಾನುಸಾರ ಬಳಸಿಕೊಂಡು ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳಿಗೆ ಔಷಧೀಯ ಕಿಟ್ ಗಳನ್ನು ಖರೀದಿಸಲು ಅಗತ್ಯ ಕ್ರಮ ಕೈಗೊಳ್ಳಲು ಗ್ರಾಮ ಪಂಚಾಯಿತಿ ಕಾರ್ಯಪಡೆಯ ಅಧ್ಯಕ್ಷರು ಹಾಗೂ ಸದಸ್ಯರುಗಳಿಗೆ ಜಿಲ್ಲಾಧಿಕಾರಿ ಪಿ. ಸುನಿಲ ಕುಮಾರ ಮತ್ತು ಜಿ. ಪಂ. ಸಿಇಓ ಗೋವಿಂದ ರೆಡ್ಡಿ ಸೂಚನೆ ನೀಡಿದರು.

ಈ ವಿಡಿಯೋ ಸಂವಾದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಮಲ್ಲನಗೌಡ ಬಿರಾದಾರ, ವೈದ್ಯಾಧಿಕಾರಿಗಳು. ಜಿಲ್ಲೆಯ ನಾನಾ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಶಾಲಾ ಮುಖ್ಯ ಶಿಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು, ಆಶಾ ಕಾರ್ಯಕರ್ತೆಯರು. ಅಂಗನವಾಡಿ ಕಾರ್ಯಕರ್ತೆಯರು. ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು. ಜಿಲ್ಲೆಯ ಎಲ್ಲಾ 212 ಗ್ರಾ. ಪಂ. ಗಳ ಕೋವಿಡ್- 19 ಕಾರ್ಯಪಡೆಯ ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 4000 ಕೋವಿಡ್ -19 ವಾರಿಯರ್ಸ್ ಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Leave a Reply

ಹೊಸ ಪೋಸ್ಟ್‌