ವಿಜಯಪುರ: ವಿಜಯಪುರ ಜಿಲ್ಲೆಯ ಬಬಲೇಶ್ವರ ವಿಧಾನಸಭಾ ಕ್ಷೇತ್ರ್ರದ ಕಾರಜೋಳ ಮತ್ತು ತಿಕೋಟಾಗಳಲ್ಲಿ ಮೊದಲ ಹಂತದಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗುತ್ತಿದೆ ಎಂದು ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬಬಲೇಶ್ವರ ತಹಶೀಲ್ದಾರ ಮಲ್ಲಿಕಾರ್ಜುನ ಅರಕೇರಿ ಮತ್ತು ತಿಕೋಟಾ ತಹಸೀಲ್ದಾರ ಸಂತೋಷ ಮ್ಯಾಗೇರಿ ಹಾಗೂ ತಾಲೂಕಾ ಆರೋಗ್ಯಾಧಿಕಾರಿ ಡಾ. ಕವಿತಾ ದೊಡಮನಿ ಅವರೊಂದಿಗೆ ಈ ಕುರಿತು ಚರ್ಚೆ ನಡೆಸಲಾಗಿದೆ. ಪ್ರಥಮ ಹಂತದಲ್ಲಿ ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಹಾಗೂ ತಿಕೋಟಾ ಪಟ್ಟಣದ ಬಿಸಿಎಂ ವಸತಿ ನಿಲಯ ಹಾಗೂ ಬಿ ಎಲ್ ಡಿ ಇ ಸಂಸ್ಥೆಯ ಹಾಸ್ಟೇಲ್ ನಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲು ತಾಲೂಕು ಆಡಳಿತದಿಂದ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಥಮ ಹಂತದಲ್ಲಿ ಕಾರಜೋಳದಲ್ಲಿ 90 ಹಾಸಿಗೆಗಳ ಕೇಂದ್ರವನ್ನು ಆರಂಭಿಸಲಾಗುತ್ತಿದ್ದು, ಅಗತ್ಯವಿದ್ದರೆ ಬೇರೆ ಸ್ಥಳಗಳಲ್ಲಿಯೂ ವಿಸ್ತರಿಸಲಾಗುವುದು ಎಂದು ಎಂ. ಬಿ. ಪಾಟೀಲ ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ನಂತರ ಎಲ್ಲ ಕಡೆ ಮನೆ, ಮನೆ ಸರ್ವೇ ಮಾಡಿ, ರೋಗ ಲಕ್ಷಣಗಳು ಇರುವವರನ್ನು ಗುರುತಿಸುವ ಕಾರ್ಯ ಆರಂಭ ಮಾಡಿರುವುದು ಸ್ವಾಗತಾರ್ಹ. ಅಂಥವರ ಪ್ರಾಥಮಿಕ ಚಿಕಿತ್ಸೆಗೆ ಈ ಕೋವಿಡ್ ಕೇರ್ ಸೆಂಟರ್ ಗಳನ್ನು ಬಳಸಬಹುದು. ಸಾರ್ವಜನಿಕರು ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲು ಅಗತ್ಯ ಮೂಲಭೂತ ಸೌಕರ್ಯಗಳನ್ನು ಸ್ಥಳ, ಸಮುದಾಯ ಭವನಗಳು, ಶಾಲೆಗಳು, ಗೋಡಾವನಗಳು, ವಿಶಾಲ ಕಟ್ಟಡಗಳನ್ನು ಸ್ವಯಂ ಪ್ರೇರಿತವಾಗಿ ನೀಡಲು ಮುಂದೆ ಬರಬೇಕು ಹಾಗೂ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ದಾಖಲಾದವರಿಗೆ ಎಲ್ಲ ರೀತಿಯ ನೆರವು ನೀಡಲು ದಾನಿಗಳು ಮುಂದಾಗಬೇಕು ಎಂದು ಎಂ. ಬಿ. ಪಾಟೀಲ ಮನವಿ ಮಾಡಿದ್ದಾರೆ.