ವಿಜಯಪುರ- ಕೊರೊನಾ ಎರಡನೇ ಅಲೆಯಿಂದಾಗಿ ಗುಮ್ಮಟ ನಗರಿ ವಿಜಯಪುರ ಜಿಲ್ಲೆಯಲ್ಲಿ ಬೆಡ್, ರೆಮಿಡಿಸಿವಿರ್ ಎಂಜೆಕ್ಷನ್ ಸೇರಿದಂತೆ ಆಕ್ಸಿಜನ್ ಕೊರತೆಯೂ ದಿನೇ ದಿನೇ ಹೆಚ್ಚುತ್ತಿದೆ. ಕೊರೊನಾ ಸೋಂಕಿತರ ಸಂಕಷ್ಯವನ್ನು ನೋಡಲಾಗಿದೆ ಬಸವ ನಾಡಿನ ಜೈನ ಸಮುದಾಯ ಸಹಾಯಕ್ಕೆ ನಿಂತಿದೆ.
ಒಂದೆಡೆ ಕೊರೊನಾ ವ್ಯಾಪಕವಾಗಿ ಹರಡುತ್ತಿದ್ದರೆ ಮತ್ತೋಂದೆಡೆ ನಾನಾ ಆಸ್ಪತ್ರೆಗಳಲ್ಲಿ ಆಸ್ಪತ್ರೆಗಳಲ್ಲಿ ಆಕ್ಸಿಜನ್, ಬೆಡ್ ಕೊರತೆಯಿಂದಾಗಿ ನಿತ್ಯ ರೋಗಿಗಳು ತೊಂದರೆ ಎದುರಿಸುತ್ತಿದ್ದಾರೆ. ಹೀಗಾಗಿ ರೋಗಿಗಳಿಗೆ ಸಕಾಲಕ್ಕೆ ಆಕ್ಸಿಜನ್ ಸೇರಿದಂತೆ ನಾನಾ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ವಿಜಯಪುರದ ನಾನಾ ಜೈನ್ ಸಂಘಟನೆಗಳು ನೆರವಿಗೆ ಧಾವಿಸಿವೆ.
ಈ ಜೈನ್ ಸಮಾಜಗಳು ಐದು ಯೋಜನೆಗಳನ್ನು ಹಾಕಿಕೊಂಡು ಕೊರೊನಾ ವಿರುದ್ದ ಸಮರ ಸಾರಿವೆ. ವಿಜಯಪುರದ ಜೈನ್ ಇಂಟರನ್ಯಾಷನಲ್ ಟ್ರೇಡ್ ಆರ್ಗನೈಸೇಶನ್, ಭಾರತೀಯ ಜೈನ್ ಸಂಘಟನೆ, ದುಬೈ ಜೈನ್ ಸೇವಾ ಮಿಷನ್ ಹಾಗೂ ಜೈನ್ ಸಮಾಜದ ನಾನಾ ಸಂಘಟನೆಗಳು, ಸಮಸ್ತ ಜೈನ್ ಸಮಾಜ ಒಗ್ಗೂಡಿ ಕೊರೊನಾ ರೋಗಿಗಳ ಸೇವೆಗೆ ಮುಂದಾಗಿವೆ.
ವಿಜಯಪುರ ನಗರದಲ್ಲಿರುವ ಮತ್ತು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಧ್ಯಕ್ಷರಾಗಿರುವ ಶ್ರೀ ಸಿದ್ದೇಶ್ವರ ಸಂಸ್ಥೆಯ ಸಹಯೋಗದೊಂದಿಗೆ 100 ಬೆಡ್ ಗಳ ಕೊವಿಡ್ ಐಸೋಲೆಶನ್ ಸೆಂಟರ್ ಸ್ಥಾಪಿಸಿ ಚಿಕಿತ್ಸೆ ನೀಡಲಾಗುತ್ತಿದೆ. 36 ಆಕ್ಸಿಜನ್ ಕಾನಂಸ್ಟ್ರೇಟರ್ ಗಳನ್ನು ಕೊರೊನಾ ಸೋಂಕಿತರಿಗೆ ನೀಡಿವೆ. ಎರಡು ಬಿಪಾಪ್ ಮಶಿನ್ ಅಂದರೆ ಮಿನಿ ವೆಂಟಿಲೇಟರ್ ಗಳನ್ನು ಆಸ್ಪತ್ರೆಗೆ ವಿತರಿಸಲಾಗಿವೆ. ಜೈನ್ ಸಮಾಜದ 50-60 ಯುವಕರು ರಕ್ತದಾನ ಹಾಗೂ ಕೊರೊನಾಗೆ ರಾಮಭಾಣ ವಾಗಿರುವ ಪ್ಲಾಜ್ಮಾ ದಾನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಅಲ್ಲದೆ ಬಡ ರೋಗಿಗಳಿಗೆ ಕೇವಲ ರೂ. 10 ರೂಪಾಯಿಗಳಲ್ಲಿ ಔಷಧಿ ಕಿಟ್ ನೀಡುತ್ತಿದ್ದೇವೆ ಎನ್ನುತ್ತಾರೆ ಜೈನ್ ಸಂಘಟನೆಯ ಸದಸ್ಯ ಲಲಿತ ಜೈನ.
ಅಷ್ಟೇ ಅಲ್ಲ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಿಜಯಪುರ ಜಿಲ್ಲೆಯಲ್ಲಿ ಬೃಹತ್ ಆಕ್ಸಿಜನ್ ಬ್ಯಾಂಕ್ ಸ್ಥಾಪನೆಯ ಮೂಲಕ ಗಮನ ಸೆಳೆದಿವೆ. ಈ ಯೋಜನೆಯಡಿಯಲ್ಲಿ ರೋಗಿಗಳ ಅನುಕೂಲಕ್ಕಾಗಿ 5 ಲೀಟರ್ ಸಾಮರ್ಥ್ಯದ 38 ಆಕ್ಸಿಜನ್ ಕಾನ್ಸಟೇಟರ್‌ಗಳನ್ನು ಬಾಡಿಗೆ ನೀಡುತ್ತಿದ್ದಾರೆ. ಇದಕ್ಕೆ ಯಾವುದೇ ರೀತಿಯ ಶುಲ್ಕ ವಿಧಿಸದೇ ಕೇವಲ ಸಾಗಾಣಿಕೆ ವೆಚ್ಚವಾಗಿ ದಿನಕ್ಕೆ ರೂ. 200 ರೂಪಾಯಿ ತೆಗೆದುಕೊಳ್ಳುತ್ತಿದ್ದಾರೆ. ಅಲ್ಲದೆ, ಬಂದ ಹಣವನ್ನು ಬಡವರಿಗೆ ರೂ. 10 ಗಳಲ್ಲಿ ಔಷಧಿ ಒದಗಿಸಲು ಬಳಸುತ್ತಿದ್ದಾರೆ. ಜೈನ್ ಸಂಘಟನೆಯವರ ಈ ಕಾರ್ಯಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊರೊನಾ ಕೋವಿಡ್ ಸಮಯದಲ್ಲಿ ಜೈನ್ ಸಮುದಾಯದ ಕಾರ್ಯ ಮಾನವೀಯತೆಯ ಪ್ರತೀಕವಾಗಿದೆ. ಜನತೆಗೆ ಪ್ರಾಣವಾಯು ದೊರಕಿಸುವ ಮಹತ್ವದ ಸೇವಾ ಕಾರ್ಯ ಮಾಡುತ್ತಿರುವುದು ಸಂತೋಷದ ಸಂಗತಿ. ಈ ಕಾರ್ಯ ನಿರಂತರವಾಗಿ ಸಾಗಲಿ ಎಂದು ಕೊವಿಡ್ ರೋಗಿಗಳ ಸಂಬಂಧಿಕರು ಜೈನ್ ಸಮಾಜದ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
ಜೈನ್ ಸಮಾಜದ ಈ ಕಾರ್ಯಕ್ಕೆ ಪ್ರೋತ್ಸಾಹಿಸುವ ಮೂಲಕ ಬೆನ್ನೆಲುಬಾಗಿ ನಿಂತಿರುವ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ, ಎಸ್ಪಿ ಅನುಪಮ ಅಗರವಾಲ ಮತ್ತು ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ ಸಮಸ್ತ ಜೈನ ಸಮಾಜವನ್ನು ಅಭಿನಂದಿಸಿದ್ದಾರೆ.
ಒಟ್ಟಿನಲ್ಲಿ ಕೊರೊನಾ ಎರಡನೇ ಅಲೆ ವಿರುದ್ದ ಸಮರ ಸಾರುವ ಮೂಲಕ ವಿಜಯಪುರದ ಜೈನ್ ಸಮಾಜವು ಕೊರೊನಾ ರೋಗಿಗಳಿಗೆ ಉತ್ತಮ ಸೇವೆ ಒದಗಿಸುತ್ತಿರುವುದು ಶ್ಲಾಘನೀಯವಾಗಿದೆ.