ಬೆಂಗಳೂರು: ವಿಜಯಪುರ ಜಿಲ್ಲೆಯ ಜನರಿಗಾಗಿ ಶೀಘ್ರವೇ ಅತ್ಯಾಧುನಿಕ ಸೌಲಭ್ಯವುಳ್ಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡವನ್ನು 100 ಬೆಡ್ ಗಳ ಕೋವಿಡ್ ಆಸ್ಪತ್ರೆಯಾಗಿ ಮಾರ್ಪಡಿಸಿ ಶೀಘ್ರವಾಗಿ ಸಾರ್ವಜನಿಕರ ಉಪಯೋಗಕ್ಕೆ ನೀಡಬೇಕು ಎಂದು ಆರೋಗ್ಯ ಸಚಿವ ಡಾ. ಸುಧಾಕರ ಅವರಿಗೆ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರು ಮನವಿ ಪತ್ರ ಸಲ್ಲಿಸಿದ್ದಾರೆ.
ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ. ಸುಧಾಕರ ಅವರನ್ನು ಭೇಟಿ ಮಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಜೊಲ್ಲೆ ನೇತೃತ್ವದ ಜಿಲ್ಲೆಯ ಶಾಸಕರ ನಿಯೋಗ ವಿಜಯಪುರ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಹೊಸದಾಗಿ ಬ್ಲ್ಯಾಕ್ ಪಂಗಸ್ ಕಾಯಿಲೆ ಕಾಣಿಸಿಕೊಳ್ಳುತ್ತಿದೆ. ಇದರ ಚಿಕಿತ್ಸೆಗೆ ಸೂಕ್ತವಾದ ತಜ್ಞ ವೈದ್ಯರ ಅವಶ್ಯಕತೆಯಿದ್ದು, ಕೂಡಲೇ ತಜ್ಞ ವೈದ್ಯರನ್ನು ನೇಮಕ ಮಾಡಬೇಕು ಎಂದು ಮನವಿ ಪತ್ರ ಸಲ್ಲಿಸಿದರು.
ಮುಖ್ಯಮಂತ್ರಿಯವರ ಆದೇಶದ ಹಿನ್ನೆಲೆಯಲ್ಲಿ ಉಸ್ತುವಾರಿ ಸಚಿವರು ಖುದ್ದಾಗಿ ಅಧಿಕಾರಿಗಳ ಜೊತೆಗೆ ಕೊರೊನಾಗೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲ ತಾಲೂಕು ಮತ್ತು ಹಲವು ಹಳ್ಳಿಗಳಿಗೆ ಭೇಟಿ ನೀಡಿದಾಗ ವೆಂಟಿಲೇಟರ್, ಬೆಡ್, ಆಕ್ಸಿಜನ್ ಬೆಡ್ ಸಮಸ್ಯೆ ಸೇರಿದಂತೆ ಅಗತ್ಯ ತಾಂತ್ರಿಕ ಸಿಬ್ಬಂದಿಯ ಅವಶ್ಯಕತೆ, ರೆಮಡಿಸಿವಿರ್ ಲಸಿಕೆಗೆ ಹೆಚ್ಚಿನ ಬೇಡಿಕೆ ಬಂದಿದೆ. ಅದರ ವಾಸ್ತವ ವರದಿಯನ್ನು ಸಚಿವರಿಗೆ ಈ ನಿಯೋಗ ನೀಡಿತು.
ವಿಜಯಪುರ ಜಿಲ್ಲೆಯಲ್ಲಿ ನಿರ್ಮಿಸುತ್ತಿರುವ ಹೈಟೆಕ್ ಆಸ್ಪತ್ರೆಯನ್ನು ಅಗತ್ಯ ಸಿಬ್ಬಂದಿಯೊಂದಿಗೆ 100 ಬೆಡ್ ಗಳ ಕೋವಿಡ್ ಆಸ್ಪತ್ರೆಯಾಗಿ ಮಾರ್ಪಡಿಸಿ, ಕೆಲಸ ಪ್ರಾರಂಭಿಸಬೇಕು. ಜಿಲ್ಲೆಯ 13 ತಾಲೂಕುಗಳ ಪೈಕಿ 4 ತಾಲೂಕುಗಳಲ್ಲಿ ಮಾತ್ರ ತಾಲೂಕಾಸ್ಪತ್ರೆ ಇದ್ದು, ಉಳಿದ ಒಂಬತ್ತು ತಾಲೂಕುಗಳಲ್ಲಿ ತಾಲೂಕಾಸ್ಪತ್ರೆ ಮಂಜೂರು ಮಾಡಬೇಕು. ಅಲ್ಲದೇ ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಿಸಬೇಕು. ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವೆಂಟಿಲೇಟರ್ ಬೆಡ್, ಆಕ್ಸಿಜನ್ ಬೆಡ್, ಸೂಕ್ತ ತಜ್ಞ ವೈದ್ಯರು ಹಾಗೂ ತಂತ್ರಜ್ಞರ ನೇಮಕ ಮಾಡಿ ಅವರಿಗೆ ಸೂಕ್ತವಾದ ತರಬೇತಿ ನೀಡಬೇಕು. ಎನ್ ಟಿ ಪಿ ಸಿ ಘಟಕದಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒಳಗೊಂಡ 100 ಬೆಡ್ ಗಳ ತಾತ್ಕಾಲಿಕ ಆಸ್ಪತ್ರೆ ನಿರ್ಮಿಸಲು ಎನ್ ಟಿ ಪಿ ಸಿ ಮುಖ್ಯಸ್ಥರಿಗೆ ಸೂಚನೆ ನೀಡಬೇಕು. ಜಿಲ್ಲೆಯಲ್ಲಿ 81 ನಾನಾ ವೃಂದದ ತಜ್ಞ ವೈದ್ಯರ ಅವಶ್ಯಕತೆಯಿದ್ದು, ಕೂಡಲೇ ವೈದ್ಯರನ್ನು ನೇಮಕ ಮಾಡಿಕೊಳ್ಳಬೇಕು. ಸಿಂದಗಿ ಮತ್ತು ತಾಳಿಕೋಟೆ ತಾಲೂಕಾಸ್ಪತ್ರೆಗಳಲ್ಲಿ ಆಕ್ಸಿಜನ್ ಘಟಕ ನಿರ್ಮಿಸಬೇಕು. ರೆಮಡಿಸಿವಿರ್ ಲಸಿಕೆಗೆ ಹೆಚ್ಚಿನ ಬೇಡಿಕೆಯಿದ್ದು, ಅದನ್ನು ಪೂರೈಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಪತ್ರ ಸಲ್ಲಿಸಲಾಯಿತು.
ಉಸ್ತುವಾರಿ ಸಚಿವರ ನೇತೃತ್ವದ ನಿಯೋಗದಲ್ಲಿ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, ವಿಧಾನ ಪರಿಷತ ಬಿಜೆಪಿ ಸದಸ್ಯ ಅರುಣ ಶಹಾಪುರ, ಲಿಂಬೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ ಉಪಸ್ಥಿತರಿದ್ದರು.