ವಿಜಯಪುರ- ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡುವ ಪ್ರಮಾಣ ಕಡಿಮೆಯಾಗಿದ್ದರೂ, ಪ್ರತಿದಿನ ಸರಾಸರಿ 300 ರಿಂದ 400ಕ್ಕೂ ಹೆಚ್ಚು ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ.
ಈ ಹಿನ್ನೆಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಹಗಲಿರುಳು ಶ್ರಮಿಸುತ್ತಿರುವ ವಿಜಯಪುರ ಜಿಲ್ಲಾಡಳಿತ ಸರಣಿ ಸಭೆಗಳು, ತಪಾಸಣೆಗಳ ಮೂಲಕ ಸಾಕಷ್ಟು ಶ್ರಮ ವಹಿಸುತ್ತಿದೆ. ರವಿವಾರ ವಾರದ ರಜೆ ಇದ್ದರೂ ಕೂಡ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಮತ್ತು ಎಸ್ಪಿ ಅನುಪಮ ಅಗ್ರವಾಲ ನಾನಾ ಕಡೆ ತಿರುಗಾಡಿ ಪರಿಸ್ಥಿತಿ ಅವಲೋಕನ ನಡೆಸಿದ್ದಾರೆ.
ರವಿವಾರ ಬಸವನ ಬಾಗೇವಾಡಿ ತಾಲೂಕಾಸ್ಪತ್ರೆಗೆ ಬೇಟಿ ನೀಡಿದ ಜಿಲ್ಲಾಧಿಕಾರಿಗಳು, ದೇವರ ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಮತ್ತು ಎಸ್ಪಿ ಅನುಪಮ ಅಗ್ರವಾಲ ಅವರ ಜೊತೆಗೂಡಿ ಪರಿಶೀಲನೆ ನಡೆಸಿದರು. ಸ್ವತಃ ಕೋವಿಡ್ ವಾರ್ಡ್ ಗೆ ತೆರಳಿದ ಅವರು, ಅಲ್ಲಿ ರೋಗಿಗಳಿಗೆ ನೀಡಲಾಗುತ್ತಿರುವ ಚಿಕಿತ್ಸೆಯ ಬಗ್ಗೆ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ತಾಲೂಕಾಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಪ್ರತಿದಿನ ದಾಖಲಾಗುತ್ತಿರುವ ಕೊರೊನಾ ಸೋಂಕಿತರು, ಅವರಿಗೆ ನೀಡಲಾಗುತ್ತಿರುವ ಚಿಕಿತ್ಸೆ ಮತ್ತು ಹೆಚ್ಚುವರಿ ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾಸ್ಪತ್ರೆ ಮತ್ತು ಇತರ ಆಸ್ಪತ್ರೆಗಳಿಗೆ ರೋಗಿಗಗಳನ್ನು ಕಳುಹಿಸುತ್ತಿರುವ ಕುರಿತು ಜಿಲ್ಲಾಧಿಕಾರಿ ಮತ್ತು ಶಾಸಕರಿಗೆ ಮಾಹಿತಿ ನೀಡಿದರು.
ವಿಜಯಪುರ ಜಿಲ್ಲೆಯಲ್ಲಿಯೂ ಇತರ ಜಿಲ್ಲೆಗಳಂತೆ ಆಕ್ಸಿಜನ್ ಕೊರತೆ, ಬೆಡ್ ಗಳ ಸಮಸ್ಸೆ, ರೆಮಡಿಸಿವಿರ್ ಎಂಜೆಕ್ಷನ್ ಕೊರೊತೆಯ ಬಗ್ಗೆಯೂ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಈ ದೂರುಗಳಿಗೆ ಕೂಡಲೇ ಸ್ಪಂದಿಸುತ್ತಿರುವ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಸರಕಾರದಿಂದ ಲಭ್ಯವಾಗುತ್ತಿರುವ ಔಷಧಿ ಮತ್ತು ಸಲಕರಣೆಗಳನ್ನು ತುರ್ತು ಅಗತ್ಯವಾಗಿರುವವರಿಗೆ ತಲುಪಿಸುವನಲ್ಲಿ ನಿರತರಾಗಿದ್ದಾರೆ. ಈ ಮೂಲಕ ಸಾಧ್ಯವಾದಷ್ಟು ತಮ್ಮ ಕಡೆಯಿಂದ ಲೋಪವಾಗದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ.
ರವಿವಾರ ವಾರದ ರಜೆಯ ದಿನವೂ ಕೂಡ ವಿಜಯಪುರ ಜಿಲ್ಲಾಧಿಕಾರಿ ಜಿಲ್ಲೆಯಲ್ಲಿ ಸಂಚರಿಸಿ ಕೊರೊನಾ ನಿಯಂತ್ರ ಪರಿಸ್ಥಿತಿ ಅವಲೋಕನ ಮಾಡಿದ್ದು ಶ್ಲಾಘನೀಯವಾಗಿದೆ.