ಶಾಸಕ ಎಂ. ಬಿ. ಪಾಟೀಲ ಸಲಹೆಗೆ ಸ್ಪಂದನೆ- ವಿಜಯಪುರ ಜಿಲ್ಲೆಯ ಗ್ರಾಮೀಣ, ಕೊಳಚೆ ಪ್ರದೇಶಗಳಲ್ಲಿ ಕೊರೊನಾ ಮನೆ ಮನೆ ಸಮೀಕ್ಷೆ ಆರಂಭ

ವಿಜಯಪುರ- ವಿಜಯಪುರ ಜಿಲ್ಲೆಯ ಗ್ರಾಮೀಣ, ಕೊಳಚೆ ಪ್ರದೇಶದಲ್ಲಿ ಮನೆ ಮನೆ ಕೊರೊನಾ ಸಮೀಕ್ಷೆ ಆರಂಭವಾಗಿದೆ.

ಈ ಕುರಿತು ಮಾಹಿತಿ ನೀಡಿರುವ ವಿಜಯಪುರ ಜಿ. ಪಂ. ಸಿಇಓ ಗೋವಿಂದ ರೆಡ್ಡಿ ನಿನ್ನೆ ದಿನ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಹಾಗೂ ತಾವು ವಿಡಿಯೋ ಕಾನ್ಫರೆನ್ಸ್ ಮಾಡಿದ್ದಾಗಿ ತಿಳಿಸಿದ್ದಾರೆ. ಈ ಸಂವಾದದಲ್ಲಿ ಸೂಚಿಸಿದಂತೆ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಮತ್ತು ಕೊಳಚೆ ಪ್ರದೇಶಗಲಲ್ಲಿ ಮನೆ ಮನೆಗೆ ತೆರಳಿ ಕೊರೊನಾ ಸೋಂಕಿತರ ಸಮೀಕ್ಷೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ವಿಜಯಪುರ ಜಿ. ಪಂ. ಸಿಇಓ ಗೋವಿಂದರೆಡ್ಡಿ

ಈ ಸಮೀಕ್ಷೆಯಲ್ಲಿ ರೋಗ ಲಕ್ಷಣ ಹೊಂದಿರುವ ಆದರೆ, ಹೋಂ ಐಸೋಲೇಶನ್ ಸಾಧ್ಯವಿಲ್ಲದ ಜನರನ್ನು ಆಯಾ ಗ್ರಾಮಗಳ ಸಮೀಪ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸ್ಥಾಪಿಸಲಾಗಿರುವ ಕೋವಿಡ್ ಕೇರ್ ಸೆಂಟರ್ ಗಳಿಗೆ ಸ್ಥಳಾಂತರಿಸಲಾಗುತ್ತಿದೆ.

ವಿಜಯಪುರ ಜಿಲ್ಲೆಯಲ್ಲಿ 62 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, 9 ಸಮುದಾಯ ಆರೋಗ್ಯ ಕೇಂದ್ರಗಳಿವೆ. ಈ ಕೇಂದ್ರಗಳಲ್ಲಿ ಕೊರೊನಾ ಟೆಸ್ಟ್ ಗಾಗಿ ಸ್ವ್ಯಾಬ್ ಸಂಗ್ರಹ ಮಾಡಲಾಗುತ್ತದೆ. ಅಲ್ಲದೇ, ಅಲ್ಲಿರುವ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡುತ್ತಾರೆ. ಅಲ್ಲದೇ, ಅವರಿಗೆ ಜಿಲ್ಲಾಧಿಕಾರಿಗಳು ತಹಸೀಲ್ದಾರ ಮೂಲಕ ಆಹಾರ, ಮಾಸ್ಕ್, ಸ್ಯಾನಿಟೈಜರ್ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ ಎಂದು ಗೋವಿಂದ ರೆಡ್ಡಿ ತಿಳಿಸಿದ್ದಾರೆ.

ಈ ಸಮೀಕ್ಷೆಯಲ್ಲಿ ಮೊದಲಿಗೆ ಕೊರೊನಾ ಸೋಂಕು ಇರುವ ಜನರನ್ನು ಗುರುತಿಸಲಾಗುತ್ತಿದೆ. ನಂತರ ಅವರನ್ನು ಕೋವಿಡ್ ಕೇರ್ ಸೆಂಟರ್ ಗೆ ಸ್ಥಳಾಂತರಿಸುವ ಮೂಲಕ ಬೇರೆಯವರಿಗೆ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ನಂತರ ಅವರ ಸ್ವ್ಯಾಬ್ ಸಂಗ್ರಹಿಸಿ ಪರೀಕ್ಷೆ ನಡೆಸಲಾಗುತ್ತದೆ. ಪ್ರಯೋಗಾಲಯದಿಂದ ಪರೀಕ್ಷಾ ವರದಿ ಪಾಸಿಟಿವ್ ಬಂದರೆ ಆದ್ಯತಾನುಸಾರ ಚಿಕಿತ್ಸೆ ನೀಡಲಾಗುವುದು. ಅಲ್ಲದೇ, ಈ ಕುರಿತು ಮಾಹಿತಿಯನ್ನು ಮಾಧ್ಯಮಗಳಿಗೆ ಅಪಡೇಟ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ವಿಜಯಪುರ ಜಿ. ಪ. ಸಿಇಓ ಗೋವಿಂದ ರೆಡ್ಡಿ ತಿಳಿಸಿದ್ದಾರೆ.

ಶಾಸಕ ಎಂ. ಬಿ. ಪಾಟೀಲ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ ವಿಜಯಪುರ ಜಿಲ್ಲಾಡಳಿತ

ವಿಜಯಪುರ ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ ಮತ್ತು ವಿಜಯಪುರ ಜಿಲ್ಲೆಯ ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಶನಿವಾರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಗ್ರಾಮೀಣ ಭಾಗದಲ್ಲಿ ಸೋಕು ಹೆಚ್ಚುತ್ತಿರುವ ಬಗ್ಗೆ ಮತ್ತು ಅದನ್ನು ತಡೆಯದಿದ್ದರೆ ಕೊರೊನಾ ಮಹಾಸ್ಪೋಟವಾಗಲಿದೆ ಎಂದು ಅಧಿಕಾರಿಗಳಿಗೆ ಮತ್ತು ಸರಕಾರಕ್ಕೆ ಎಚ್ಚರಿಕೆ ನೀಡಿದ್ದರು. ಗ್ರಾಮೀಣ ಭಾಗದಲ್ಲಿ ಓಣಿಗಳು ಮತ್ತು ಮನೆಗಳು ಒಂದಕ್ಕೊಂದು ಅತೀ ಹೊಂದಿಕೊಂಡಿರುವುದರಿಂದ ಮತ್ತು ಜನದಟ್ಟಣೆ ಒಂದೇ ಕಡೆಗೆ ಇರುವುದರಿಂದ ಕೂಡಲೇ ಮನೆ ಮನೆ ಸಮೀಕ್ಷೆ ನಡೆಸಿ ಸೋಂಕಿನ ಲಕ್ಷಣ ಹೊಂದಿರುವವರನ್ನು ಪ್ರತ್ಯೇಕಿಸಿ ಕೊರೊನಾ ಪರೀಕ್ಷೆಗೆ ಒಳಪಡಿಸಬೇಕು ಎಂದು ಸಲಹೆ ನೀಡಿದ್ದರು.

ಶನಿವಾರ ವಿಜಯಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಸಕ ಎಂ. ಬಿ. ಪಾಟೀಲ ಅಧಿಕಾರಿಗಳೊಂದಿಗೆ ನಡೆಸಿದ ಸಭೆ

ಈ ಸಂದರ್ಭದಲ್ಲಿ ಶಾಸಕರ ಸಲಹೆಯನ್ನು ಪೂರಕವಾಗಿ ಸ್ವೀಕರಿಸಿದ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಸೋಮವಾರದಿಂದಲೇ ಮನೆ ಮನೆ ಸಮೀಕ್ಷೆ ಆರಂಭಿಸುವುದಾಗಿ ತಿಳಿಸಿದ್ದರು. ಅದರಂತೆ ಈಗ ವಿಜಯಪುರ ಜಿಲ್ಲೆಯ ಗ್ರಾಮೀಣ ಭಾಗ ಮತ್ತು ಕೊಳಚೆ ಪ್ರದೇಶಗಳಲ್ಲಿ ಕೊರೊನಾ ಮನೆ ಮನೆ ಸಮೀಕ್ಷೆಯನ್ನು ಜಿಲ್ಲಾಧಿಕಾರಿ ಆರಂಭಿಸಿದ್ದಾರೆ.

ಎಂ. ಬಿ. ಪಾಟೀಲ ಅವರ ಸಲಹೆ ಮತ್ತು ವಿಜಯಪುರ ಜಿಲ್ಲಾಡಳಿತ ಈಗ ನಡೆಸುತ್ತಿರುವ ಕೊರೊನಾ ಮನೆ ಮನೆ ಸಮೀಕ್ಷೆಯಿಂದಾಗಿ ವಿಜಯಪುರ ಜಿಲ್ಲೆ ರಾಜ್ಯದಲ್ಲಿಯೇ ಈಗ ಮಾದರಿ ಕಾರ್ಯಕ್ಕೆ ಮುಂದಾಗಿದೆ. ಅಲ್ಲದೇ, ಇದು ಸರಿಯಾಗಿ ಮುಂದುವರೆದರೆ ವಿಜಯಪುರ ಜಿಲ್ಲೆ ಕೊರೊನಾ ಮುಕ್ತವಾಗುವುದರಲ್ಲಿ ಸಂಶಯವಿಲ್ಲ.

Leave a Reply

ಹೊಸ ಪೋಸ್ಟ್‌