ವಿಜಯಪುರ: ಗುಮ್ಮಟ ನಗರಿ ವಿಜಯಪುರ ಜಿಲ್ಲೆಗೂ ಬ್ಲ್ಯಾಕ್ ಫಂಗಸ್ ಕಾಲಿಟ್ಟಿದೆ.
ವಿಜಯಪುರದಲ್ಲಿ ಈ ಕುರಿತು ಮಾಹಿತಿ ನೀಡಿದ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ, ಈಗಾಗಲೇ ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ನ 26 ಪ್ರಕರಣಗಳು ಪತ್ತೆಯಾಗಿವೆ. ಸಂಜೆಯ ವೇಳೆಗೆ ಎಲ್ಲೆಲ್ಲಿ ಪ್ರಕರಣಗಳು ದಾಖಲಾಗಿವೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದೆ ಎಂದು ತಿಳಿಸಿದ್ದಾರೆ.
ಬ್ಲ್ಯಾಕ್ ಫಂಗಸ್ ರೋಗಿಗಳಿಗಾಗಿ ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಹೆಚ್ಚು ಪ್ರಕರಣಗಳಿರುವ ಸಾಧ್ಯತೆ ಇದೆ ಎಂದು ಅಂದಾಜಿಸಿದ್ದಾರೆ.
ವಿಜಯಪುರ ನಗರದ ಬಿ ಎಲ್ ಡಿ ಇ ಆಸ್ಪತ್ರೆಗಳಲ್ಲಿ 15, ಆಯುಷ್ ಆಸ್ಪತ್ರೆಯಲ್ಲಿ 5, ಚೌಧರಿ ಮತ್ತು ಯಶೋಧಾ ಆಸ್ಪತ್ರೆಯಲ್ಲಿ ತಲಾ 2 ಮತ್ತು ಅಲ್-ಅಮೀನ್ ಹಾಗೂ ಅಶ್ವಿನಿ ಆಸ್ಪತ್ರೆಗಳಲ್ಲಿ ತಲಾ ಒಂದು ಸೇರಿ ಒಟ್ಟು 26 ಬ್ಲ್ಯಾಕ್ ಫಂಗಸ್ ಕೇಸ್ ಗಳು ದಾಖಲಾಗಿವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿ ಇನ್ನೂ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಅಂಥ ಪ್ರಕರಣ ಕಂಡು ಬಂದರೆ ಅಲ್ಲಿಯೂ ಪ್ರತ್ಯೇಕ ವಾರ್ಡ್ ಮಾಡುವ ಯೋಚನೆ ಇದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ತಿಳಿಸಿದ್ದಾರೆ.
ಈವರೆಗೆ ರಾಜ್ಯಾದ್ಯಂತ ಬ್ಲ್ಕಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗುತ್ತಿರುವ ಬಗ್ಗೆ ಕೇಳಿದ್ದ ವಿಜಯಪುರ ಜಿಲ್ಲೆಯ ಜನತೆಗೆ ವಿಜಯಪುರ ಜಿಲ್ಲೆಯಲ್ಲಿಯೂ ಬ್ಲ್ಯಾಕ್ ಫಂಗಸ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಆಂತಕ ಮೂಡಿಸಿದೆ.