ವಿಜಯಪುರ- ಈಗ ಎಲ್ಲಿ ನೋಡಿದರೂ ಕೊರೊನಾ ಸೋಂಕಿತರಿಗೆ ಔಷಧಿಯ ಕೊರತೆಯ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಅದರಲ್ಲಿಯೂ ರೆಮಿಡಿಸಿವಿರ್ ಔಷಧಿಯ ಬಗ್ಗೆಯಂತೂ ಹೇಳುವಂತೆಯೇ ಇಲ್ಲ. ಪ್ರತಿನಿತ್ಯ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಹಲವಾರು ಜನರನ್ನು ಪೊಲೀಸರು ಬಂಧಿಸುತ್ತಲೇ ಇದ್ದಾರೆ.
ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಸರಕಾರ ಮತ್ತು ಔಷಧಿ ಕಂಪನಿಗಳು ರೆಮಿಡಿಸಿವಿರ್ ಎಂಜೆಕ್ಷನ್ ಸರಬರಾಜು ಮಾಡುತ್ತಿದ್ದರೂ, ಅದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ. ಇನ್ನು ಈ ವಿಚಾರದಲ್ಲಿ ರೋಗಿಗಳು ಮತ್ತು ಅವರ ಸಂಬಂಧಿಕರಂತೂ ವೈದ್ಯರಿಂತ ತಾವೇ ಜಾಣರು ಎಂಬಂತೆ ಕೊರೊನಾ ಬಂದಿದೆ ಎಂದರೆ ಸಾಕು ರೆಮಿಡಿಸಿವಿರ್ ಎಂಜೆಕ್ಷನ್ ಹಾಕಿಸಿಕೊಂಡರೆ ಸಾಕು ಹುಷಾರಾಗಿ ಬಿಡಬಹುದು ಎಂದು ಬಹುತೇಕ ನಂಬಿದ್ದಾರೆ. ಆದರೆ, ಇರುವ ವಾಸ್ತವಾಂಶವೇ ಬೇರೆಯಾಗಿದೆ.
ಇನ್ನು ಈ ರೆಮಿಡಿಸಿವಿರ್ ಎಂಜೆಕ್ಷನ್ ಸರಬರಾಜು ಮತ್ತು ಪೂರೈಕೆ ವಿಜಯಪುರ ಜಿಲ್ಲಾಡಳಿತಕ್ಕೂ ಸಾಕಷ್ಟು ತಲೆನೋವು ತಂದಿಟ್ಟಿದೆ. ಸಾರ್ವಜನಿಕರು ಕರೆ ಮಾಡಿ ಜಿಲ್ಲಾಡಳಿತದಿಂದ ನೇರವಾಗಿ ರೆಮಿಡಿಸಿವಿರ್ ಬಯಸುತ್ತಿರುವುದೂ ಕೂಡ ಕೊರೊನಾ ರೋಗಿಗಳ ಸಂಕಷ್ಟ ಪರಿಹರಿಸಲು ಹಗಲಿರುಳು ಶ್ರಮಿಸುತ್ತಿರುವ ವಿಜಯಪುರ ಜಿಲ್ಲಾಡಳಿತಕ್ಕೂ ಸವಾಲಾಗಿ ಪರಿಣಮಿಸಿದೆ.
ಕೊರೊನಾ ಸೋಂಕಿತರಲ್ಲಿ ಶೇ. 95 ರಷ್ಟು ಜನ ಮನೆಯಲ್ಲಿಯೇ ಹುಷಾರಾಗಬಹುದಾಗಿದೆ. ಆದರೆ ಕೊರೊನಾ ಪಾಸಿಟಿವ್ ಬಂದ ತಕ್ಷ HRCT Scan ಮಾಡಿಸುವ ಮೂಲಕ ಶ್ವಾಸಕೋಷಗಳಿಗೆ ಆಗಿರುವ ಹಾನಿಯ ಪ್ರಮಾಣವನ್ನು ತಿಳಿದುಕೊಳ್ಳಲು ಚಾತಕ ಪಕ್ಷಿಯಂತೆ ಕಾಯುತ್ತಿರುತ್ತಾರೆ. ಈ ಪರೀಕ್ಷೆಯಲ್ಲಿ ಏಳೆಂಟು ಸ್ಕೋರ್ ತೋರಿಸಿದರೂ ಸಾಕು. ರೋಗಿಗಳು ವೈದ್ಯರಿಗೆ ರೆಮಿಡಿಸಿವಿರ್ ಎಂಜೆಕ್ಷನ್ ನೀಡಿ ಎಂದು ದುಂಬಾಲು ಬೀಳುತ್ತಾರೆ. ಆದರೆ, ರೆಮಿಡಿಸಿವಿರ್ ನೀಡುವ ವಿಚಾರದಲ್ಲಿ ತಜ್ಞ ವೈದ್ಯರು ಹೇಳುವುದೇ ಬೇರೆ.
ಆದರೆ, ಈ ರೆಮಿಡಿಸಿವಿರ್ ಎಂಜೆಕ್ಷನ್ ಯಾವ ರೋಗಿಗೆ ಬೇಕು? ಯಾವ ಸಂದರ್ಭದಲ್ಲಿ ಬೇಕು ಎಂಬುದರ ಕುರಿತು ಬಸವ ನಾಡು ವಿಜಯಪುರದ ಹೆಸರಾಂತ ಆಯುಷ್ ಆಸ್ಪತ್ರೆಯ ಖ್ಯಾತ ವೈದ್ಯ ಡಾ. ನಿತೀನ ಅಗರವಾಲ ಅವರ ಜೊತೆ ಮಾತನಾಡಿ ಮಾಹಿತಿ ಸಂಗ್ರಹಿಸಿದೆ.
ವಿಜಯಪುರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆ ಆಯುಷ್ ದವಾಖಾನೆಯ ಮುಖ್ಯಸ್ಥ ಡಾ. ನಿತೀನ ಅಗರವಾಲ ಪ್ರಕಾರ, ಕೊರೊನಾ ಕಾಣಿಸಿಕೊಂಡ ರೋಗಿಗಳಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡರೆ, ಆಕ್ಸಿಜನ್ ಸಾಮಾನ್ಯಕ್ಕಿಂತ ಕಡಿಮೆಯಾದರೆ ವೈರೇನಿಯಾ ಸಂದರ್ಭದಲ್ಲಿ ಇದನ್ನು ಹಾಕಲಾಗುತ್ತದೆ. ಐಸಿಎಂಆರ್ ಮಾರ್ಗಸೂಚಿಯಂತೆ ಆರ್ ಟಿ ಪಿ ಸಿ ಆರ್ ವರದಿ ಪಾಸಿಟಿವ್ ಇದ್ದು, ಸ್ಯಾಚೂರೇಶನ್ 92ಕ್ಕಿಂತ ಕಡಿಮೆ ಇದ್ದಾಗ, HRCT Scrore 12ಕ್ಕಿಂತ ಹೆಚ್ಚಾಗಿದ್ದಾಗ ಮತ್ತು ಉಸಿರಾಟದ ಸಮಸ್ಯೆ ಇದ್ದಾಗ ರೆಮಿಡಿಸಿವಿರ್ ಬಳಸಲು ಅನುಮತಿ ನೀಡಲಾಗಿದೆ. ಕೊರೊನಾ ಸೋಂಕು ಕಾಣಿಸಿಕೊಂಡ 7 ರಿಂದ 14ನೇ ದಿನಗಳವರೆಗೆ ಅವಧಿಯಲ್ಲಿ ರೆಮಿಡಿಸಿವಿರ್ ಉತ್ತಮವಾಗಿ ಕೆಲಸ ಮಾಡುತ್ತದೆ. ಆಕ್ಸಿಜನ್ ಪ್ರಮಾಣ ಕಡಿಮೆ ಇರುವ ರೋಗಿಗಳಿಗೂ ಉತ್ತಮವಾಗಿ ಕೆಲಸ ಮಾಡುತ್ತದೆ.
ಸ್ಯಾಚೂರೇಶನ್ ಪ್ರಮಾಣ ಕಡಿಮೆ ಇರುವ ಶೇ. 10ರಷ್ಟು ರೋಗಿಗಳಿಗೆ ಮಾತ್ರ ರೆಮಿಡಿಸಿವಿರ್ ಎಂಜೆಕ್ಷನ್ ಅವಶ್ಯವಾಗಿರುತ್ತದೆ. ಇಂಥ ರೋಗಿಗಳಿಗೆ ಗರಿಷ್ಠ 6 ರೆಮಿಡಿಸಿವಿರ್ ಎಂಜೆಕ್ಷನ್ ಕೊಡಬಹುದು. ಮೊದಲ ದಿನ 2 ಡೋಸ್ ಮತ್ತು ಉಳಿದ ನಾಲ್ಕು ದಿನ ದಿನಕ್ಕೊಂದರಂತೆ ಡೋಸ್ ನೀಡಬೇಕು. ಶೇ. 50ಕ್ಕಿಂತಲೂ ಹೆಚ್ಚು ರೋಗಿಗಳು HRCT Score ಶೇ. 10ಕ್ಕಿಂತಲೂ ಹೆಚ್ಚಾಗಿದ್ದರೂ ರೆಮಿಡಿಸಿವಿರ್ ಎಂಜೆಕ್ಷನ್ ಬಳಸದೇ ಗುಣಮುಖರಾಗಿದ್ದಾರೆ ಎಂದು ಡಾ. ನಿತೀನ್ ಅಗರವಾಲ ಬಸವ ನಾಡಿಗೆ ತಿಳಿಸಿದ್ದಾರೆ.
ಇನ್ನು ಪ್ರತಿನಿತ್ಯ ಆಯುಷ್ ಆಸ್ಪತ್ರೆಗೆ ಸರಿ ಸುಮಾರು 80 ರಿಂದ 100 ರೋಗಿಗಳು ತಪಾಸಣೆಗೆ ಬರುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಇದೇ ಪರಿಸ್ಥಿತಿ ಇದೆ. ಆದರೆ, ಡಾ. ನಿತೀನ ಅಗರವಾಲ ಮಾತ್ರ ತಮ್ಮ ಆಯಾಸ ಮರೆತು, ತಮ್ಮ ಸಹೋದ್ಯೋಗಿ ವೈದ್ಯ ಬಸವರಾಜ ಪೂಜಾರಿ ಜೊತೆಗೂಡಿ ಈವರೆಗೂ ರೋಗಿಗಳನ್ನು ಚೆನ್ನಾಗಿ ನಿರ್ವಹಣೆ ಮಾಡುತ್ತ ಬಂದಿದ್ದಾರೆ. ಅಲ್ಲದೇ, ಪ್ರತಿನಿತ್ಯ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಸುಮಾರು 80ಕ್ಕೂ ಹೆಚ್ಚು ರೋಗಿಗಳಿಗೆ ನೀಡಲಾಗುತ್ತಿರುವ ಚಿಕಿತ್ಸೆ ಮತ್ತು ನೀಡಬೇಕಿರುವ ಔಷಧಿ ಹಾಗೂ ತಮ್ಮ ಔಷಧ ಅಂಗಡಿಯಲ್ಲಿ ಯಾವೆಲ್ಲ ಔಷಧಿಗಳಿವೆ ಮತ್ತು ಯಾವುದು ಇನ್ನೂ ಬಂದಿಲ್ಲ ಎಂಬ ಎಲ್ಲ ಮಾಹಿತಿ ಈ ವೈದ್ಯರ ತಲೆಯಲ್ಲಿಯೇ ಡಾಟಾ ಸಂಗ್ರಹವಾಗಿರುವುದು ಒಂದು ಅದ್ಭುತವೇ ಸರಿ.
ಇನ್ನು ರೆಮಿಡಿಸಿವಿರ್ ಎಂಜೆಕ್ಷನ್ ತೆಗೆದುಕೊಂಡರೆ ಮಾತ್ರ ತಾವು ಗುಣಮುಖರಾಗಬಹುದು ಎಂದು ಹುಚ್ಚು ನಂಬಿಕೆಯಲ್ಲಿರುವ ರೋಗಿಗಳಿಗೆ ಬಸವ ನಾಡು ಒಂದೆರಡು ಉದಾಹರಣೆ ನೀಡಲು ಬಯಸುತ್ತದೆ. ದುಂಡಪ್ಪ(ಅಪ್ಪಾಸಿ) ಎಂಬ ರೋಗಿಗೆ HRCT Scrore 14 ಇತ್ತು ಅವರ ಪತ್ನಿಗೆ HRCT Score 24 ಇತ್ತು. ವಿಜಯಪುರದ ಧನ್ವಂತರಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಡಾ. ಸುನೀಲ ಕಲ್ಲೂರ ಅವರ ಬಳಿ ಚಿಕಿತ್ಸೆ ಪಡೆದಿದ್ದರು. ಆದರೆ, ಈ ದಂಪತಿ ಒಂದೂ ಡೋಸ್ ರೆಮಿಡಿಸಿವಿರ್ ಎಂಜೆಕ್ಷನ್ ಬಳಸದೇ ವೈದ್ಯರು ನೀಡಿದ ಇತರ ಔಷಧಿ ಮತ್ತು ಸಲಾಯಿನ್ ಮೂಲಕ ಚಿಕಿತ್ಸೆ ಪಡೆದು ಕೇವಲ ಆರೇಳು ದಿನಗಳಲ್ಲಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಶ್ಚಾರ್ಜ್ ಆಗಿರುವುದು ಗಮನಾರ್ಹವಾಗಿದೆ.
ರೆಮಿಡಿಸಿವಿರ್ ಎಂಜೆಕ್ಷನ್ ಆಸ್ಪತ್ರೆಗೆ ದಾಖಲಾದ ಪ್ರತಿಯೊಬ್ಬ ಕೊರೊನಾ ರೋಗಿಗಳಿಗೆ ಅಗತ್ಯವಿಲ್ಲ. ಈ ಬಗ್ಗೆ ಜನರಲ್ಲಿಯೂ ತಪ್ಪು ಕಲ್ಪನೆ ಇದೆ. ಇದರ ಬಳಕೆಯನ್ನು ರೋಗಿಗಳು ಮತ್ತು ಸಂಬಂಧಿಕರು ವೈದ್ಯರ ವಿವೇಚನೆಗೆ ಬಿಡುವುದು ಒಳಿತು. ಇದರಿಂದ ರೆಮಿಡಿಸಿವಿರ್ ಕೊರತೆ ಎದುರಾಗಿರುವ ಈ ಸಂದರ್ಭದಲ್ಲಿ ತುರ್ತಾಗಿ ಅಗತ್ಯವಿದ್ದ ರೋಗಿಗಳಿಗೆ ಈ ಔಷಧಿಯ ಕೊರತೆಯನ್ನು ನೀಗಿಸಬಹುದಾಗಿದೆ.
One Response
Thank you for Informetion