ಬ್ಲ್ಯಾಕ್‌ ಫಂಗಸ್‌ಗೆ ರಾಜ್ಯದಲ್ಲಿ ಆರು ಕಡೆ ಉಚಿತ ಚಿಕಿತ್ಸೆ- ಒಂದು ಕೋಟಿ ಕೊಲ್ಚಿಸಿನ್ ಮಾತ್ರೆ ಪೂರೈಸಲು ಕೇಂದ್ರ ಒಪ್ಪಿಗೆ- ಆಶ್ವತ್ಥನಾರಾಯಣ

ಬೆಂಗಳೂರು: ಬ್ಲ್ಯಾಕ್‌ ಫಂಗಸ್‌ಗೆ ರಾಜ್ಯದ ಆರು ಕಡೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ರಾಜ್ಯ ಕೋವಿಡ್‌ ಕಾರ್ಯಪಡೆ ಅಧ್ಯಕ್ಷರೂ ಆಗಿರುವ ಡಿಸಿಎಂ ಡಾ. ಸಿ. ಎನ್. ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಬಂಟರ ಸಂಘವು ಹೋಮ್‌ ಐಸೋಲೇಷನ್‌ ಆಗಿರುವ ಕೊರೊನಾ ಸೋಂಕಿತರಿಗಾಗಿ ವ್ಯವಸ್ಥೆ ಮಾಡಿರುವ 20 ಆಮ್ಲಜನಕ ಸಾಂದ್ರಕಗಳ ವ್ಯವಸ್ಥೆಗೆ ಚಾಲನೆ ಕೊಟ್ಟ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬ್ಲ್ಯಾಕ್‌ ಫಂಗಸ್‌ ಕಾಯಿಲೆಗೆ ಬಳಸಲಾಗುವ ಔಷಧಿಗೆ ಕೊರತೆ ಇಲ್ಲ. ಈಗಾಗಲೇ ಕೇಂದ್ರದಿಂದ 1000 ವೈಲ್ಸ್‌ ಬಂದಿದೆ. ಈ ಔಷಧಿಯ ಕೊರತೆ ನೀಗಿಸಲು ಸರಕಾರ ಸರ್ವ ಪ್ರಯತ್ನವನ್ನೂ ಮಾಡುತ್ತಿದೆ ಎಂದು ತಿಳಿಸಿದರು.

ಬೆಂಗಳೂರಿನ ಬೌರಿಂಗ್‌ ಆಸ್ಪತ್ರೆ ಸೇರಿದಂತೆ ರಾಜ್ಯದ ಆರು ಕಡೆಗಳಲ್ಲಿ ಬ್ಲ್ಯಾಕ್‌ ಫಂಗಸ್‌ಗೆ ಉಚಿತ ಚಿಕಿತ್ಸೆ ಕೊಡಲಾಗುತ್ತಿದೆ. ಎಲ್ಲಿಯೂ ಔಷಧಿ ಕೊರತೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ. ಕೇಂದ್ರದಿಂದ ಇನ್ನೂ ಹೆಚ್ಚಿನ ಔಷಧಿ ಪಡೆಯಲು ಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದರು.

ಕೇಂದ್ರದಿಂದ ಒಂದು ಕೋಟಿ ಕೊಲ್ಚಿಸಿನ್ ಮಾತ್ರೆ ಪೂರೈಕೆ

ಇದೇ ವೇಳೆ, ಕೊರೊನಾ ಸೋಂಕಿತರಿಗೆ ಅತ್ಯಗತ್ಯವಾಗಿರುವ ಒಂದು ಕೋಟಿ ಕೊಲ್ಚಿಸಿನ್ ಟ್ಯಾಬ್ಲೆಟ್‌ಗಳನ್ನು ಕೂಡಲೇ ಪೂರೈಸಬೇಕು ಎಂದು ರಾಜ್ಯ ಕೋವಿಡ್‌ ಕಾರ್ಯಪಡೆ ಅಧ್ಯಕ್ಷರಾದ  ಡಿಸಿಎಂ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಮಾಡಿದ್ದ ಮನವಿಗೆ ಕೇಂದ್ರ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ.

ರಾಜ್ಯದಲ್ಲಿ 5.17 ಲಕ್ಷದಷ್ಟು ಕೊರೊನಾ ಸೋಂಕಿತರಿದ್ದು, ಒಂದು ಕೋಟಿಯಷ್ಟು ಕೊಲ್ಚಿಸಿನ್ ಟ್ಯಾಬ್ಲೆಟ್‌ಗಳನ್ನು ರಾಜ್ಯಕ್ಕೆ ಪೂರೈಕೆ ಮಾಡಬೇಕು ಎಂದು ಡಿಸಿಎಂ, ಕೇಂದ್ರ ರಾಸಾಯನಿಕ ಖಾತೆ ಸಚಿವ ಡಿ. ವಿ. ಸದಾನಂದಗೌಡ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು.

ಈ ಬಗ್ಗೆ ಕೂಡಲೇ ಕ್ರಮ ಕೈಗೊಂಡಿರುವ ಕೇಂದ್ರ ಸಚಿವರು, ಕೊಲ್ಚಿಸಿನ್ ಟ್ಯಾಬ್ಲೆಟ್‌ ತಯಾರಿಸುವ ಜೈಡಸ್‌ ಕ್ಯಾಡಿಲ್ಲಾ ಕಂಪನಿಯ ಅಧ್ಯಕ್ಷ ಪಂಕಜ್‌ ಪಟೇಲ್‌ ಅವರ ಜತೆ ಮಾತುಕತೆ ನಡೆಸಿದ್ದಾರೆ. ರಾಜ್ಯದ ಬೇಡಿಕೆಯಷ್ಟು ಪ್ರಮಾಣದ ಕೊಲ್ಚಿಸಿನ್ ಟ್ಯಾಬ್ಲೆಟ್‌ಗಳನ್ನು ಪೂರೈಸಲು ಕಂಪನಿ ಒಪ್ಪಿಕೊಂಡಿದೆ. ರಾಜ್ಯದ ಆರೋಗ್ಯ ಇಲಾಖೆ ಅಧಿಕಾರಿಗಳು ಖರೀದಿ ಆದೇಶ ಕೊಟ್ಟ ಕೂಡಲೇ ಟ್ಯಾಬ್ಲೆಟ್‌ಗಳು ರಾಜ್ಯಕ್ಕೆ ಪೂರೈಕೆಯಾಗುತ್ತವೆ ಎಂದು ಕೇಂದ್ರ ಸಚಿವರು ತಮ್ಮ ಪತ್ರಕ್ಕೆ ಉತ್ತರ ಬರೆದು ತಿಳಿಸಿದ್ದಾರೆ ಎಂದು ಡಾ. ಅಶ್ವತ್ಥನಾರಾಯಣ ತಿಳಿಸಿದರು.

ಬಂಟರ ಸಂಘದ ಅಧ್ಯಕ್ಷ ಉಪೇಂದ್ರ ಶೆಟ್ಟಿ, ಕಾರ್ಯದರ್ಶಿ ಮಧುಕರ ಶೆಟ್ಟಿ, ಉಮೇಶ ಶೆಟ್ಟಿ, ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಬೇಲೂರು, ಸಂಘದ ವೈದ್ಯಕೀಯ ವಿಭಾಗದ ಅಧ್ಯಕ್ಷ ಡಾ. ನಿಶಾಕಾಂತ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌