ವಿಜಯಪುರ: ಮನೆಯಲ್ಲಿ ಸುಮ್ಮನೆ ಕೂಡುವ ಬದಲು ಕ್ರಿಯಾಶೀಲರಾಗಿ ಕೆಲಸ ಮಾಡಿ. ಇಲ್ಲವೇ, ಕುರ್ಚಿ ಖಾಲಿ ಮಾಡಿ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಿಎಂ ವಿರುದ್ಧ ಮತ್ತೆ ಗುಡುಗಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ಸಿಎಂ ಬಿ. ಎಸ್. ಯಡಿಯೂರಪ್ಪ ವಿರುದ್ಧ ಮತ್ತೆ ಹರಿಹಾಯ್ದಿದ್ದಾರೆ.
ಸಿಎಂ ಕೇವಲ ಜಿಂದಾಲ್ ಗೆ ಜಮೀನು ನೀಡಲು ಕುರ್ಚಿಯ ಮೇಲೆ ಕುಳಿತಕೊಳ್ಳಬೇಡಿ. ಕೆಲಸವಾಗದಿದ್ದರೆ ನಿವೃತ್ತಿಯಾಗಿ. ಮೂರನೇ ಅಲೆಯ ಬಗ್ಗೆ ಏನೂ ತಯಾರಿ ಮಾಡಿಲ್ಲ. ಎರಡನೇ ಅಲೆಯೇ ಈಗ ಹೈರಾಣಾಗಿಸಿದೆ ಎಂದು ಅವರು ಪ್ರಶ್ನಿಸಿದರು.
ವಿಜಯಪುರ ನಗರಕ್ಕೆ ಇನ್ನೂ ಹೆಚ್ಚಿಗೆ ಲಸಿಕೆಗಳು ಬೇಕಿದ್ದರೂ ಸರಿಯಾಗಿ ಸರಬರಾಜು ಆಗುತ್ತಿಲ್ಲ. ಸಿಎಂ ಸರಿಯಾಗಿ ನೋಡಬೇಕು. ತಾರತಮ್ಯ ಮಾಡಬಾರದು. ಈ ಬಾರಿ ಅದನ್ನೇ ಮುಂದುವರೆಸಬಾರದು ತಾವು ಹೋಗುವಾಗ ಒಂದು ಒಳ್ಳೆಯ ಕೆಲಸ ಮಾಡಿ ಹೋಗಲಿ. ಬರೀ ಲೂಟಿ ಮಾಡುವುದಷ್ಟೇ ಅಲ್ಲ, ಒಳ್ಳೆಯ. ಕೆಲಸ ಮಾಡಲಿ ಎಂದು ಶಾಸಕರು ತಿಳಿಸಿದರು.
ಸಿಎಂ ಇಂದು ಮಾಡಿರುವ ನಾನಾ ಘೋಷಣೆಗಳ ಕುರಿತು ಪ್ರತಿಕ್ರಿಯೆ ನೀಡಿದ ಯತ್ನಾಳ, ಎಲ್ಲ ಅರ್ಚಕರಿಗೂ ಪರಿಹಾರ ನೀಡಲಿ. ಬಿಪಿಎಲ್ ಕಾರ್ಡುದಾರರು ಮನೆಯಲ್ಲಿ ಕುಳಿತುಕೊಂಡಿದ್ದಾರೆ. ಹೀಗೆ ತಡ ಮಾಡಬಾರದಿತ್ತು. ಲಾಕಡೌನ್ ಘೋಷಣೆ ಮಾಡುವುದಕ್ಕಿಂತಲೂ ಮುಂಚೆಯೇ ಘೋಷಣೆ ಮಾಡಿ ಆಹಾರ ಧಾನ್ಯ ವಿತರಿಸಬೇಕಿತ್ತು. ಇವರು ಕೊರೊನಾ ಹೆಚ್ಚಾದರೆ ತಮ್ಮ ಕುರ್ಚಿ ಉಳಿಯುತ್ತೆ ಎಂಬ ಕೆಟ್ಟ ಬುದ್ದಿಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಮೊನ್ನೆ ಆರೋಗ್ಯ ಸಚಿವರಿಗೆ ಹೆಚ್ಚಿನ ಲಸಿಕೆ ನೀಡುವಂತೆ ಆಗ್ರಹಿಸಿದ್ದೇನೆ. ವಿಧಾನ ಸಭೆ ಕ್ಷೇತ್ರವಾರು ಹಂಚಿಕೆಯಾಗಬಾರದು. ಯಾವ ಕ್ಷೇತ್ರದಲ್ಲಿ ಹೆಚ್ಚಿನ ಲಸೀಕೆ ಹಾಕಲಾಗಿದೆಯೋ ಆ ಕ್ಷೇತ್ರಕ್ಕೆ ಹೆಚ್ಚಿಗೆ ನೀಡಬೇಕು. ಕಾಂಗ್ರೆಸ್, ವಿರೋಧ ಪಕ್ಷದವರು, ಬುದ್ದಿಜೀವಿಗಳು, ದೇಶದ್ರೋಹಿಗಳು ತಪ್ಪು ಕಲ್ಪನೆ ಕೊಟ್ಟು ಇದು ಮೋದಿ ಅವರ ಲಸಿಕೆ, ಇದು ಬಿಜೆಪಿ ಲಸಿಕೆ ಎಂದು ಅಪಪ್ರಚಾರ ಮಾಡಿ ಲಕ್ಷಾಂತರ ಲಸಿಕೆ ಹಾಳಾಗಲು ಕಾರಣರಾಗಿದ್ದಾರೆ ಎಂದು ಅವರು ಆರೋಪಿಸಿದರು.
ಈಗ ಜನರಲ್ಲಿ ಜಾಗೃತಿ ಬರುತ್ತಿದೆ. ವಿಜಯಪುರ ನಗರದಲ್ಲಿ ಶೇ. 100 ಲಸಿಕೆ ಹಾಕಲು ನಿರ್ಧರಿಸಿದ್ದೇವೆ. ಯಾರು ಈ ಲಸಿಕೆ ಬಗ್ಗೆ ಟೀಕೆ ಮಾಡುತ್ತಿದ್ದಾರೆ ಅವರು ಮನೆಯಲ್ಲಿಯೇ ಇರಲಿ. ಇಸ್ರೆಲ್ ಹೇಗೆ ಮಾಸ್ಕ್ ರಹಿತ ದೇಸವಾಗಿದೆಯೋ ಅದೇ ರೀತಿ ವಿಜಯಪುರವನ್ನು ಮಾಡುತ್ತೇವೆ.
ಸಿಎಂ ಜನರನ್ನು ಉಳಿಸುವ ಕೆಲಸ ಮಾಡಲಿ. ನಕಲಿ ಯೋಜನೆಗಳನ್ನು ಕೈ ಬಿಡಲಿ. ಅಲ್ಪಸಂಖ್ಯಾತರ ಅಭಿವೃದ್ಧಿಗೆ ರೂ. 1500 ಕೋ. ಚರ್ಚ್ ನಿರ್ಮಾಣ್ಕಕೆ ರೂ. 200 ಕೋ. ಯಂಥ ಯೋಜನೆಗಳನ್ನು ಕೈ ಬಿಡಲಿ ಎಂದು ಬಸನಗೌಡ ಪಾಟೀಲ ಯತ್ನಾಳ ಇದೇ ಸಂದರ್ಭದಲ್ಲಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶ್ರೀಹರಿ ಗೊಳಸಂಗಿ ಉಪಸ್ಥಿತರಿದ್ದರು.