ಕೊರೊನಾ ಗೆದ್ದವರ ಕಥೆ- ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ತಾನು ಗುಣವಾಗಿದ್ದಷ್ಟೇ ಅಲ್ಲ, ತಾಯಿಯನ್ನು ಬದುಕಿಸಿದ ಮಗನ ಸ್ಟೋರಿ ಇದು

ವಿಜಯಪುರ: ದಿನೇ ದಿನೇ ಹೆಚ್ಚುತ್ತಿರುವ ಕೊರೊನಾ ಜನಸಾಮಾನ್ಯರಲ್ಲಿ ಆತಂಕಕ್ಕೆ ಕಾರಣವಾಗಿದ್ದರೆ, ಮತ್ತೋಂದೆಡೆ ಕೊರೊನಾದಿಂದ ಗುಣಮುಖರಾಗುವವರ ಸಂಖ್ಯೆಯೂ ಹೆಚ್ಚಾಗುತ್ತಿರುವುದು ಬಸವ ನಾಡಿನ ಜನರ ಪಾಲಿಗೆ ಸ್ವಲ್ಪ ನೆಮ್ಮದಿಯನ್ನು ಮೂಡಿಸಿದೆ.

ಇದೇ ರೀತಿ ಕೊರೊನಾ ಸೋಂಕಿತನಾಗಿ ಆಸ್ಪತ್ರೆ ಸೇರಿದ್ದ ವಿಜಯಪುರ ನಗರದ ಜಲನಗರದ ಯುವಕ ಮತ್ತು ವ್ಯಾಪಾರಿ ಸಂಜೀವ ಗುನ್ನಾಪುರ ಸಾಕಷ್ಟು ಸಂಕಷ್ಟಗಳ ನಡುವೆಯೂ ತಾವೇ ನೈತಿಕ ಸ್ಥೈರ್ಯ ಹೆಚ್ಚಿಸಿಕೊಂಡು ಗುಣಮುಖರಾಗಿದ್ದಾರೆ. ಅಂಥವರ ಬಗ್ಗೆ ಬೆಳಕು ಚೆಲ್ಲಲು ಬಸವ ನಾಡು ನಿರ್ಧರಿಸಿದೆ. ಕೊರೊನಾ ಸೋಂಕಿನಿಂದ ಗುಣಮುಖರಾದವರು ತಮ್ಮ ಅನುಭವ ಹಂಚಿಕೊಂಡು ಈಗ ಚಿಕಿತ್ಸೆ ಪಡೆಯುತ್ತಿರುವವರಿಗೆ ನೈತಿಕ ಸ್ಥೈರ್ಯ ತುಂಬಿದರೆ ಅವರೂ ಕೂಡ ಬೇಗ ಗುಣಮುಖರಾಗುವುದರಲ್ಲಿ ಸಂಶಯವಿಲ್ಲ.

ಈ ಸ್ಟೋರಿಯಲ್ಲಿ ಯುವಕನೊಬ್ಬ ತಾನು ಗುಣಮುಖನಾದ ನಂತರ ತಾಯಿಗೂ ವಕ್ಕರಿಸಿದ ಕೊರೊನಾ ಸಂದರ್ಭದಲ್ಲಿ ಧೃತಿಗೆಡದೆ ತಾನೇ ಖುದ್ದಾಗಿ ಅದೇ ಆಸ್ಪತ್ರೆಯಲ್ಲಿ ನಿಂತು ನೈತಿಕವಾಗಿ ಬೆಂಬಲ ನೀಡಿ ಧೈರ್ಯ ತುಂಬಿ ಅವರನ್ನೂ ಗುಣಮುಖರಾಗುಲು ಪ್ರೇರೇಪಿಸಿದ್ದು ಮಾತ್ರ ಯಾವ ಸಾಧನೆಗೂ ಕಮ್ಮಿಯಿಲ್ಲ.

ಕೊರೊನಾ ಸೋಂಕು ಪತ್ತೆಯಾದಾಗ ಅನುಭವಿಸಿದ ಯಾತನೆ, ಕಂಡುಕೊಂಡ ಧೈರ್ಯ, ವೈದ್ಯರು ನೀಡಿದ ಚಿಕಿತ್ಸೆಯ ಬಗ್ಗೆ ಅವರು ಬಸವ ನಾಡಿನೊಂದಿಗೆ ಹಂಚಿಕೊಂಡ ಅನುಭವ ಇಲ್ಲಿದೆ.

ವಿಜಯಪುರ ನಗರದ ಜಲನಗರ ನಿವಾಸಿ ಸಂಜೀವ ಅರ್ಜುನ್ ಗುನ್ನಾಪುರ ವೃತ್ತಿಯಲ್ಲಿ ಒಬ್ಬ ವ್ಯಾಪಾರಿ. ಓದಿದ್ದು ನರ್ಸಿಂಗ್ ಕೋರ್ಸ್. ವಿಜಯಪುರ ಮತ್ತು ವಿದೇಶದಲ್ಲಿ ಕೆಲಸ ಮಾಡಿ ಬಂದು ಈಗ ತಾಯ್ನಾಡಿನಲ್ಲಿಯೇ ವ್ಯಾಪಾರ ಮಾಡುತ್ತಿದ್ದಾರೆ. ಅವರೇ ಹೇಳುವಂತೆ, ಏ. 29 ರಂದು ಕೊರೋನ ಲಕ್ಷಣಗಳು ಕಂಡಿದ್ದವು. ವಿಪರೀತ ಜ್ವರ, ಮೈಕೈನೋವು ಮತ್ತು ನೆಗಡಿ ಬಂದಿತ್ತು. ತಕ್ಷಣವೇ ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ಆಸ್ಪತ್ರೆಗೆ ತೆರಳಿ ಆರ್ ಟಿ ಪಿ ಸಿ ಆರ್ ಟೆಸ್ಟ್ ಮಾಡಿಸಿದಾಗ ಕೊರೊನಾ ಪಾಸಿಟಿವ್ ದೃಢಪಟ್ಟಿತು. ತಕ್ಷಣ HRCTC ಸ್ಕ್ಯಾನ್ ಮಾಡಿಸಿದಾಗ ಅದರಲ್ಲಿ 18 score ಬಂತು. ತಕ್ಷಣವೇ ಸ್ಯಾಚುರೇಶನ್ ಚೆಕ್ ಮಾಡಿದಾಗ ಅದು 80 ತೋರಿಸಿತು. ಸ್ನೇಹಿತರ ಸಹಾಯದಿಂದ ಬಿ ಎಲ್ ಡಿ ಇ ಆಸ್ಪತ್ರೆಗೆ ದಾಖಲಾದೆ. ಆಗ, ಅಂದಿನ ಉಪಕುಲಪತಿ ಡಾ. ಎಂ. ಎಸ್. ಬಿರಾದಾರ ಅವರ ಸಲಹೆಯಂತೆ ತಕ್ಷಣವೇ ಐಸಿಯು ಗೆ ಶಿಫ್ಟ್ ಮಾಡಲಾಯಿತು. ಆಕ್ಸಿಜನ್ ಹಾಕಲಾಯಿತು. ರೆಮಿಡಿಸಿವಿರ್ ಎಂಜೆಕ್ಷನ್ ನೀಡಲಾಯಿತು.

ನಾನು ಆಸ್ಪತ್ರೆಯ ಐಸಿಯು ಶಿಫ್ಟ್ ಆದ ತಕ್ಷಣ ಸ್ವಲ್ಪ ಭಯ ಬಂತು. ಆದರೆ ನಾನು ಧೈರ್ಯ ಕಳೆದುಕೊಳ್ಳಲಿಲ್ಲ. ನಾನು ಹೋದ ದಿನ ನನ್ನ ಪಕ್ಕದ ಬೆಡ್ಡಿನ ಲ್ಲಿ 45 ವರ್ಷದ ಯುವಕ ಕೋರೋಣಾದಿಂದ ಭಯಬೀತನಾಗಿ ಪ್ರಾಣವನ್ನೇ ಕಳೆದುಕೊಂಡ. ಅವನ ರಿಪೋರ್ಟ್ಸ್ ನೋಡಿದಾಗ ಆಶ್ಚರ್ಯ ಪಟ್ಟೆಯ ಏಕೆಂದರೆ ಅವನ HRCTC ಸ್ಕೋರ್ ಕೇವಲ 12 ಮತ್ತು ಬ್ಲಡ್ ರಿಪೋರ್ಟ್ ಕೂಡ ನನ್ನ ವರದಿಗಿಂತ ಕಡಿಮೆಯಿತ್ತು. ಅವನು ಭಯಭೀತನಾಗಿ ತನ್ನ ಪ್ರಾಣವನ್ನು ಕಳೆದುಕೊಂಡ. ಆದರೆ ಒಂಬತ್ತು ದಿನಗಳ ಕಾಲ ಬಿ ಎಲ್ ಡಿ ಇ ವೈದ್ಯರ ಸೂಕ್ತ ಚಿಕಿತ್ಸೆ ಮತ್ತು ನೈತಿಕವಾಗಿ ಧರ್ಯ ತಂದುಕೊಂಡ ಕಾರಣ ಆಸ್ಪತ್ರೆಯಿಂದ ಡಿಶ್ಚಾರ್ಜ್ ಆಗಿ, ಏ. 9 ರಂದು ಮನೆಗೆ ಬಂದೆ.

ಕೊರೊನಾ ಬಂತೆಂದು ಧೈರ್ಯ ಕಳೆದುಕೊಳ್ಳಬಾರದು. ಆಸ್ಪತ್ರೆ ಬಂದ ತಕ್ಷಣ ನಾನು ಇಲ್ಲಿ ಆರಾಮಾಗಿ ಮನೆಗೆ ವಾಪಸ್ ಹೋಗುತ್ತೇನೆ ಅಂತ ನಿರ್ಧಾರ ಮಾಡಬೇಕು. ನಿಮ್ಮ ಪಕ್ಕದ ಬೆಡ್ ನಲ್ಲಿ ರೋಗಿಗೆ ಏನಾಗುತ್ತಿದೆ ಎಂದು ಯೋಚಿಸಬಾರದು. ಅವರನ್ನು ನೋಡಿ ಭಯಬೀತರಾಗಬಾರದು. ನಿಮ್ಮ ಗುರಿ ನಿಮ್ಮ ಪ್ರಾಣವನ್ನು ಉಳಿಸಿಕೊಳ್ಳುವುದು ಅಷ್ಟೇ. ಕೊರೋನಾಗೆ ಧೈರ್ಯವೇ ಔಷಧಿ ಎಂಬುದು ನನ್ನ ಬಲವಾದ ನಂಬಿಕೆ.

ನಾನು ಆಸ್ಪತ್ರೆಯಿಂದ ಡಿಶ್ಚಾರ್ಜ್ ಆಗಿ ಬಂದಿದ್ದೆ ತಡ, ಮೇ 2 ರಂದು ನಮ್ಮ ತಾಯಿ ಶಂಕುಂತಲಾ ಅರ್ಜುನ ಗುನ್ನಾಪುರ ಅವರಲ್ಲಿಯೂ ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದವು. ಮೊದಲೇ ಅವರಿಗೆ ವಿಪರೀತ ಅಸ್ತಮಾ ಬೇರೆ ಇತ್ತು. ಉಸಿರಾಟದ ತೀವ್ರ ತೊಂದರೆಯಾದಾಗ ಅವರನ್ನೂ ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ದಾಖಲಿಸಿದೇವು. ಆಗ ಅವರ ಸ್ಯಾಚುರೇಶನ್ 70 ಇ್ತತು. ನನಗೆ ಬಹಳ ಭಯ ಆಯ್ತು. ಆದರೆ ನಾನು ಧೈರ್ಯ ಕಳೆದುಕೊಳ್ಳಲಿಲ್ಲ. 15 ದಿನ ಐಸಿಯು ನಲ್ಲಿ ಚಿಕಿತ್ಸೆ ನೀಡಲಾಯಿತು. ದಿನದಿಂದ ದಿನಕ್ಕೆ ಅವರ ಆರೋಗ್ಯದಲ್ಲಿ ಏರುಪೇರಾಯಿತು. ಆದರೂ ನಾನು ನಮ್ಮ ತಾಯಿಗೆ ಧೈರ್ಯ ಹೇಳುತ್ತ ಅವರಲ್ಲಿ ನೈತಿಕ ಸ್ಥೈರ್ಯ ತುಂಬುತ್ತ ವೈದ್ಯರ ಸೂಕ್ತ ಚಿಕಿತ್ಸೆ ಕೊಡಿಸಿದಾಗ ಅವರು ಮೇ 15 ರಂದು ಗುಣಮುಖರಾಗಿ ಆಸ್ಪತ್ರೆಯಿಂದ ಡಿಶ್ಚಾರ್ಜ್ ಆಗಿ ಈಗ ಮನೆಗೆ ಬಂದಿದ್ದಾರೆ. ನಮ್ಮ ತಾಯಿಯ ಐ ಸಿ ಯು ನಲ್ಲಿದ್ದಾಗ ಬಹಳ ಗಾಬರಿಯಾಗಿದ್ದರು. ಡಾಕ್ಟರ್ ಮತ್ತು ಅಲ್ಲಿನ ನರ್ ಗಳ ಸೇವೆಯಿಂದ ಗುಣಮುಖರಾಗಿ ಇಂದು ಮನೆಗೆ ವಾಪಸಾಗಿದ್ದಾರೆ.

ಇಲ್ಲಿ ನಿಮಗೆಲ್ಲ ನಾನು ಹೇಳುತ್ತೇನೆ. ಆಸ್ಪತ್ರೆ ಹೋದ ನಂತರ ಧೈರ್ಯ ಕಳೆದು ಕೊಳ್ಳಬೇಡಿ. ವೈದ್ಯರ ಸಲಹೆಯಂತೆ ಅವರು ನೀಡುವ ಔಷಧಿಯನ್ನು ತಪ್ಪದೆ ತೆಗೆದುಕೊಳ್ಳಬೇಕು. ಇದರಿಂದ ಬೇಗ ಗುಣಮುಖರಾಗಿ ಮನೆಗೆ ಮರಳು ಸಹಾಯವಾಗುತ್ತದೆ.

ತಾನು ಗುಣಮುಖನಾಗಿದ್ದಷ್ಟೇ ಅಲ್ಲ, ಗುಣಮುಖನಾದ ನಂತರ ಕೇವಲ ಮೂರೇ ದಿನಗಳಲ್ಲಿ ತಾಯಿಯನ್ನು ಆಸ್ಪತ್ರೆಗೆ ಸೇರಿಸಿ ಅದೇ ಆಸ್ಪತ್ರೆಯಲ್ಲಿ ತಾಯಿಯ ಜೊತೆಗಿದ್ದು, ಧೈರ್ಯ ತುಂಬಿ ಅವಳನ್ನು ಗುಣಮುಖಳಾಗುವಂತೆ ಮಾಡಿದ ಇಂಥ ಮಗನಿಗೊಂದು ಹ್ಯಾಟ್ಸಾಫ್ ಹೇಳಲೇಬೇಕು.

Leave a Reply

ಹೊಸ ಪೋಸ್ಟ್‌