ವಿಜಯಪುರ: ಕೊರೊನಾದಿಂದ ಗುಣಮುಖರಾಗಿದ್ದ ವ್ಯಕ್ತಿಗಳಲ್ಲಿ ಕಾಣಿಸಿಕೊಳ್ಳುವ ಕಪ್ಪು ಶಿಲೀಂದ್ರ(ಬ್ಲಾಕ್ ಫಂಗಸ್) ರೋಗಿಗಳ ಚಿಕಿತ್ಸೆಗೆ ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ಆರಂಭಿಸಲಾಗಿದೆ ಎಂದು ಬಿ ಎಲ್ ಡಿ ಇ ಡೀಮ್ಡ್ ವಿವಿ ಉಪಕುಲಪತಿ ಡಾ. ಆರ್. ಎಸ್. ಮುಧೋಳ ತಿಳಿಸಿದ್ದಾರೆ.
ನೆರೆಯ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆ, ವಿಜಯಪುರದ ಪಕ್ಕದ ಕಲಬುರಗಿ, ಬಾಗಲಕೋಟೆ, ಸೇರಿದಂತೆ ನಾನಾ ಜಿಲ್ಲೆಗಳ ಒಟ್ಟು 25 ರೋಗಿಗಳು ಇಲ್ಲಿ ಬ್ಲಾಕ್ ಫಂಗಸ್ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ನಿನ್ನೆ ಮೂರು ಗುಣಮುಖರಾಗಿ ಡಿಶ್ಚಾರ್ಜ್ ಆಗಿದ್ದಾರೆ. ಇಂದು ಆರು ಜನರಿಗೆ ಶಸ್ತ್ರ ಚಿಕಿತ್ಸೆ ನೆರವೇರಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಈ ಮಧ್ಯೆ, ಬ್ಲಾಕ್ ಫಂಗಸ್ ರೋಗಿಗಳ ಚಿಕಿತ್ಸೆಗೆ ಅಗತ್ಯವಾಗಿರುವ ಆಂಪೊಟೆರಿಸಿನ್ ಔಷಧಿ ಪೂರೈಕೆ ಸರಕಾರದ ನಿಯಂತ್ರಣದಲ್ಲಿದ್ದು, ಅಗತ್ಯ ಪ್ರಮಾಣದಲ್ಲಿ ಪೂರೈಕೆ ಆಗುತ್ತಿಲ್ಲ. ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಈ ಔಷಧವನ್ನು ಪೂರೈಸಿದರೆ, ಪರಿಣಾಮಕಾರಿ ಚಿಕಿತ್ಸೆ ಒದಗಿಸಲು ಸಹಕಾರಿಯಾಗುತ್ತದೆ ಎಂದು ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ. ಅರವಿಂದ ಪಾಟೀಲ ತಿಳಿಸಿದ್ದಾರೆ.