ಜಿಲ್ಲೆಯಲ್ಲಿ ಬ್ಯಾಕ್ ಫಂಗಸ್ ಸಂಖ್ಯೆ 50ಕ್ಕೇರಿಕೆ- ಆರ್ ಎಂ ಪಿ ವೈದ್ಯರು ಕೊರೊನಾಗೆ ಚಿಕಿತ್ಸೆ ನೀಡಿದರೆ ಕ್ರಮ- ಪಿ. ಸುನೀಲ ಕುಮಾರ

ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ಗಂಭೀರ ಸ್ವರೂಪದ ಕೊರೊನಾ ಸೋಂಕಿತ ಪ್ರಕರಣಗಳಲ್ಲಿ ಇಳಿಮುಖ ಆರಂಭವಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ನಿಯಂತ್ರಣ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ನೀಡಿದರು.

ನಿರಂತರ ಮತ್ತು ಗುಣಮಟ್ಟದ ಕೊರೊನಾ ರೋಗ ಲಕ್ಷಣ ಪರೀಕ್ಷೆ, ಆ್ಯಪ್ ಮೂಲಕ ಪ್ರತಿದಿನ ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯರೊಂದಿಗೆ ಬೆಡ್ ನಿರ್ವಹಣೆ, ನಿಗದಿತ ತಂತ್ರಾಂಶದಲ್ಲಿ ಕೊರೊನಾ ರೋಗಿಗಳ ದಾಖಲು, ಬಿಡುಗಡೆ, ಸಾವು, ನೋಡಲ್ ಅಧಿಕಾರಿಗಳಿಂದ ನಿರಂತರ ಪರಿಶೀಲನೆ ಹಾಗೂ ಅವುಗಳ ಮೇಲೆ ನಿಗಾ ಸೇರಿದಂತೆ ನಿರಂತರ ಮೇಲ್ವಿಚಾರಣೆ ಯಿಂದಾಗಿ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಿಸಲು ಪರವಾಗಿಲ್ಲ ಎನ್ನುವ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಇದರಿಂದಾಗಿ ಗಂಭೀರ ರೀತಿಯ ಪ್ರಕರಣಗಳಲ್ಲಿ ಈಗ ಇಳಿಮುಖ ಆರಂಭವಾಗಿದೆ ಎಂದು ಅವೆಉ ತಿಳಿಸಿದರು.

ಈ ಹಿಂದೆ ಗಂಭೀರ ಸ್ವರೂಪದ ಪ್ರಕರಣಗಳಲ್ಲಿ ಸಿಟಿ ಸ್ಕ್ಯಾನ್ ಗಾಗಿ ಕಳೆದ ಮೇ 12 ರವರೆಗೆ ಪ್ರತಿದಿನ 153 ರಿಂದ 173 ಜನ ಬರುತ್ತಿದ್ದರು. ಈಗ ಸಿಟಿ ಸ್ಕ್ಯಾನ್ ಗೆ ಬರುವವರರ ಸಂಖ್ಯೆಯಲ್ಲಿ ಇಳಿಮುಖವಾಗಿದ್ದು, ಗುರುವಾರ 20 ಜನ ಮಾತ್ರ ಸಿಟಿ ಸ್ಕ್ಯಾನ್ ಮಾಡಿಸಿಕೊಂಡಿದ್ದಾರೆ. ರೆಮಿಡಿಸಿವಿರ ಎಂಜೆಕ್ಷನ್ ಕೂಡ ಈ ಹಿಂದೆ ಹೆಚ್ಚಿನ ರೀತಿಯಲ್ಲಿ ಬಳಕೆಯಾಗುತ್ತಿತ್ತು. ಈಗ ಈ ಲಸಿಕೆ ಬಳಕೆ ಪ್ರಮಾಣವೂ ಇತ್ತೀಚಿಗೆ ಇಳಿಕೆಯಾಗುತ್ತಿದೆ ಎಂದು ಪಿ. ಸುನೀಲ ಕುಮಾರ ತಿಳಿಸಿದರು.

ಏಪ್ರಿಲ್ ತಿಂಗಳ ಕೊರೊನಾ ಸಾವುಗಳ ಸಂಖ್ಯೆಯನ್ನು ಮೇ ತಿಂಗಳಲ್ಲಿ ತೋರಿಸಿದ ಹಿನ್ನೆಲೆಯಲ್ಲಿ ಮೇ ತಿಂಗಳಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿ ತೋರಿಸಲಾಗಿದೆ ಎಂದು ತಿಳಿಸಿದ ಅವರು, ಕೊರೊನಾ ರೋಗ ಲಕ್ಷಣ ಕಂಡು ಬಂದ ತಕ್ಷಣ ಚಿಕಿತ್ಸೆಗೆ ಒಳಪಡಿಸುವುದರಿಂದ ಸಾವಿನ ಪ್ರಮಾಣ ತಗ್ಗಿಸಲು ಸಹಾಯವಾಗಲಿದೆ. ಈ ಹಿನ್ನಲೆಯಲ್ಲಿ ಕೊರೊನಾ ಲಕ್ಷಣ ಕಂಡು ಬಂದ ತಕ್ಷಣ 5 ದಿನದೊಳಗೆ ಚಿಕಿತ್ಸೆಗೆ ಒಳಪಡಲು ಸಾರ್ವಜನಿಕರು ಸಹ ಸ್ವಯಂ ಪ್ರೇರಿತವಾಗಿ ಮುಂದೆ ಬರುವಂತೆ ಕರೆ ನೀಡಿದರು.

ಸದ್ಯ ನಗರ ಪ್ರದೇಶಗಳಲ್ಲಿ ಸೋಂಕಿತರ ಪ್ರಮಾಣದಲ್ಲಿ ಇಳಿಮುಖ ಕಂಡು ಬರುತ್ತಿದ್ದು, ಗ್ರಾಮಾಂತರ ಪ್ರದೇಶಗಳಲ್ಲಿ ಸೋಂಕಿತರ ಪ್ರಮಾಣ ಹೆಚ್ಚಾಗಿದೆ‌. ಈ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳತ್ತ ಈಗ ವಿಶೇಷ ಗಮನ ಕೇಂದ್ರೀಕರಿಸಲಾಗಿದೆ ಎಂದು ಅವರು ತಿಳಿಸಿದರು.

ಜಿಲ್ಲೆಯಲ್ಲಿ ಕೊರೊನಾ ರೋಗಿಗಳ ಸಾವುಗಳನ್ನು ತಗ್ಗಿಸಲು, ಕೋರೊನಾ ರೋಗ ಲಕ್ಷಣ ವಿರುವವರನ್ನು ಗುರುತಿಸಿ ಹೋಂ ಐಸೋಲೇಷನ್ ಮಾಡಲಾಗುತ್ತಿದೆ. ಇದರಿಂದ ಸಾವಿನ ಪ್ರಮಾಣ ತಗ್ಗಿಸಲು ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಜಿಲ್ಲೆಯಲ್ಲಿ ಒಳ್ಳೆಯ ರೀತಿಯ ಚಿಕಿತ್ಸೆ ನೀಡಲಾಗುತ್ತಿರುವುದರಿಂದ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಉತ್ತಮ ಚಿಕಿತ್ಸೆಯ ಹಿನ್ನೆಲೆಯಲ್ಲಿ ಬೇರೆ ಜಿಲ್ಲೆಗಳ 100 ಕಿಂತ ಹೆಚ್ಚು ರೋಗಿಗಳು ನಮ್ಮ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪಿ. ಸುನೀಲ ಕುಮಾರ ತಿಳಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಪಂಚಾಯಿತಿ ಕಾರ್ಯಪಡೆ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಕಳೆದ 4 ದಿನಗಳಿಂದ ಸುಮಾರು 2000 ಸಾವಿರ ಜನರಲ್ಲಿ ಕೊರೊನಾ ರೋಗ ಲಕ್ಷಣ ಇರುವವರನ್ನು ಪತ್ತೆಹಚ್ಚಲಾಗಿದೆ. ಅದರಲ್ಲಿ 231 ಪಾಸಿಟಿವ್ ಪ್ರಕರಣಗಳು ಧೃಡಪಟ್ಟಿವೆ. ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಲಕ್ಷಣ ಉಳ್ಳವರನ್ನು ತೀವ್ರಗತಿಯಲ್ಲಿ ಪತ್ತೆ ಹಚ್ಚಲಾಗುತ್ತಿದೆ ಎಂದು ಅವರು ತಿಳಿಸಿದರು.

ಬ್ಲ್ಯಾಕ್ ಫಂಗಸ್ ಸೋಂಕಿತರ ಸಂಖ್ಯೆ 50ಕ್ಕೆ ಏರಿಕೆ

ಈ ಮಧ್ಯೆ ವಿಜಯಪುರ ಜಿಲ್ಲೆಯಲ್ಲಿ ಈ ವರೆಗೆ 50 ಬ್ಲ್ಯಾಕ್ ಫಂಗಸ್ ಪ್ರಕರಣಗಳು ದಾಖಲಾಗಿವೆ. ನೋಡಲ್ ಅಧಿಕಾರಿಯಾಗಿ ಅನುಭವಿ ಅಧಿಕಾರಿ ಡಾ. ಔದ್ರಾಮ್ ಅವರನ್ನು ಸಹ ನೇಮಿಸಲಾಗಿದೆ. ಖಾಸಗಿ ಆಸ್ಪತ್ರೆಗಳೊಂದಿಗೆ ನಿರಂತರ ಸಂಪರ್ಕ ಹೊಂದಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ಇಂಥ ರೋಗಿಗಳ ಚಿಕಿತ್ಸೆ ಕುರಿತು ಮಾಹಿತಿಯನ್ನು ಮುಚ್ಚಿಟ್ಟು ಚಿಕಿತ್ಸೆ ನೀಡುವಂತಿಲ್ಲ. ಅಲ್ಲದೇ, ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ತಕ್ಷಣ ಚಿಕಿತ್ಸೆ ಒದಗಿಸಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಗ್ರಾಮಾಂತರ ಪ್ರದೇಶದಲ್ಲಿ ಆರ್ ಎಮ್ ಪಿ ವೈದ್ಯರು ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವುದು ಮತ್ತು ವಿಳಂಬ ಮಾಡುವುದನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಈಗಾಗಲೇ ಗ್ರಾಮ ಪಂಚಾಯಿತಿ ಮಟ್ಟದ ಕಾರ್ಯಪಡೆಗಳು ಕೊರೊನಾ ಸೋಂಕಿತರು ಕಂಡು ಬಂದ ತಕ್ಷಣ ಆಯಾ ಪಿಡಿಓ ಗಳ ಮೂಲಕ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಜಿಲ್ಲಾಸ್ಪತ್ರೆಗೆ ಸಂಪರ್ಕ ಸಾಧಿಸಿ ರೋಗಿಗಳಿಗೆ ಚಿಕಿತ್ಸೆ ಒದಗಿಸಲು ನೆರವಾಗುತ್ತಿದ್ದು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿಗಳು ಮತ್ತು ಸಂಬಂಧಿಸಿದ ವೈದ್ಯರು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದಯ ಪ್ರಶಂಸೆ ವ್ಯಕ್ತಪಡಿಸಿದರು.

ಈ ಸುದ್ದಿಗೋಷ್ಠಿಯಲ್ಲಿ ವಿಜಯಪುರ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌