ಖಾಸಗಿ, ಅನುದಾನಿತ, ಸರಕಾರಿ ಶಾಲೆ, ಕಾಲೇಜುಗಳ ಸಿಬ್ಬಂದಿಗೆ ಪರಿಹಾರ ಘೋಷಿಸಿ- ಸಿಎಂ, ಶಿಕ್ಷಣ ಸಚಿವರಿಗೆ ಪರಿಷತ ಸದಸ್ಯ ಅರುಣ ಶಹಾಪುರ ಪ್ರತ್ಯೇಕ ಪತ್ರ

ವಿಜಯಪುರ: ಖಾಸಗಿ, ಅನುದಾನಿತ ಹಾಗೂ ಸರಕಾರಿ ಶಾಲೆ, ಕಾಲೇಜುಗಳ ಸಿಬ್ಬಂದಿಗಳ ಪರ ವಿಧಾನ ಪರಿಷತ ಬಿಜೆಪಿ ಸದಸ್ಯ ಅರುಣ ಶಹಾಪುರ ಸಿಎಂ ಮತ್ತು ಶಿಕ್ಷಣ ಸಚಿವರಿಗೆ ಪ್ರತ್ಯೇಕ ಪತ್ರ ಬರೆದಿದ್ದಾರೆ.

ಈ ಪತ್ರದ ಪ್ರತಿಗಳು ಬಸವ ನಾಡಿಗೆ ಲಭ್ಯವಾಗಿವೆ. ಸಿಎಂ ಗೆ ಪತ್ರ ಬರೆದಿರುವ ಪತ್ರದಲ್ಲಿ ಅರುಣ ಶಹಾಪುರ ಅವರು, ಖಾಸಗಿ, ಅನುದಾನಿತ ಮತ್ತು ಸಹಕಾರಿ ಶಾಲೆ ಹಾಗೂ ಕಾಲೇಜುಗಳ ಸಿಬ್ಬಂದಿಗೆ ಪರಿಹಾರ ಘೋಷಿಸಬೇಕು ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ವಿಧಾನ ಪರಿಷತ ಬಿಜೆಪಿ ಸದಸ್ಯ ಅರುಣ ಶಹಾಪುರ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ಬರೆದಿರುವ ಪತ್ರ

ಕೋವಿಡ್ ಎರಡನೇ ಅಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಮತ್ತು ಲಾಕಡೌನ್ ನಿಂದ ಸಂಕಷ್ಟದಲ್ಲಿರುವ ಕೃಷಿಕರು, ಕ್ಷೌರಿಕರು, ಶ್ರಮಿಕರು, ಆಟೋ-ಟ್ಯಾಕ್ಸಿ ಚಾಲಕರು, ಕಾರ್ಮಿಕರು ಸೇರಿದಂತೆ ಹಲವು ಸಮುದಾಯಗಳಿಗೆ ಪರಿಹಾರ ಘೋಷಣೆ ಮಾಡಿರುವುದನ್ನು ಸ್ವಾಗತಿಸುತ್ತೇನೆ.

ಅದೇ ರೀತಿ ಕೊರೊನಾ ಮೊದಲನೇ ಮತ್ತು ಎರಡನೇ ಅಲೆಗಳ ಮಧ್ಯೆ ಅತೀ ಹೆಚ್ಚು ಸಮಸ್ಯೆಗೊಳಗಾಗಿರುವ ಖಾಸಗಿ, ಅನುದಾನಿತ ಹಾಗೂ ಸರಕಾರಿ ಶಾಲಾ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅನುದಾನ ರಹಿತ ಸಿಬ್ಬಂದಿ ಮತ್ತು ಅತಿಥಿ ಉಪನ್ಯಾಸಕರು, ಶಿಕಅಷ ಸಿಬ್ಬಂದಿ, ಹೊರ ಮೂಲಗಳಿಂದ ನೇಮಕವಾಗಿರುವ ಸಿಬ್ಬಂದಿಯವರು ಹತಾಶೆಯ ಪರಿಸ್ಥಿತಿ ತಲುಪಿದ್ದಾರೆ. ಅವರಿಗೆ ದಿನನಿತ್ಯದ ಬದುಕು ಸಾಗಿಸುವುದು ಕಷ್ಟವಾಗಿದೆ. ಎಲ್ಲ ಶಿಕ್ಷಕ ಮತ್ತು ಪದವೀಧರ ಕ್ಷೇತ್ರಗಳಿಂದ ಆಯ್ಕೆಯಾದ ವಿಧಾನ ಪರಿಷತ ಸದಸ್ಯರು ಕಳೆದ ಒಂದು ವರ್ಷದಿಂದ ಇವರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಸದನದ ಒಳಗೆ ಮತ್ತು ಹೊರಗೆ ಹಾಗೂ ಹೋರಾಟದ ಮೂಲಕ ಒತ್ತಾಯಿಸಿದ್ದೇವೆ. ಆದರೆ, ಸರಕಾರದಿಂದ ಸ್ಪಂದನೆ ಸಿಗದಿರುವುದು ನಿರಾಶೆ ಮೂಡಿಸಿದೆ. ಈ ಬಾರಿಯಾದರೂ ಸರಕಾರ ಈ ಸಿಬ್ಬಂದಿಗೆ ಪರಿಹಾರದ ಪ್ಯಾಕೇಜ್ ಘೋಷಣೆ ಮಾಡಿಕೊಡುತ್ತದೆ ಎಂಬ ವಿಶ್ವಾಸ ಹೊಂದಿದ್ದೇವು.

ಆದರೆ, ಈ ವರ್ಗಕ್ಕೆ ಈ ಬಾರಿಯೂ ಯಾವುದೇ ಸಂಕಷ್ಟದ ಪರಿಹಾರ ಘೋಷಣೆ ಮಾಡದಿರುವುದು ಅತಿದೊಡ್ಡ ಅಸಮಾಧಾನದ ಅಲೆಯನ್ನು ಸೃಷ್ಠಿಸಿದೆ. ಸರಕಾರ ಈ ಪರಿಸ್ಥಿತಿ ನಮ್ಮನ್ನು ಹತಾಶೆಗೆ ದೂಡುತ್ತಿದೆ. ಸರಕಾರದ ವಿರುದ್ಧ ಈ ಸಮೂಹದಲ್ಲಿ ತಿರಸ್ಕಾರ ಭಾವನೆ ಮೂಡುತ್ತಿದೆ. ಆದ್ದರಿಂದ ಸರಕಾರ ಕೂಡಲೇ ಇವರಿಗೆ ಯಾವುದಾದರೂ ರೂಪದಲ್ಲಿ ಸೂಕ್ತ ಪರಿಹಾರದ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಅರುಣ ಶಹಾಪುರ ಸಿಎಂ ಬಿ. ಎಸ್. ಯಡಿಯೂರಪ್ಪ ಮತ್ತು ಶಿಕ್ಷಣ ಸಚಿವ ಎಸ್. ಸುರೇಶಕುಮಾರ ಅವರಲ್ಲಿ ಮನವಿ ಮಾಡಿದ್ದಾರೆ.

ವಿಧಾನ ಪರಿಷತ ಬಿಜೆಪಿ ಸದಸ್ಯ ಅರುಣ ಸಹಾಪುರ ಶಿಕ್ಷಣ ಸಚಿವ ಎಸ್. ಸುರೇಶಕುಮಾರ ಅವರಿಗೆ ಬರೆದಿರುವ ಪತ್ರ

ಈ ಮಧ್ಯೆ, ಶಿಕ್ಷಣ ಸಚಿವ ಎಸ್. ಸುರೇಶಕುಮಾರ ಅವರಿಗೆ ಪ್ರತ್ಯೇಕ ಪತ್ರ ಬರೆದಿರುವ ಅರುಣ ಶಹಾಪುರ, ಖಾಸಗಿ, ಅನುದಾನಿತ ಸಿಕ್ಷಣ ಸಂಸ್ಥೆಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಬಡ್ಡಿರಹಿತ ಸಾಲವನ್ನು ನೀಡಬೇಕು. ಕಂತುಗಳಲ್ಲಿ ಮರುಪಾವತಿ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಲು ಈ ಸಂಸ್ಥೆಗಳು ದೊಡ್ಡ ಪ್ರಮಾಣದಲ್ಲಿ ಸಾಲವನ್ನು ಮಾಡಿದ್ದಾರೆ. ಅವರ ಸ್ಥಿತಿ ಶೋಚನೀಯವಾಗಿದೆ. ಕೊರೊನಾ ಮೊದಲ ಮತ್ತು ಎರಡನೇ ಅಲೆಗಳ ಮಧ್ಯೆ ಸಿಲುಕಿ ಸಿಲುಕಿ ಸಂಕಷ್ಟದಲ್ಲಿರುವ ಈ ಸಂಸ್ಥೆಗಳಿಗೆ ಬ್ಯಾಂಕುಗಳು ನೊಟೀಸ್ ನೀಡಿ ಮುಟ್ಟುಗೋಲು ಹಾಕಿಕೊಳ್ಳಲು ಮುಂದಾಗುತ್ತಿರುವುದು ಈ ಶಿಕ್ಷಣ ಸಂಸ್ಥೆಗಳ ಅಳಿವು-ಉಳಿವಿನ ಪ್ರಶ್ನೆ ಮೂಡಿಸಿದೆ.

ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಈ ಸಂಸ್ಥೆಗಳಿಗೆ ಬಡ್ಡಿರಹಿತ ಸಾಲ ಒದಗಿಸಿ ಕಂತುಗಳಲ್ಲಿ ಮರುಪಾವತಿ ಮಾಡಲು ಅವಕಾಶ ಮಾಡಿಕೊಡುವ ಯೋಜನೆಯನ್ನು ಘೋಷಿಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

Leave a Reply

ಹೊಸ ಪೋಸ್ಟ್‌