ವಿಜಯಪುರ: ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ ಮುಶ್ರಿಫ್ ಅವರು ಕೊರೊನಾ ಸಂಕಷ್ಟದಲ್ಲಿರುವ ಬಡವರ ನೆರವಿಗೆ ಧಾವಿಸಿದ್ದಾರೆ.
ರಾಜೀವ ಗಾಂಧಿ ಅವರ ಪುಣ್ಯತಿಥಿಯ ಅಂಗವಾಗಿ ವಿಜಯಪುರ ನಗರದ ವಾರ್ಡ್ ಸಂಖ್ಯೆ 2 ಮತ್ತು ಖಾಜಾ ಅಮೀನ ದರ್ಗಾ, ಭಾಟ ಕಾಲನಿ ಮತ್ತು ಕಲ್ಲಿನ ಖಣಿ ಪ್ರದೇಶಗಳಿಗೆ ತೆರಳಿ ಲಾಕಡೌನ್ ನಿಂದ ಸಂಕಷ್ಟದಲ್ಲಿರುವ ಜನರಿಗೆ ದಿನಸಿ ಕಿಟ್ ವಿತರಿಸಿದರು. ಅಲ್ಲದೇ, ಕೊರೊನಾ ನಿಯಂತ್ರಣಕ್ಕೆ ಅಗತ್ಯವಾಗಿರುವ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧಿಯ ಕಿಟ್ ಗಳನ್ನೂ ಕೂಡ ವಿತರಿಸಿದರು.
ಕೊರೊನಾದಿಂದಾಗಿ ದಿನಗೂಲಿ ಕಾರ್ಮಿಕರು, ರಸ್ತೆ ಬದಿ ವ್ಯಾಪಾರಿಗಳು ಸೇರಿದಂತೆ ಕಡು ಬಡುವರು ತೀವ್ರ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಅಬ್ದುಲ್ ಹಮೀದ ಮುಶ್ರಿಫ್ ದಿನಸಿ ಮತ್ತು ಔಷಧಿ ಕಿಟ್ ಗಳನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜೀವ ಗಾಂಧಿ ಅವರ ಪುಣ್ಯತಿಥಿಯ ಅಂಗವಾಗಿ ದಿನಸಿ ಮತ್ತು ಔಷಧಿ ವಿತರಣೆ ಕಾರ್ಯಕ್ರಮ ಆಯೋಜಿಸಿದ್ದೇವೆ. ಎಲ್ಲರೂ ರಾಜೀವ ಗಾಂಧಿ ಅವರ ಆತ್ಮಕ್ಕೆ ಶಾಂತಿ ಸಿಗುವಂತೆ ಪ್ರಾರ್ಥಿಸಬೇಕು ಎಂದು ಮನವಿ ಮಾಡಿದರು.
ಅಷ್ಟೇ ಅಲ್ಲ, ಲಾಕಡೌನ್ ಹಿನ್ನೆಲೆಯಲ್ಲಿ ಜನ ಅನಾವಶ್ಯಕವಾಗಿ ಹೊರ ಬರದಂತೆ ತಡೆಯಲು ಹಗಲಿರುಳೂ ಶ್ರಮಿಸುತ್ತಿರುವ ಪೊಲೀಸ್ ಇಲಾಖೆಯ ಸಿಬ್ಬಂದಿಗೆ ಅಬ್ದುಲ್ ಹಮೀದ್ ಮುಶ್ರಿಫ್ ಅವರು ಮಾಸ್ಕ್, ಗ್ಲೌಸ್ ಮತ್ತು ಸ್ಯಾನಿಟೈಸರ್ ವಿತರಿಸಿದುರು.
ಈ ಸಂದರ್ಭದಲ್ಲಿ ವಿಜಯಪುರ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಮೀರ್ ಅಹ್ಮದ್ ಭಕ್ಷಿ, ಜಲನಗರ ಅಧ್ಯಕ್ಷೆ ಆರತಿ ಶಹಾಪುರ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.